ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆ ಈಗ ಅಪ್ರಸ್ತುತ. ಈ ಬಗ್ಗೆ ನಾನು ಯಾವುದೇ ಅಭಿಪ್ರಾಯ ನೀಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಒಂದಷ್ಟು ಸತ್ಯ ಹೇಳಿದರೆ ಹೊಗಳಿಕೆ ಎಂದು ಭಾವಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹದಿನಾರು ಬಜೆಟ್ ಕೊಟ್ಟಿದ್ದು ಸತ್ಯ ಅಲ್ಲವೇ? ಅವರು ರಾಜ್ಯದಲ್ಲಿ ಆರ್ಥಿಕ ಸಮನ್ವಯತೆ ಸಾಧಿಸಿದ್ದಾರೆ. ಆ ಸತ್ಯವನ್ನೇ ನಾನು ಹೇಳಿದ್ದೇನೆ. ಇದನ್ನೇ ಹೊಗಳಿಕೆ ಅಂದುಕೊಂಡರೆ ಏನು ಮಾಡಲಿ ಎಂದರು.
ದಶಕಗಳಿಂದ ಬೆಂಗಳೂರು– ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯ ಸಮಸ್ಯೆ ಬಗೆಹರಿದಿಲ್ಲ. ಈ ಯೋಜನೆಗೆ ಸರ್ಕಾರ ಜಮೀನು ಕೊಟ್ಟಿದೆ. 300ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಕಾಯುತ್ತಿವೆ. ಈ ಸಮಸ್ಯೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅರ್ಧ ಗಂಟೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಆದ್ದರಿಂದ ಹೆಚ್ಚಿನ ಚರ್ಚೆ ನಡೆಸುವ ಉದ್ದೇಶದಿಂದಲೇ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿಗಳು ನನ್ನನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಎಚ್.ಕೆ. ಪಾಟೀಲ ಸೇರಿದಂತೆ ಅನೇಕ ಹಿರಿಯ ಸಚಿವರು ಸದಸ್ಯರಾಗಿದ್ದಾರೆ. ಟಿ.ಬಿ. ಜಯಚಂದ್ರ ಅವರು ಹಿಂದೆ ನೀಡಿದ್ದ ವರದಿಯನ್ನು ನಾವೂ ಅಧ್ಯಯನ ಮಾಡಿ ನಮ್ಮ ವರದಿ ಕೊಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ:
‘ಜಾತಿ ಜನಗಣತಿ ವರದಿ ಜಾರಿಗೆ ಇನ್ನೂ ಒಂದು ವರ್ಷ ಬೇಕಿದೆ ಎಂಬ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ಬಗ್ಗೆ ಕೇಳಿದಾಗ, ಜಾರಕಿಹೊಳಿ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗುತ್ತದೆ. ಇದು ಜಟಿಲ ಎಂದು ನನಗೇನೂ ಅನ್ನಿಸುತ್ತಿಲ್ಲ’ ಎಂದರು.
ರಾಕೇಶ್ ಮಲ್ಲಿ ಭಾಗಿ ತಿಳಿದಿಲ್ಲ:
ಗತಕಾಲದ ಭೂಗತ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಯಾರು ಗುಂಡು ಹಾರಿಸಿದ್ದಾರೆಂದು ತನಿಖೆಯ ನಂತರವಷ್ಟೇ ತಿಳಿದುಬರಲಿದೆ. ಇಂತಹ ವಿಷಯದಲ್ಲಿ ಊಹಾಪೋಹದ ಆಧಾರದಲ್ಲಿ ಉತ್ತರಿಸಲು ಸಾಧ್ಯವಿಲ್ಲ. ಗುಂಡು ಹಾರಿಸಿದವರು ಸಿಕ್ಕ ನಂತರ ಸತ್ಯ ಗೊತ್ತಾಗಲಿದೆ. ರಾಕೇಶ್ ಮಲ್ಲಿ ಭಾಗಿ ಆಗಿರುವ ಬಗ್ಗೆ ನನಗೇನೂ ತಿಳಿದಿಲ್ಲ ಎಂದರು.