ಬೆಂಗಳೂರು: ಬೇಸಿಗೆ ರಜೆ, ಗುಡ್ ಫ್ರೈಡೆ ಮತ್ತು ಈಸ್ಟರ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳ ಮತ್ತು ತಮಿಳುನಾಡಿಗೆ ತೆರಳುವ ಖಾಸಗಿ ಬಸ್ ಪ್ರಯಣ ದರ ದುಪ್ಪಟ್ಟಾಗಿದೆ. ಆಫ್ ಸೀಸನ್ ಗೆ ಹೋಲಿಸಿದರೆ ಈ ವಾರದಲ್ಲಿ ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಾಗಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ವಾರವಿಡೀ ಬಸ್ ಪ್ರಯಾಣ ದರದಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಎಂದು ಖಾಸಗಿ ಬಸ್ ಆಪರೇಟರ್ ಗಳು ಹೇಳುತ್ತಾರೆ.
ಸುದೀರ್ಘ ವಾರಾಂತ್ಯದ ಜತೆಗೆ ಬೇಸಿಗೆ ರಜೆ ಇರುವುದೂ ಬಸ್ ಪ್ರಯಾಣ ದರ ಏರಿಕೆಗೆ ಕಾರಣವಾಗಿದೆ. ರಜೆ ಇರುವ ಕಾರಣಕ್ಕೆ ಪೋಷಕರು ಮಕ್ಕಳೊಂದಿಗೆ ಕೇರಳ ಮತ್ತು ತಮಿಳುನಾಡು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣ ದರವನ್ನು ಏರಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಬಸ್ ಪ್ರಯಾಣ ದರವೇನೂ ಏಕಾಏಕಿ ಹೆಚ್ಚಳವಾಗಿಲ್ಲ. ಶಾಲಾ ಕಾಲೇಜುಗಳ ಪರೀಕ್ಷೆಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬುಕ್ಕಿಂಗ್ ಆರಂಭಗೊಂಡಿದ್ದು, ಆಗಿನಿಂದಲೇ ಬಸ್ ಪ್ರಯಾಣ ದರ ಏರಿಕೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ. ಬುಕ್ಕಿಂಗ್ ಏಜೆಂಟ್ ಗಳ ಪ್ರಕಾರ ಒಂದೆರಡು ತಿಂಗಳ ಮುಂಚಿತವಾಗಿಯೇ ಪ್ರಯಾಣ ದರವನ್ನು
ಹೆಚ್ಚಿಸಲಾಗಿದೆ.
ಇ-ಬುಕಿಂಗ್ ಮೂಲಕ ಬುಕಿಂಗ್ ಮಾಡಿದರೆ ಕೆಲವೊಮ್ಮೆ ರಿಯಾಯಿತಿಗಳು ಲಭ್ಯವಾಗುತ್ತವೆ. ಆದರೆ ಪ್ಲಾಟ್ ಫಾರ್ಮ್ ಶುಲ್ಕ ಮತ್ತು ಶೇ. 18 ರಷ್ಟು ಜಿ ಎಸ್ ಟಿ ವಿಧಿಸುವುದರಿಂದ ಹೆಚ್ಚುವರಿಯಾಗಿ 250 ರೂ. ನಷ್ಟವಾಗುತ್ತದೆ ಎಂದು ಮತ್ತೊಬ್ಬ ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ. 2025ರ ಡಿಸೆಂಬರ್ ಕ್ರಿಸ್‌ಮಸ್ ಸಂದರ್ಭದಲ್ಲಿ ಹೊರ ರಾಜ್ಯಗಳಿಗೆ ಪ್ರಯಾಣ ದರ ಒಬ್ಬರಿಗೆ ರೂ.5,000 ಇತ್ತು. ಈ ವರ್ಷದ ಗುಡ್ ಫ್ರೈಡೆಗೆ ಅಷ್ಟೊಂದು ಹೆಚ್ಚಳವಾಗಿಲ್ಲ. ಕೇರಳ, ತಮಿಳುನಾಡಿಗೆ ಪ್ರಯಾಣ ದರ 4,000 ರೂ.ಗಿಂತ ಕಡಿಮೆ ಇದೆ.
ಏಜೆನ್ಸಿ ವ್ಯವಸ್ಥಾಪಕರೊಬ್ಬರು ಹೇಳುತ್ತಾರೆ. ಆದರೂ ಈ ದರವೂ ಬಡ ಮಧ್ಯಮ ವರ್ಗದ ಜನರಿಗೆ ದುಬಾರಿ ಎನ್ನಲಾಗುತ್ತಿದೆ. ಈಸ್ಟರ್ ವಾರಾಂತ್ಯದ ಕಾರಣ ಭಾನುವಾರದವರೆಗೆ ಪ್ರಯಾಣ ದರ ಏರುತ್ತಲೇ ಇರುತ್ತದೆ. ಭಾನುವಾರದ ನಂತರ ಸ್ವಲ್ಪ ಇಳಿಕೆ ಕಂಡುಬರಬಹುದು, ಆದರೆ ಏಪ್ರಿಲ್ ಮತ್ತು ಮೇ ತಿಂಗಳುಗಳು ಸಾಮಾನ್ಯವಾಗಿ ಜನದಟ್ಟಣೆಯ ಪ್ರಯಾಣ ತಿಂಗಳುಗಳಾಗಿವೆ ಎಂದು ಕಲಾಸಿಪಾಳ್ಯದ ಬಸ್ ಚಾಲಕರೊಬ್ಬರು ಹೇಳುತ್ತಾರೆ.
ಏಪ್ರಿಲ್ ಮತ್ತು ಮೇ ತಿಂಗಳು ಪ್ರವಾಸದ ತಿಂಗಳುಗಳಾಗಿದ್ದು, ಬಸ್ ಪ್ರಯಾಣ ದರ ಕಡಿಮೆಯಾಗುವ ಸಾಧ್ಯತೆಗಳು ಕಡಿಮೆ. ಯಾವುದೇ ಕಾರಣಕ್ಕೂ 1000 ರೂ.ಗಳಿಗಿಂತ ಕಡಿಮೆಯಾಗುವ ಸಾಧ್ಯತೆಗಳಿಲ್ಲ ಎಂದು ಬುಕಿಂಗ್ ನಲ್ಲಿ ದಶಕದ ಅನುಭವ ಹೊಂದಿರುವ ರಾಜು ಹೇಳುತ್ತಾರೆ.
ಕೇರಳದ ಅನೇಕ ನಗರಗಳ ಪ್ರಯಾಣ ದರದಲ್ಲಿ ಗಣನೀಯ ಏರಿಕೆಯಾಗಿದೆ. ಕೊಚ್ಚಿ ಮತ್ತು ತಿರುವನಂತಪುರ, ಆಂಧ್ರಪ್ರದೇಶ ಮತ್ತು ಗೋವಾ ಪ್ರಯಾಣ ದರವೂ ಏರಿಕೆ ಕಂಡಿದೆ. ಬಿಸಿಲಿನ ಕಾರಣಕ್ಕೆ ತಮಿಳುನಾಡಿನ ಬಸ್ ಪ್ರಯಾಣ ದರ ಕಡಿಮೆ. ಬೇಡಿಕೆ ಹೆಚ್ಚಿದರೆ ಸಹಜವಾಗಿಯೇ ಟಿಕೆಟ್ ಬೆಲೆ ಸ್ವಾಭಾವಿಕವಾಗಿ ಏರಿಕೆ ಕಾಣುತ್ತದೆ.
ಯಾವ ರಾಜ್ಯಕ್ಕೆ ಎಷ್ಟು?
ಕೇರಳಕ್ಕೆ ಆಫ್ ಸೀಸನ್ ನಲ್ಲಿ 1,100 – 1,200 ರೂ ಇದ್ದ ಪ್ರಯಾಣ ದರ, ಪ್ರಸ್ತುತ 2,000 – 3,000 ರೂ.ಗಳಿಗೆ ಏರಿಕೆಯಾಗಿದೆ. ಆಂಧ್ರಪ್ರದೇಶಕ್ಕೆ ಆಫ್ ಸೀಸನ್ ನಲ್ಲಿ 1,000 ರೂ.ಗಿಂತ ಕಡಿಮೆ ಇದ್ದ ಪ್ರಯಾಣ ದರ ಈಗ 2,000 ರೂ. ಆಸುಪಾಸಿನಲ್ಲಿದೆ. ತಮಿಳುನಾಡು ಪ್ರಯಾಣ ದರ ಆಫ್ ಸೀಸನ್ ನಲ್ಲಿ 1,000 ರೂ ಇದ್ದದ್ದು ಪ್ರಸ್ತುತ 1,100-1,200 ರೂ.ಗೆ ಏರಿಕೆಯಾಗಿದೆ. ಇನ್ನು ಗೋವಾಕ್ಕೆ ಆಫ್-ಸೀಸನ್ ನಲ್ಲಿ 700 ರೂ. ಇದ್ದ ಪ್ರಯಾಣ ದರ ಪ್ರಸ್ತುತ 1,500-1750 ರೂ.ವರೆಗೆ ನಿಗದಿಯಾಗಿದೆ.