ಬೆಂಗಳೂರು: ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಇಲಾಖೆಯಲ್ಲಿನ ಕಾಮಗಾರಿಗಳಿಗೆ ಹಾಗೂ ಗುತ್ತಿಗೆದಾರರರಿಗೆ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ತಿಳಿಸಿದ್ದಾರೆ.
ಗುರುವಾರ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಗೆ ಮೊದಲ ಬಾರಿಗೆ ಹೊಸ ಪ್ರಯತ್ನ ಮಾಡಲಾಗಿದ್ದು, ಕಳೆದ ಎರಡು ಆರ್ಥಿಕ ವರ್ಷದಲ್ಲಿ 1566 ಕಾಮಗಾರಿಗಳಿಗೆ ಸಂಪೂರ್ಣ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿ/ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ತಾರತಮ್ಯ ಹಾಗೂ ಹಸ್ತಕ್ಷೇಪ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆಧಾರ ರಹಿತ ಆರೋಪ ಮಾಡಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ, ರಾಜ್ಯ ಗುತ್ತಿಗೆದಾರರಲ್ಲಿ ಉಂಟಾಗಿದ್ದ ಗೊಂದಲಗಳನ್ನು ಪರಿಹರಿಸಲಾಗಿದೆ ಎಂದು ಸಚಿವರು ಹೇಳಿದರು.
2023 – 24 ನೇ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಅನುದಾನದ ವಿವರ:
2023-24 ನೇ ಆರ್ಥಿಕ ವರ್ಷದಲ್ಲಿ ನಾವು ಬಿಜೆಪಿ ಸರಕಾರ, ಹಣಕಾಸಿನ ಲಭ್ಯತೆ ಇಲ್ಲದೇ ಇದ್ದರೂ ಪ್ರಾರಂಭಿಸಿದ್ದ, 12,693 ಕೋಟಿ ರೂಪಾಯಿ ಮೌಲ್ಯದ 15,549 ಕಾಮಾಗಾರಿಗಳನ್ನು ಮುಂದುವರೆಸಿದ್ದೇವೆ. ಈ ವರ್ಷದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸದೆ, ಹಳೆಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ. ಬಿಜೆಪಿ ಸರಕಾರ ಬಿಟ್ಟು ಹೋಗಿದ್ದ ಅಗಾಧ ಪ್ರಮಾಣದ ಕಾಮಗಾರಿಗಳನ್ನು ನಿಭಾಯಿಸಲು ಹಾಗೂ ಹಣಕಾಸಿನ ಲಭ್ಯತೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಾಡಿಕೊಂಡ ಮನವಿಯ ಮೇರೆಗೆ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ತಾರತಮ್ಯ ಹಾಗೂ ಹಸ್ತಕ್ಷೇಪದ ಪ್ರಶ್ನೆ ಎಲ್ಲಿಂದ ಸಾಧ್ಯ ಎನ್ನುವುದರ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದ್ದಾಗಿ ಸಚಿವರು ತಿಳಿಸಿದರು.
2024-25 ನೇ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆ:
2024-25 ನೇ ಆರ್ಥಿಕ ವರ್ಷದಲ್ಲಿ 9,974.34 ಕೋಟಿ ರೂಪಾಯಿ ಮೌಲ್ಯದ 13,913 ಸ್ಪಿಲ್ ಓವರ್ (ಮುಂದುವರೆದ) ಕಾಮಗಾರಿಗಳು ಚಾಲ್ತಿಯಲ್ಲಿದ್ದವು. ಕಾಮಗಾರಿಗಳ ಅಗಾಧದತೆ ಹಾಗೂ ಗುತ್ತಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಹೆಚ್ಚಿನ ಆದ್ಯತೆ:
ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹೆಚ್ಚಾಗಿ ಕಾಮಗಾರಿಗಳನ್ನ ಕೈಗೊಳ್ಳುವಂತಹ ಎಂಓಟಿ (ಕೆರೆಗಳ ಅಧುನಿಕರಣ) ಮತ್ತು ಏಪಿಬಿ (ಅಣೆಕಟ್ಟು ಪಿಕ್ಅಪ್) ಯ ಹೆಡ್ ಆಫ್ ಅಕೌಂಟ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಂಓಟಿ (ಕೆರೆಗಳ ಅಧುನಿಕರಣ) ಲೆಕ್ಕಶೀರ್ಷಿಕೆಗೆ ಆಯವ್ಯದಲ್ಲಿ ಹಂಚಿಕೆ ಮಾಡಲಾದ ಹಣ 100 ಕೋಟಿ ರೂಪಾಯಿಗಳು ಹೆಚ್ಚುವರಿಯಾಗಿ 210 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪದ ಸಾಧ್ಯತೆಯೇ ಇಲ್ಲ. ಕಾಮಗಾರಿಗಳು ಸಕಾಲದಲ್ಲಿ ಮುಗಿಯಬೇಕು ಹಾಗೂ ಗುತ್ತಿಗೆದಾರರು ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವ ಉದ್ದೇಶದಿಂದ ನಾವು ಅನುದಾನದ ಲಭ್ಯತೆಯನ್ನು ನೋಡಿಕೊಂಡು ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ಒತ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ರಾಘವನ್ ಉಪಸ್ಥಿತರಿದ್ದರು.