ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ಕೂಡಲೇ ಮೇಕೆದಾಟು, ಮಹದಾಯಿ ಯೋಜನೆ ಜಾರಿ: ಸಿ.ಎಂ ಸಿದ್ದರಾಮಯ್ಯ ಪುನರುಚ್ಚಾರ

Most read

ಬೆಳಗಾವಿ: ಭದ್ರಾ ಮೇಲ್ದಂಡೆ ಯೋಜನೆಗೆ ಇವತ್ತಿನವರೆಗೂ ಒಂದು ಪೈಸೆಯನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನೇ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ತಕ್ಷಣ ಈ ಎಲ್ಲಾ ನೀರಾವರಿ ಯೋಜನೆಗಳನ್ನು ಆರಂಭಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದರು.
ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ಇಲಾಖೆ ಸಹಾಯಧನದ ಅಡಿಯಲ್ಲಿ ಸುಮಾರು 400 ಕೋಟಿ ವೆಚ್ಚದ ಕೃಷಿ ಯಂತ್ರ ಮತ್ತು ಸಲಕರಣೆಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.
ಕೃಷಿಕರಿಗೆ ಶೇ40 ರಷ್ಟು, ಪರಿಶಿಷ್ಠ ಸಮಾಜದ ಕೃಷಿಕರಿಗೆ ಶೇ50 ರಷ್ಟು ರಿಯಾಯ್ತಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದ್ದೇವೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಯಂತ್ರಗಳ ಮೇಲಿನ ಅವಲಂಭನೆ ಹೆಚ್ಚಾಗಿದೆ. ಹೀಗಾಗಿ ರಿಯಾಯ್ತಿ ಬೆಲೆಯಲ್ಲಿ ಕೃಷಿಯಂತ್ರಗಳ ವಿತರಣೆ ಸರ್ಕಾರ ಮಾಡುತ್ತಿದೆ. ಕೃಷಿಭಾಗ್ಯವನ್ನು ಒಣಕೃಷಿ ಬೆಳೆಗಾರರಿಗೆ ಜಾರಿಗೆ ತಂದಿದ್ದೇವೆ. ಕಳೆದ ವರ್ಷ 25 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡ ಮಾಡಿಸಿದ್ದೇವೆ. ಈ ವರ್ಷ ಇದು ಇನ್ನೂ ಹೆಚ್ಚಾಗುತ್ತದೆ. ಕೃಷಿಹೊಂಡ ಬಹಳ ಉಪಯುಕ್ತ ಯೋಜನೆಯಾಗಿದೆ ಎಂದು ತಜ್ಞರು ವರದಿ ನೀಡಿದ್ದಾರೆ ಎಂದರು.
ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಆಹಾರ ಉತ್ಪಾದಕರಾದ ನಿಮ್ಮ ಕಾರಣದಿಂದ 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯನ್ನು ಕೊಡಲು ಶುರು ಮಾಡಿದೆವು ಎಂದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ್ ಜಾರಕಿಹೊಳಿ, ಚಲುವರಾಯಸ್ವಾಮಿ, ಭೈರತಿ ಸುರೇಶ್, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಆಸಿಫ್ ಸೇಠ್, ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ ಶ್ಯಾಮ್ ಘಾಟಗೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತಿತರರು ಉಪಸ್ಥಿತರಿದ್ದರು.

More articles

Latest article