ವಿಪರ್ಯಾಸವೆಂದರೆ ಬ್ರಾಹ್ಮಣರು ಯಾವ ಸಮುದಾಯವನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ದೂರವಿಟ್ಟು ಅಸ್ಪೃಶ್ಯತೆ ಆಚರಣೆಯನ್ನು ಜಾರಿಗೆ ತಂದರೋ ಈಗ ಆ ಸಮುದಾಯದ ನಾಯಕರು ರೂಪಿಸಿರುವ ಕಾನೂನು, ಸಂವಿಧಾನದ ಮುಂದೆ ನಿಂತು ತಮ್ಮ ಆತ್ಮಗೌರವ, ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹವಣಿಸುತ್ತಿದ್ದಾರೆ – ಆಕಾಶ್ ಆರ್ ಎಸ್, ಪತ್ರಕರ್ತರು.
ಈ ದೇಶದಲ್ಲಿ ವೈದಿಕ, ವರ್ಣಾಶ್ರಮ ವ್ಯವಸ್ಥೆಯನ್ನು ಹಾಗೂ ಜಾತಿ ಶ್ರೇಣೀಕೃತ ಪದ್ಧತಿಯನ್ನು ಬಲವಾಗಿ ಪ್ರಚುರ ಪಡಿಸಿದ್ದ ಬ್ರಾಹ್ಮಣರು ಈಗ ಜನಿವಾರದ ಸಂಗತಿಗೆ ಬೆಚ್ಚಿ ಬಿದ್ದಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೀದಿಗಿಳಿದು ಇದು ಬ್ರಾಹ್ಮಣ ಮತ್ತು ಹಿಂದೂ ವಿರೋಧಿ ನಡೆ, ಹಿಂದೂ ಪರಂಪರೆಗೆ ಮಾಡಿದ ಅವಮಾನ ಎಂದು ಬೊಬ್ಬೆ ಹೊಡೆಯಲು ಶುರುಮಾಡಿದ್ದಾರೆ.
ನಡೆದದ್ದು ಇಷ್ಟು..
ಏ.19 ರಂದು ರಾಜ್ಯಾದ್ಯಾಂತ ಸಿಇಟಿ ಪರೀಕ್ಷೆಯನ್ನು ಏರ್ಪಡಿಸಲಾಗಿದ್ದು, ಶಿವಮೊಗ್ಗ ಪರೀಕ್ಷಾ ಕೇಂದ್ರವೊಂದರಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಸಿಬ್ಬಂದಿಗಳು ಪರೀಕ್ಷಾರ್ಥಿಗಳ ಕೈಗೆ ಕಟ್ಟಿಕೊಂಡಿದ್ದ ಕಾಶಿದಾರ ಹಾಗೂ ಜನಿವಾರ ತೆಗೆಸಿ ಪರೀಕ್ಷೆಗೆ ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೆ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲೆಯ ವಿವಿಧ ಬ್ರಾಹ್ಮಣ ಸಂಘಗಳ ಒಕ್ಕೂಟಗಳು ಇದು ಧರ್ಮ ವಿರೋಧಿ ಕೃತ್ಯ, ಹಿಂದು ಪರಂಪರೆ ಸಂಸ್ಕಾರವನ್ನು ಪಾಲಿಸುತ್ತಿರುವ ವಿದ್ಯಾರ್ಥಿಗಳಿಗೆ ಇಂತಹ ನಡೆಯಿಂದ ಅಘಾತವಾಗಿದೆ, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೆ ಜಿಲ್ಲೆಯ ಉಸ್ತುವಾರಿ ಸಚಿವರು ಈ ಕುರಿತು ಅಧಿಕಾರಿಯನ್ನು ಸಸ್ಪಂಡ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರಂತೆ. ಇಷ್ಟಲ್ಲದೆ ಶಿವಮೊಗ್ಗದಲ್ಲಿ ಬಿಜೆಪಿ, ಜಿಡಿಎಸ್, ಕಾಂಗ್ರೆಸ್ ಹಾಗೂ ರಾಷ್ಟ್ರಭಕ್ತರ ಬಳಗ ಘಟನೆಯ ಕುರಿತು ಹೇಳಿಕೆಯನ್ನು ನೀಡುತ್ತಿದ್ದು, ರಾಜ್ಯದೆಲ್ಲೆಡೆ ಇದೊಂದು ರಾಜಕೀಯ ಸ್ವರೂಪವನ್ನು ಪಡೆಯುತ್ತಿದೆ.
ಇಂತಹ ಘಟನೆಗಳು ಇದೇ ಮೊದಲಲ್ಲ..
ಪರೀಕ್ಷೆಯ ಕೇಂದ್ರಗಳಲ್ಲಿ ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲು ಎಂದರೆ ಅದು ತಪ್ಪು. ಯಾಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಸುವ ಸಿಇಟಿ, ಕೆ-ಸೆಟ್ ನೀಟ್ ಹಾಗೂ ನೆಟ್ ಒಳಗೊಂಡಂತೆ ಅನೇಕ ಪರೀಕ್ಷೆಗಳಲ್ಲಿ ಯಾವುದೇ ಲೋಪಗಳು ಕಂಡು ಬರಬಾರದೆಂಬ ಉದ್ದೇಶದಿಂದ ಇಂತಹ ಕಠಿಣ ಕ್ರಮ ವಹಿಸುವುದು ಸಾಮಾನ್ಯವಾಗಿದೆ. ಹಾಗೆ ನೋಡುವುದಾದರೆ ಪ್ರತಿ ವರ್ಷವೂ ಪರೀಕ್ಷೆಯನ್ನು ನಡೆಸುವಾಗ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಮೂಗುತಿ, ಕಾಲ್ಗೆಜ್ಜೆ, ತಾಳಿ, ಕಾಲುಂಗುರ ತೆಗೆಸುತ್ತಾರೆ. ಇದು ಈಗಲೂ ಸಹ ನಡೆಯುತ್ತಿದೆ. ಲೋಹದ ವಸ್ತುಗಳಾಗಿರುವುದರಿಂದ ತೆಗೆಯಲಾಗುತ್ತದೆ ಎಂದು ಸಮರ್ಥನೆಗೆ ಇಳಿಯಬಹುದು.
ಆದರೆ, ಜನಿವಾರದ ಸಂಗತಿಗೆ ಹಿಂದೂ ಪರಂಪರೆಗೆ ಅಪಮಾನವಾಯಿತು ಎನ್ನುವವರು ಅದೇ ಹಿಂದೂ ಧರ್ಮದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದ್ದು, ಆಕೆಗೆ ತಾಳಿ, ಕಾಲುಂಗುರ, ಮೂಗುತಿ ತೆಗೆಸುವಾಗ ಯಾಕೆ ಸೊಲ್ಲೆತ್ತಲಿಲ್ಲ? ಯಾಕೆ ಬೀದಿಗಿಳಿದಿಲ್ಲ?. ಕೇವಲ ಬ್ರಾಹ್ಮಣರ ಜನಿವಾರ ತೆಗೆಸಿದ್ದಕ್ಕೆ ರಾಜ್ಯ ಮಟ್ಟದಲ್ಲಿ ಚರ್ಚೆ ಅವಶ್ಯಕವಾಗಿತ್ತೇ?… ಇಂತಹ ಹಲವಾರು ಪ್ರಶ್ನೆಗಳು ನಮ್ಮೊಳಗೆ ನುಸುಳುತ್ತಿವೆ. ಹಾಗಾದರೆ ಬ್ರಾಹ್ಮಣರಿಗೆ ಅನ್ಯಾಯವಾದರೆ ಮಾತ್ರ ಅದು ಅಕ್ಷಮ್ಯವೇ?. ಅವರಿಗೆ ಅಪಮಾನವಾದರೆ ಹಿಂದೂ ಧರ್ಮಕ್ಕೆ ಅಪಮಾನವಾದಂತೆಯೇ?. ಅವರು ಮಾತ್ರ ಹಿಂದೂಗಳೇ?. ಬ್ರಾಹ್ಮಣ ವಿರೋಧ ನಡೆ ಹಿಂದೂ ವಿರೋಧಿ ನಡೆಯೇ?. ಹಿಂದೂ ಧರ್ಮದ ಪರಂಪರೆ ಅವರಿಂದ ಮಾತ್ರ ಉಳಿಯುತ್ತಿರುವುದೇ?. ಹಿಂದೂ ಧರ್ಮದ ಪರಂಪರೆ ಸಂಸ್ಕಾರ ಅಂದರೆ ಬ್ರಾಹ್ಮಣ ಸಂಸ್ಕೃತಿಯೇ? ಯೋಚಿಸಬೇಕಿದೆ.
ಬ್ರಾಹ್ಮಣರು ಮತ್ತು ತಾರತಮ್ಯ
ಜನಿವಾರ ಘಟನೆಯನ್ನು ಬ್ರಾಹ್ಮಣರ ಅಧೀನದಲ್ಲಿರುವ ಮಾಧ್ಯಮಗಳು ಹಾಗೂ ವಾಟ್ಸಾಪ್ ಯೂನಿವರ್ಸಿಟಿಗಳು ಘೋರ ಅನ್ಯಾಯದಂತೆ ಬಿಂಬಿಸುತ್ತಿವೆ. ಹಾಗೂ ಕಾಂಗ್ರೆಸ್ ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡಿದೆ ಎಂದೆಲ್ಲಾ ಮಾಹಿತಿ ಬಿತ್ತರಿಸುತ್ತಿದ್ದಾರೆ. ಶೇ.4 ರಷ್ಟು ಜನಸಂಖ್ಯೆ ಉಳ್ಳ ಸಮುದಾಯ ತನ್ನ ಜಾತಿ ನಿಲುವನ್ನು ಪ್ರಬಲವಾಗಿ ಪತ್ರಿಪಾದಿಸುತ್ತಿದೆ ಎಂದರೆ ಈ ಕ್ಷಣದಲ್ಲಿ ಅವರ ಮಾನಸಿಕ ಬಲಾಢ್ಯತೆಯನ್ನು ಮೆಚ್ಚಲೇ ಬೇಕು. ಹಾಗೇ ನೋಡುವುದಾದರೆ ಬುದ್ಧನ ಕಾಲದಿಂದಲೂ ಈ ದೇಶದಲ್ಲಿನ ಬ್ರಾಹ್ಮಣರು ತಾನು ದೇವನಿಂದ ಹುಟ್ಟಿದವನು ಎಂಬ ಕಲ್ಪನೆಯಲ್ಲಿ ಜೀವಿಸುತ್ತಿದ್ದಾರೆ. ಬೂಸಲು ಹಿಡಿದ ವೇದ, ಶಾಸ್ತ್ರಗಳು ಶತಮಾನಗಳಿಂದ ಅದನ್ನೇ ಹೇಳುತ್ತಾ ಸಮಾಜಕ್ಕೆ ಮಂಕುಬೂದಿ ಎರಚುತ್ತಿದ್ದು, ಅವರನ್ನು ಮೇಲ್‌ಸ್ತರದಲ್ಲಿ ಕೂರಿಸಿದ್ದಾರೆ. ಆದರೆ, ನಾವೆಲ್ಲಾ ಆರಿಯಬೇಕಾಗಿರುವುದು ಹಿಂದೂ ಧರ್ಮ ಹಾಗೂ ಬ್ರಾಹ್ಮಣರು ಹೇಳಿದ ಹಿಂದೂ ಪರಂಪರೆ ಸಂಸ್ಕಾರ ಬೇರೆ ಬೇರೆ ಎಂಬುದು. ಹಿಂದೂ ಧರ್ಮವೆಂಬುದು ಗಾಂಧಿ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಕುವೆಂಪುರವರಂತಹ ದಾರ್ಶನಿಕತೆ ಸಹೋದರತ್ವದ ಅಡಿಯಲ್ಲಿದೆ. ಆದರೆ ಹಿಂದೂ ಪರಂಪರೆ ಸಂಸ್ಕಾರ ಎನ್ನುವುದು ಬ್ರಾಹ್ಮಣ ಸೂತ್ರಗಳಲ್ಲಿದೆ. ಮನು ಸೃಷ್ಟಿಸಿದ ಹಾದಿಯಲ್ಲಿದೆ.
ಅದರಂತೆ ಬ್ರಾಹ್ಮಣ ಸೂತ್ರಗಳಾದ “ಅಪಸ್ತಂಭ ಧರ್ಮಸೂತ್ರಗಳು ಬ್ರಾಹ್ಮಣರಿಗೆ ಮಾತ್ರ ವೇದಗಳನ್ನು ಓದುವ, ಪವಿತ್ರವಾದ ಅಗ್ನಿಯನ್ನು ಹಚ್ಚುವ, ದೀಕ್ಷೆ ಸ್ವೀಕರಿಸುವ ಹಕ್ಕಿದೆ”, “ ವಶಿಷ್ಟ ಧರ್ಮಸೂತ್ರದಲ್ಲಿ ಬ್ರಾಹ್ಮಣರು ಎರಡು ಬಾರಿ ಜನಿಸಿದವರು”, “ ಋಗ್ವೇದದ 10ನೇ ಮಂಡಲದ 19ನೇ ಶ್ಲೋಕ ಬ್ರಾಹ್ಮಣರು ಬಾಯಿಯಿಂದ ಹುಟ್ಟಿದವರು ಉಳಿದವರೆಲ್ಲಾ ದೇಹದ ಕೆಳಭಾಗದಲ್ಲಿ ಹುಟ್ಟಿದವರೆಂದು ತಿಳಿಸಿವೆ. ಅಂದರೆ ಬ್ರಾಹ್ಮಣನೊಬ್ಬನೆ ಸರ್ವಶ್ರೇಷ್ಠ ಮಿಕ್ಕುಳಿದವರೆಲ್ಲ ಕನಿಷ್ಠ ಎಂಬ ಭಾವನೆಯನ್ನು ವೇದ, ಉಪನಿಷತ್‌ಗಳು ಹೇಳಿವೆ. ಆ ಮೂಲಕ ತಾರತಮ್ಯ, ಜಾತಿವಾದ, ಮಡಿ ಮೈಲಿಗೆ, ಮೇಲುಕೀಳು, ಸಹ ಪಂಕ್ತಿ ಭೋಜನೆಯ ನಿರಾಕರಣೆ ಎಲ್ಲವೂ ಬ್ರಾಹ್ಮಣರಿಗಾಗಿ ಬ್ರಾಹ್ಮಣರೇ ರೂಪಿಸಿಕೊಂಡಿದ್ದಾರೆ. ಇನ್ನು ಬ್ರಾಹ್ಮಣರು ಹಿಂದೂ ದೇವಾಲಯಗಳು, ಶೂದ್ರ ರಾಜರನ್ನು ಒಪ್ಪಿದ ಇತಿಹಾಸ ಕೂಡ ಇಲ್ಲ. ಶೃಂಗೇರಿ ಪೀಠದ ಮೇಲೆ ಪೇಶ್ವೆ ಬ್ರಾಹ್ಮಣರ ದಾಳಿ, ಕೇರಳದಲ್ಲಿ ನಂಬೂದರಿ ಬ್ರಾಹ್ಮಣರು ವಿಧಿಸುತ್ತಿದ್ದ ಸ್ತನ ತೆರಿಗೆ, ಶಿವಾಜಿಯ ಪಟ್ಟಾಭಿಷೇಕಕ್ಕೆ ಒಪ್ಪದ ಕಾಶಿಯ ಬ್ರಾಹ್ಮಣ ಪುರೋಹಿತರು, ಈ ದೇಶದ ಆಳ್ವಿಕೆ ನಡೆಸಿದ ಯಾವುದೇ ಮನೆತನವಿರಲಿ ಅಲ್ಲಿ ಬ್ರಾಹ್ಮಣನಿಗೆ ಮಂತ್ರಿ ಸ್ಥಾನ ಇವೆಲ್ಲ ಕೆಲ ಉದಾಹರಣೆಗಳಷ್ಟೆ.. ಈಗ ಇವೆಲ್ಲವನ್ನೂ ಮರೆಸುವ ಪ್ರಯತ್ನದಲ್ಲಿ ತಾವೇ ಹಿಂದೂ ಧರ್ಮದ ಪರಿಪಾಲಕರಂತೆ, ಸಂಸ್ಕಾರದ ರಕ್ಷಕರಂತೆ ಬೀಗುತ್ತಿರುವುದು ವಿಪರ್ಯಾಸವೇ ಸರಿ.
ಬ್ರಾಹ್ಮಣರು vs ಬ್ರಾಹ್ಮಣರು
ಉಡುಪಿ ದಿವಗಂತ ಪೇಜಾವರ ಶ್ರೀಗಳು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಹಿಂದೂ ಧರ್ಮವೇ ಬೇರೆ, ಬ್ರಾಹ್ಮಣ್ಯವೇ ಬೇರೆ. ಹಿಂದೂ ಧರ್ಮ ಎಲ್ಲರನ್ನು ಒಳಗೊಂಡಿದೆ, ಆದರೆ ಬ್ರಾಹ್ಮಣ್ಯ ಬ್ರಾಹ್ಮಣರಿಗೆ ಮಾತ್ರ ಸಿಮೀತ ಎಂದಿದ್ದಾರೆ. ಈ ನಿಲುವು ಮನುಸ್ಮೃತಿ ಸಿದ್ಧಾಂತವನ್ನು ಪ್ರಬಲವಾಗಿ ಸಾಕ್ಷೀಕರಿಸಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಬ್ರಾಹ್ಮಣರು ಬ್ರಾಹ್ಮಣರನ್ನೆ ದ್ವೇಷಿಸುವಷ್ಟು, ತಿರಸ್ಕರಿಸುವಷ್ಟು. ಹವ್ಯಕ ಬ್ರಾಹ್ಮಣ, ಮಾಧ್ವ ಬ್ರಾಹ್ಮಣ, ಬಂಗಾಳಿ ಬ್ರಾಹ್ಮಣ, ದೈವಜ್ಞ ಬ್ರಾಹ್ಮಣ, ಸ್ವಾರ್ತ ಬ್ರಾಹ್ಮಣ, ಶೈವ ಬ್ರಾಹ್ಮಣ, ಅಯ್ಯರ್, ಅಯ್ಯಂಗಾರ್ ಒಳಗೊಂಡಂತೆ ಅನೇಕ ಪಂಗಡಗಳಿವೆ. ಅವುಗಳ ನಡುವೆ ವೈರುಧ್ಯವೂ ಇದೆ.
ಇನ್ನೂ ಪುರಾಣಗಳು ರಾವಣನಿಗಿಂತ ಶ್ರೇಷ್ಟ ಬ್ರಾಹ್ಮಣ ಇನ್ಯಾರೂ ಇಲ್ಲ, ಆತ ಶಿವನಾಟ್ಯ ಸ್ತೋತ್ರ ರಚಿಸಿದ್ದಾನೆ, ತಾಯಿಗಾಗಿ ಶಿವನ ಬಳಿ ಆತ್ಮಲಿಂಗವನ್ನು ಪಡೆದಿದ್ದಾನೆ ಎಂದು ಹೇಳುತ್ತವೆ. ಈಗಲೂ ಸಹ ಮಧ್ಯಪ್ರದೇಶ, ರಾಜಸ್ಥಾನದ ಜೋಧಪುರ-ಮಂಡೋರದ ಮುದ್ಗಲ್ ಗೋತ್ರದ ದಾವೆ ಬ್ರಾಹ್ಮಣರು, ಉತ್ತರ ಪ್ರದೇಶದ ಕಾನ್ಪುರ್ ಹಾಗೂ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ರಾವಣನನ್ನು ದಹನ ಮಾಡುವುದಿಲ್ಲ. ಆತನನ್ನು ದೇವರೆಂದು ಪೂಜಿಸುತ್ತಾರೆ. ಆದರೆ ಅದೇ ಸಮುದಾಯವರು ಆತನನ್ನು ವರ್ಣ, ರೂಪದ ಕಲ್ಪನೆಯಿಂದ ರಾಕ್ಷಸನೆಂದು ಬಿಂಬಿಸಿ ನಿರಾಕರಿಸುತ್ತಿರುವುದು ದರುಂತ. ಆದರೆ ನಾವು ಇಲ್ಲಿ ಗಮನಿಸಬೇಕಾಗಿರುವುದು ಬ್ರಾಹ್ಮಣ ಸಮುದಾಯದವರು ಯಾರೇ ಆಗಲಿ ಆ ಸಮುದಾಯದ ಸಂಸ್ಕಾರ ಅಂದರೆ ಜಾತಿವಾದ, ಸ್ವಜಾತಿ ಮದುವೆ, ಮೇಲುಕೀಳು, ದೀಕ್ಷೆ, ಮಂತ್ರ ಇಂತಹ ಕಟ್ಟಳೆಗಳನ್ನು ಪಾಲನೆ ಮಾಡಿದರೆ ಮಾತ್ರ ಅವರನ್ನು ಅಪ್ಪಿಕೊಳ್ಳಲು ಮುಂದಾಗುತ್ತಾರೆ. ಇಲ್ಲದಿದ್ದರೆ ಯಾವುದೇ ಸ್ಥಾನದಲ್ಲಿದ್ದರು ಒಪ್ಪಲಾರರು ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.
ಬ್ರಾಹ್ಮಣರು ಮತ್ತು ಪಾವಿತ್ರ್ಯತೆ
ಕಾಶಿದಾರ ಮತ್ತು ಜನಿವಾರ ತೆಗೆದಿದ್ದಕ್ಕೆ ರಾಜ್ಯದೆಲ್ಲೆಡೆ ತಮ್ಮ ಪಾವಿತ್ರ್ಯ ಸಾರುತ್ತಿರುವ ಬ್ರಾಹ್ಮಣರು ಶತಮಾನದಿಂದ ಅಸ್ಪೃಶ್ಯ ಆಚರಣೆಯಲ್ಲಿ ದಾರ್ಷ್ಟ್ಯ ಮೆರೆದಿದ್ದು ಮರೆತಿದ್ದಾರೆ ಅನಿಸುತ್ತಿದೆ. ಆಹಾರ ಪದ್ಧತಿ, ಸಹಭೋಜನದಂತಹ ಸಾಮಾಜಿಕ ಬದಲಾವಣೆಗೆ ಕೊಡಲಿ ಹಾಕಿದ್ದು, ಪಾವಿತ್ರ್ಯದ ನೆಪದಲ್ಲಿ ಪಂಕ್ತಿಭೇದ, ವೆಜ್-ನಾನ್ ವೆಜ್ ಎಂದು ಸಮಾಜದ ವಿಂಗಡಣೆ ಮಾಡುತ್ತಿರುವುದು ಢಾಳಾಗಿ ಗೋಚರಿಸುತ್ತಿದೆಯಲ್ಲವೇ?
2016 ರ ಏ.22 ರಿಂದ 26ರ ನಡುವೆ ಶಿವಮೊಗ್ಗ ಜಿಲ್ಲೆಯ ಮತ್ತೂರಿನಲ್ಲಿ ನಡೆಸಲಾದ ಸೋಮಯಾಗದಲ್ಲಿ 8 ಆಡುಗಳನ್ನು ಬಲಿ ಕೊಟ್ಟು, ಅದರ ಮಾಂಸ ಹಾಗೂ ಸೋಮರಸವನ್ನು ಸೇವಿಸಲಾಗಿತ್ತು. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿ ಬ್ರಾಹ್ಮಣರು ಮುಜುಗರಕ್ಕೆ ಒಳಗಾಗಿದ್ದರು. ಇದು ವಾಸ್ತವ. ಆದರೆ ಶತಮಾನಗಳಿಂದಲೂ ಬ್ರಾಹ್ಮಣ ಸೂತ್ರಗಳು ಇದನ್ನೇ ಹೇಳಿಕೊಂಡು ಬಂದಿವೆ. “ವಾಜಸನೇಯಿ ಸಂಹಿತೆ- ವೇದಗಳಲ್ಲಿ ಹಸುಗಳನ್ನು ಪವಿತ್ರಗೊಳಿಸಲಾಗಿರಲಿಲ್ಲ ಎಂದಲ್ಲ. ಆದರೆ ಪಾವಿತ್ರೀಕರಣ ಕಾರಣಕ್ಕಾಗಿಯೇ ಹಸುವನ್ನು ತಿನ್ನಲೇಬೇಕು ಎಂದು ಕಟ್ಟಾಜ್ಞೆ ವಿಧಿಸಿತ್ತು”, “ಋಗ್ವೇದ ಕಾಲದ ಆರ್ಯರು ಆಹಾರದ ಉದ್ದೇಶಕ್ಕಾಗಿ ಹಸುವನ್ನು ಕೊಲ್ಲುತ್ತಿದ್ದರು ಮತ್ತು ತಿನ್ನುತ್ತಿದ್ದರು(10 ನೇ ಅಧ್ಯಾಯ, ಶ್ಲೋಕ86.14)”, “ ಅವರು ಒಬ್ಬನಿಗಾಗಿ ಹದಿನೈದರಿಂದ ಇಪ್ಪತ್ತು ಎತ್ತುಗಳನ್ನು ಅಡುಗೆ ಮಾಡುತ್ತಿದ್ದರು( ಋಗ್ವೇದದ 10 ನೇ ಅಧ್ಯಾಯ., ಶ್ಲೋಕ 91.14), “ ಅಗ್ನಿಗೆ ಟಗರುಗಳು, ಗೂಳಿಗಳು, ಗೊಡ್ಡು ದನಗಳು, ಎತ್ತುಗಳು ಹಾಗೂ ಕುದುರೆಗಳನ್ನು ಬಲಿ ಕೊಡುತ್ತಿದ್ದರು (ಋಗ್ವೇದ1 0 ನೇ ಅಧ್ಯಾಯ., ಶ್ಲೋಕ.72.6)”. “ಹಸು ಮತ್ತು ಗೂಳಿ ಪವಿತ್ರವಾದವುಗಳಾಗಿವೆ. ಆ ಕಾರಣದಿಂದ ಅವುಗಳನ್ನು ತಿನ್ನಬೇಕು( ಅಪಸ್ತಂಭ ಧರ್ಮಸೂತ್ರ ಶೋಕ್ಲ 14, 15, 229)” ಹಾಗೂ “ ವೇದದ ಆಜ್ಞೆಯಂತೆ ಮಾಂಸ ರಹಿತವಾಗಿ ಮಧುಪರ್ಕ ತಯಾರಿಸುವುದು ಸಲ್ಲದು( ಮಾಧವ ಗೃಹ್ಯಸೂತ್ರ ಅ.1.ಶೋ9.22)” ಎಂದು ತಿಳಿಸಲಾಗಿದೆ. ಈ ಸತ್ಯಗಳನ್ನು ಮರೆ ಮಾಚಲು ಶತಮಾನಗಳಿಂದ ಪ್ರಯತ್ನ ಪಡುತ್ತಿದ್ದರೂ ಅದು ಮಂದ ಬೆಳಕಿನಿಂದ ಈಚೆ ಬರುತ್ತಲೇ ಇದೆ..
ಒಟ್ಟಾರೆಯಾಗಿ ಹೇಳುವುದಾದರೆ ಬ್ರಾಹ್ಮಣರ ಹೆಗ್ಗುರುತಾದ ಜನಿವಾರವು ಬಹಿರಂಗವಾಗಿ ನೆಲಕ್ಕೆ ಉರುಳಿದೆ. ಇದರಿಂದ ಬ್ರಾಹ್ಮಣರ ಮೇಲರಿಮೆಗೆ ಪೆಟ್ಟು ಬಿದ್ದಿದೆ. ಅದು ಒಳಗೊಳಗೆ ಕುದಿಯಲಾರಂಭಿಸಿದೆ. ಅದರಿಂದ ಇಡೀ ಬ್ರಾಹ್ಮಣ ಸಮುದಾಯ ತಮ್ಮ ಶಕ್ತಿ ಪ್ರದರ್ಶನ ತೋರಲು ಹರಸಾಹಸ ಪಡುತ್ತಿದೆ. ಹಾಗೂ ರಾಜಕೀಯ ರಂಗದಲ್ಲಿ ನಾನಾ ಬಗೆಯ ಬಣ್ಣ ಬಳಿದು ಓಕುಳಿಯಾಡುವ ಲೆಕ್ಕಾಚಾರದಲ್ಲಿದೆ. ಯಾವುದೇ ಜಾತಿ, ಧರ್ಮ ಇರಲಿ ಅದು ನಾಲ್ಕು ಗೋಡೆಯ ಮಧ್ಯೆ ಅವಿತಿರಬೇಕು. ತಮ್ಮ ಪ್ರಾಬಲ್ಯವನ್ನು ತೋರಿಸಲು ಬೀದಿಗಿಳಿಯಬಾರದು. ಈಗ ಆಗುತ್ತಿರುವುದು ಅದೇ. ಆದರೆ ವಿಪರ್ಯಾಸವೆಂದರೆ ಯಾವ ಸಮುದಾಯವನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ದೂರವಿಟ್ಟು ಅಸ್ಪೃಶ್ಯತೆ ಆಚರಣೆ ಜಾರಿಗೆ ತಂದರೋ ಈಗ ಆ ಸಮುದಾಯದ ನಾಯಕರು ರೂಪಿಸಿರುವ ಕಾನೂನು, ಸಂವಿಧಾನದ ಮುಂದೆ ನಿಂತು ತಮ್ಮ ಆತ್ಮಗೌರವ, ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹವಣಿಸುತ್ತಿದ್ದಾರೆ.
ಆಕಾಶ್.ಆರ್.ಎಸ್
ಪತ್ರಕರ್ತರು
ಇದನ್ನೂ ಓದಿ- ಕೋಮುವಾದಕ್ಕೆ ಉತ್ತರ ನೀಡುವ ‘ಸತ್ಯೊಲು’ಎಂಬ ಜನಪದ ಸತ್ಯ