ಬೆಂಗಳೂರು: ಐಟಿಐ ಲೇ ಔಟ್ ನಿವಾಸಿಯೊಬ್ಬರಿಗೆ ನಿಮಗೆ ರೂ.5 ಕೋಟಿ ಲಾಭ ಬಂದಿದೆ ಎಂದು ಆ್ಯಪ್ ನಲ್ಲಿ ನಂಬಿಸಿ, ಸೈಬರ್ ವಂಚಕರು ರೂ. 39.95 ಲಕ್ಷ ಪಡೆದು ವಂಚಿಸಿರುವ ಪ್ರಕರಣ ವರದಿಯಾಗಿದೆ. ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕರಾದ ದೂರುದಾರರು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ದೂರುದಾರರು, ವಾಟ್ಸಾಪ್ ನಲ್ಲಿ ಕಾಣಿಸಿಕೊಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಹಂತ ಹಂತವಾಗಿ ಷೇರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹಣ ಹೂಡಿಕೆ ಮಾಡುತ್ತಾ ಬಂದಿದ್ದರು. ಫೆಬ್ರುವರಿ 24 ರಿಂದ ಏಪ್ರಿಲ್ 12ರ ಅವಧಿಯಲ್ಲಿ 39.95 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಅಪ್ಲಿಕೇಶನ್‌ನಲ್ಲಿ ರೂ.5.19 ಕೋಟಿ ಲಾಭಾಂಶ ತೋರಿಸಿರುವಂತೆ ಸೃಷ್ಟಿ ಮಾಡಿ ದೂರುದಾರರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದಾರೆ. ಆದರೆ, ಹಣ ಪಡೆಯಲು ದೂರುದಾರರಿಗೆ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ದೂರುದಾರ ಪ್ರಶ್ನಿಸಿದಾಗ ಆರೋಪಿಗಳು ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಎಷ್ಟೇ ಪ್ರಯತ್ನಿಸಿದರೂ ವಂಚಕರು ಕರೆ ಸ್ವೀಕರಿಸಿರಲಿಲ್ಲ. ನಂತರ ಅನುಮಾನಗೊಂಡ ಅವರು ದೂರು ನೀಡಿದರು ಎಂದು ಪೊಲೀಸರು ಹೇಳಿದ್ದಾರೆ.