ಮಹಾಜಾತ್ರೆಯ ನಂತರದ ಚಿತ್ರಗಳು | ಭಾಗ 3

Most read

ನಲವತ್ತೈವತ್ತು ಕೋಟಿ ಜನ ಒಂದೂವರೆ ತಿಂಗಳ ಅವಧಿಯಲ್ಲಿ ನೆರೆದ ಮಹಾಜಾತ್ರೆಯ ಬಳಿಕ ಅಲ್ಲಿಯ ಊರು, ಜನ, ನದಿ, ನೆಲಗಳ ಕಾಣಬೇಕೆಂದು, ಅಕ್ಬರ್‌ ಕಟ್ಟುವಾಗ ಇಲಾಹಾಬಾದ್‌ ಆಗಿದ್ದದ್ದು ನಂತರ ಅಲಹಾಬಾದ್ ಆಗಿ ಈಗ ಪ್ರಯಾಗರಾಜ್‌‌ ಆಗಿರುವ ಊರಿಗೆ ಹೋದಾಗ ಅಲ್ಲಿ ಕಣ್ಣಿಗೆ ಕಂಡ, ಬೊಗಸೆಗೆ ದಕ್ಕಿದ ಅನುಭವಗಳನ್ನು ನವಿರಾಗಿ ಕಟ್ಟಿಕೊಟ್ಟಿದ್ದಾರೆ ಡಾ. ಎಚ್‌ ಎಸ್‌ ಅನುಪಮಾ. ಮೂರು ಕಂತುಗಳ ಈ ಲೇಖನದ ಮೂರನೆಯ ಹಾಗೂ ಕೊನೆಯ ಕಂತು ಇಲ್ಲಿದೆ.

ಇವಿಷ್ಟು,

ನಲವತ್ತೈವತ್ತು ಕೋಟಿ ಜನ ಒಂದೂವರೆ ತಿಂಗಳ ಅವಧಿಯಲ್ಲಿ ನೆರೆದ ಮಹಾಜಾತ್ರೆಯ ಬಳಿಕ ಊರು, ಜನ, ನದಿ, ನೆಲಗಳ ಕಾಣಬೇಕೆಂದು ಹೋದಾಗ ಇಳಿದದ್ದು: ಧಾರ್ಮಿಕ ಭಾವನೆಗಳ ತಾಯ್ತಂದೆಯರೊಂದಿಗೆ ನಾನು-ತಮ್ಮ-ತಂಗಿಯಂತಹ ನಾಸ್ತಿಕರು, ವಿಚಾರವಾದಿಗಳು ಪ್ರೇಮಗೌರವಗಳಿಂದ ಬಾಳುವುದು ಹೇಗೆಂದು ಕಲಿತದ್ದನ್ನು ಪ್ರಯೋಗಿಸಿದ್ದು: `ನೀವು ನೋಡುವುದನ್ನು ನೀವು ನೋಡಿ, ನಾವು ನೋಡುವುದನ್ನು ನಾವು ನೋಡುವೆವು. ಹೋಗಿಬರುವ ಪ್ರಯಾಣದ ಕಾಲದಲ್ಲಿ ಒಟ್ಟಿಗಿರೋಣ’ ಎಂಬ ಒಪ್ಪಂದ ಯಶಸ್ವಿಯಾದದ್ದು.

ಅದರೊಡನೆ ನಮ್ಮೊಳಗೆ ನಡೆದ ಮಂಥನ, ತರ್ಕಗಳತ್ತ ಒಂದು ಇಣುಕು ನೋಟಕ್ಕೆ ಅವಕಾಶ ನೀಡುವುದಾದರೆ:

ನಾವೆಲ್ಲ ನದಿಯ ಒಕ್ಕಲುಗಳು. ಎಲ್ಲೆಲ್ಲೋ ಹರಿಯುವ ನದಿಗಳ ಹೆಸರನ್ನು ನಮ್ಮನೆಗೆ, ಮನೆಯ ಹೆಣ್ಣುಗಳಿಗೆ, ದನಕರುಗಳಿಗೆ ಇಟ್ಟಿದ್ದೇವೆ. `ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ’ಯರ ಸನ್ನಿಧಿಯನ್ನು ನಮ್ಮದೇ ಬಾವಿ-ಕೆರೆ-ನದಿ-ಹಳ್ಳ ಹೊಳೆಗಳಲ್ಲಿ ಕಂಡು ತೃಪ್ತರಾಗಿದ್ದೇವೆ. ಹಾಗಿದ್ದರೂ ಸಾವಿರಾರು ವರ್ಷಗಳಿಂದ ಪ್ರಯಾಗದಂತಹ ತಾಣಗಳಿಗೆ ಜನರನ್ನು ಸೆಳೆಯುತ್ತಿರುವುದು ಯಾವುದು? ಇಂದಿಗಾದರೂ ಅನುಕೂಲ-ಅನಾನುಕೂಲಗಳ ಲೆಕ್ಕಿಸದೇ ಕೋಟ್ಯಂತರ ಜನ ಬಂದು ಹೋದರಲ್ಲ, ಅವರನ್ನು ಎಳೆದದ್ದು ಯಾವುದು? ನದಿಯ ಮೇಲಣ ಭಕ್ತಿಯೇ? ತಾವೆಸಗಿದ ಪಾಪದ ಭಯವೇ? ಹರಿವ ಮಹಾನದಿಯಲ್ಲಿ ಮುಳುಗಿ ವಿಶ್ವದೊಂದಿಗೆ, ಪ್ರಕೃತಿಯೊಂದಿಗೆ ಸಾಧಿಸುವ ತಾದಾತ್ಮ್ಯವೇ? `ಸತ್ಯ, ಸ್ವ ಶಿಸ್ತು (ತಪಸ್ಸು), ಜ್ಞಾನ, ಸರ್ವಭೂತದಯೆಗಳು ನಮ್ಮನ್ನು ಶುದ್ಧಗೊಳಿಸುತ್ತವೆ; ಶುದ್ಧಗೊಳಿಸುವ ಐದನೆಯದು ನೀರು’ ಎನ್ನುತ್ತದೆ ಬೌಧಾಯನ ಸೂತ್ರ. ಶುದ್ಧಗೊಳ್ಳಲು ಪರಿಶ್ರಮಪಡಬೇಕಾದ ಮೊದಲ ನಾಲ್ಕನ್ನು ಬಿಟ್ಟು ಸುಲಭದ್ದೆಂದು ಐದನೆಯದನ್ನು ಅಪ್ಪಿಕೊಂಡೆವೇ? ನೂರ ನಲವತ್ತೈದು ಕೋಟಿ ಜನರ ದೇಶದಲ್ಲಿ ಒಂದು ಊರಿಗೆ ನಿರ್ದಿಷ್ಟ ಕಾಲಾವಧಿಯೊಳಗೆ ಜನರು ಬಂದರೆ, ನದಿಗಿಳಿದರೆ, ಮಿಂದು ಉಟ್ಟ ಬಟ್ಟೆಯನಲ್ಲೇ ಬಿಸುಟರೆ, ತಂದ, ತಿಂದ ಪ್ಲಾಸ್ಟಿಕ್ ಕಸದ ಗುಡ್ಡೆಯನ್ನು ನದಿಗೇ ಹಾಕಿ ಬಂದರೆ.. ನದಿಯ ಗತಿ ಏನಾಗಬೇಕು? ಊರಿನ ಗತಿ ಏನಾದೀತು? ಯಾರ ಪಾಪ ಯಾರು ತೊಳೆಯುವುದು?

ಇದನ್ನು ಓದಿದ್ದೀರಾ? ಮಹಾಜಾತ್ರೆಯ ನಂತರದ ಚಿತ್ರಗಳು | ಭಾಗ 1

ನಮ್ಮಮ್ಮ, ಅಪ್ಪ ಸೇರಿದಂತೆ ಬಹುತೇಕ ಆಸ್ತಿಕ ಜನರು ಸಂಗಮದಲ್ಲಿ ಮಿಂದರೆ ಪಾಪ ಕಳೆಯುವುದೆಂದು ಅಲ್ಲಿಗೆ ಹೋದದ್ದಾಗಿ ಹೇಳಿದರು. ಯಾವುದು ಪಾಪ? ನಾವು ಎಸಗಿದ ತಪ್ಪು ಅಥವಾ ಬೇರೆಯವರಿಗೆ ಉಂಟುಮಾಡಿದ ತೊಂದರೆಯೇ `ಪಾಪ’ದ ಸರಳ ವ್ಯಾಖ್ಯಾನ. ಸಮಾಜವೊಂದು ನೈತಿಕವಾಗಿ, ನ್ಯಾಯಯುತವಾಗಿ ಮುಂದುವರೆಯಲು ಮಾಡಿದ ತಪ್ಪನ್ನೇ ಮತ್ತೆ ಮಾಡದಿರುವುದು, ಮಾಡಿರುವುದನ್ನು ನಿವಾರಿಸಿಕೊಳ್ಳುವುದು ಅವಶ್ಯ. ಅದಕ್ಕೆ ಆತ್ಮಾವಲೋಕನವೂ ಅಗತ್ಯ. ಮತ್ತೆ ತಪ್ಪೆಸಗದಂತಹ ನೈತಿಕ ನೆಲೆಗಟ್ಟಿನ ವ್ಯಕ್ತಿತ್ವ, ಮನಸ್ಥಿತಿ ರೂಪಿಸುವ ಮಾರ್ಗದರ್ಶಕ ಸೂತ್ರಗಳೆಂದು ಧರ್ಮ, ಪಂಥಗಳು ಬೆಳೆದದ್ದು ಹೀಗೇ ತಾನೇ? 

ಆದರೆ ಮಾಡಿದ ಪಾಪ ಪರಿಹಾರವಾಗುವುದು ಹೇಗೆ? ನಾವು ಎಸಗಿದ ತಪ್ಪು ಅಥವಾ ಬೇರೆಯವರಿಗೆ ಉಂಟುಮಾಡಿದ ತೊಂದರೆ(=ಪಾಪ)ಗಳನ್ನು ಮೊದಲು ಗುರುತಿಸಿಕೊಳ್ಳಬೇಕು. ಬಳಿಕ ಹಾಗೆ ಮಾಡಬಾರದಿತ್ತೆಂದೂ, ಅದರ ಪರಿಣಾಮವನ್ನು ಈಗಲಾದರೂ ಸರಿಪಡಿಸಬಹುದೇನೋ ಎಂದು ಯೋಚಿಸಬೇಕು. ನಮ್ಮ ಸ್ವಭಾವ, ನಡವಳಿಕೆ, ವ್ಯಕ್ತಿತ್ವದಲ್ಲಿ ಬದಲಾವಣೆ ತಂದುಕೊಳ್ಳಲು ಪ್ರಯತ್ನಿಸಬೇಕು. ಇದೊಂದು ನಿರಂತರ, ದೀರ್ಘ ಪ್ರಕ್ರಿಯೆ. ಇದು ಒಮ್ಮೆ `ಪವಿತ್ರ’ ಜಲದಲ್ಲಿ ಚಣಮಾತ್ರ ಮುಳುಗೆದ್ದು ಆಗುವಂತಹುದೇ? ನದಿಯಲ್ಲಿ ಮುಳುಗೇಳುವ ಜನಕೋಟಿ ಮಾಡಿದ್ದನ್ನು ತೊಳೆದುಕೊಂಡು ಮತ್ತೆ ಪಾಪ ಎಸಗುವುದಿಲ್ಲ ಎಂಬ ಸಂಕಲ್ಪ ಮಾಡಿಕೊಳ್ಳುವರೇ? ಅಷ್ಟು ಆತ್ಮಾವಲೋಕನ, ತಾದಾತ್ಮ್ಯ ಕುಂಭಮೇಳದಂತಹ ಮಹಾ ಜನಜಾತ್ರೆಯಲ್ಲಿ ಸಾಧ್ಯವಾಗುವುದೇ? ತಾನೆಸಗಿರುವ ತಪ್ಪು ಯಾವುದೆಂದು ಮಾಡಿದವರೇ ಗುರುತಿಸಿಕೊಳ್ಳದೆ ಗಂಗೆಯಲ್ಲಿ ಮುಳುಗಿಬಿಟ್ಟರೆ ಅದು ತೊಳೆದುಹೋಗುವುದೇ? ಇದು ಪಾಪ ನಿವಾರಣೆಯ ಅತಿ ಸುಲಭದ, ಮತ್ತೆ ಪಾಪ ಎಸಗಲು ಪ್ರೇರೇಪಿಸುವ ಅಪಾಯದ ದಾರಿಯಲ್ಲವೆ?

ಆಯಿತು. ಈ ತರ್ಕಗಳನ್ನತ್ತ ಇಟ್ಟು ಸಂಗಮ ಸ್ನಾನದ ಬಳಿಕ ತಮ್ಮ ಪಾಪ ಕಳೆಯಿತೆಂದು ಜನರಾದರೂ ನಿರಾಳವಾಗುವರೇ ಎಂದು ನೋಡಿದರೆ ಹಾಗೆ ಕಾಣುವುದಿಲ್ಲ. ಮಾಘ ಸ್ನಾನದ ಬಳಿಕ ಪ್ರಯಾಗದಿಂದ ಕಾಶಿ, ಅಯೋಧ್ಯೆ, ಮಥುರಾ, ಉಜ್ಜಯಿನಿ ಎಂದು ಹತ್ತಿರ ಇರುವ ಕ್ಷೇತ್ರಗಳಿಗೆಲ್ಲ ಹೋಗಿ, ಅಗೋಚರ ಶಕ್ತಿಯ ಕೃಪೆಗಾಗಿ ಆರ್ತರಾಗಿ, ಸರತಿಯಲ್ಲಿ ನಿಲ್ಲುತ್ತಾರೆ. ದರ್ಶನ ಪಡೆದ ಬಳಿಕವೂ ಮತ್ತಿನ್ನೆಲ್ಲೋ ಹೋಗಬೇಕೆಂಬ ಹಂಬಲದೊಂದಿಗೆ ಮನೆಗೆ ಮರಳುತ್ತಾರೆ. ಇದರರ್ಥ ಎಲ್ಲ ಆಚರಣೆ, ಯಾತ್ರೆ, ದರ್ಶನಗಳ ಬಳಿಕವೂ ಪಾಪ ವಿಮೋಚನೆಯ ಅಥವಾ ಅಭಯದ ಅನುಭವ ಭಕ್ತಾದಿಗಳಿಗೆ ಆಗುತ್ತಿಲ್ಲ. ಅದಕ್ಕಾಗಿಯೇ ಒಂದಾದ ಮೇಲೊಂದು ಪಾಪ ಪರಿಹಾರದ ಆಚರಣೆಯಲ್ಲಿ ನಿರಂತರವಾಗಿ ತೊಡಗಿರಬಹುದು. ಅಥವಾ ಮೂಲದಲ್ಲಿ ಇದು ಪಾಪ, ಪರಿಹಾರ ಎನ್ನುವುದಕ್ಕಿಂತ ದಣಿಸಿ ಬೇಸರ ಹುಟ್ಟಿಸುವ ದಿನಚರಿಯಿಂದ ಕೆಲಕಾಲ ಮುಕ್ತರಾಗಿ ಕಳೆಯುವ ಹಂಬಲವಿರಬಹುದು ಅಥವಾ ಭಾರೀ ಜಂಗುಳಿಯಲ್ಲಿ ಕರಗಿ ತಮ್ಮ ತಾ ಕಳೆದುಕೊಂಡು, ಅದರೊಡನೆ ತನ್ನ ತಾನು ಗುರುತಿಸಿಕೊಳ್ಳುವ `ಮಂದೆಯ ಮನಸ್ಥಿತಿ’ ಉದ್ದೀಪನವಾಗಬಹುದು.

ಅದೇನೇ ಇರಲಿ, ಬಲಿಷ್ಠ ಪ್ರಭೇದವಾಗಿ ಅತಿಹೆಚ್ಚು ಸಂಖ್ಯೆಯಲ್ಲಿ ಭೂಮಿಯನ್ನಾವರಿಸಿಕೊಂಡಿರುವ ಮನುಷ್ಯರು ಮಂದೆಯ ಮನಸ್ಥಿತಿಯಿಂದ ಒತ್ತಿ ನುಗ್ಗಿದರೆ ಇತರ ಜೀವಿಗಳ ಪಾಡೇನು? ವಿವಿಧ ಸಾಮರ್ಥ್ಯ, ದೌರ್ಬಲ್ಯಗಳ ಜನರು ಒಟ್ಟಿಗೆ ನ್ಯಾಯಯುತ ಬದುಕು ನಡೆಸುವುದಾದರೂ ಸಾಧ್ಯವೇನು?

ಇದನ್ನು ಓದಿದ್ದೀರಾ? ಮಹಾಜಾತ್ರೆಯ ನಂತರದ ಚಿತ್ರಗಳು | ಭಾಗ 2

ಕೊನೆಗೆ ನಮಗನಿಸಿದ್ದು: ನ್ಯಾಯಯುತ ಬದುಕು ಎಲ್ಲ ಆಚರಣೆಗಳಿಗೆ ಸಮ ಎಂದು ಬುದ್ಧ, ಬಸವಣ್ಣ-ಅಕ್ಕ-ಅಲ್ಲಮ-ಅಂಬಿಗರ ಚೌಡಯ್ಯನಾದಿಯಾಗಿ ವಚನಕಾರರು, ಕನಕ-ಪುರಂದರರು, ಶರೀಫ, ಕಬೀರ, ಕಡಕೋಳ ಮಡಿವಾಳಪ್ಪನವರಂತಹ ತತ್ವಪದಕಾರರು ಹಾಡಿದ್ದಾರೆ. ಆ ಹಾಡು ಎದೆಗಿಳಿದಿಲ್ಲ ಎನ್ನಲು ವರ್ತಮಾನದ ಸಮಾಜ ಸಾಕ್ಷಿಯಾಗಿದೆ. `ಎನ್ನ ಕಾಲೇ ಕಂಭ ದೇಹವೇ ದೇಗುಲ ಶಿರವೇ ಹೊನ್ನ ಕಳಸ’ವೆಂಬ, ನಿರ್ಗುಣ ನಿರಾಕಾರಿ ಅಧ್ಯಾತ್ಮವನ್ನು ಬೆಳೆಸಿಕೊಳ್ಳಬೇಕಿದೆ. ಹೊಸ ಪೀಳಿಗೆಯು ಬಾಳುವೆಯ ಹೊಸ ದಾರಿಗಳೊಂದಿಗೆ ನ್ಯಾಯದೆಡೆಗೆ ತುಡಿಯುವಂತೆ ಪ್ರೇರೇಪಿಸಬೇಕಿದೆ.

ಯುವಜನರೇ ಯೋಚಿಸಿ. ಭವಿಷ್ಯದ ನಿಮ್ಮ ಭೂಮಿ ಹೇಗಿರಬೇಕೆಂಬ ಬಗೆಗೆ ಗಮನ ಹರಿಸಿ. ನಿಸರ್ಗದೊಡನೆ ಬಾಳುವ ದಾರಿಗಳ ಹುಡುಕಿ. ಪುರಾತನ ಅವಿವೇಕಗಳನ್ನು ಕಿತ್ತೊಗೆದು, ಸಹಬಾಳುವೆಯ ಬೀಜದುಂಡೆಗಳನ್ನು ಎಲ್ಲೆಡೆ ಪಸರಿಸಿ. ಸಮತೆಯ ಬದುಕನ್ನು ಕಟ್ಟಿಕೊಳ್ಳಿ. ನೆಮ್ಮದಿಯಿಂದ ನಿರ್ಗಮಿಸಲು ನಮಗೆ ಅನುವು ಮಾಡಿ.

ಡಾ. ಎಚ್. ಎಸ್. ಅನುಪಮಾ

ವೈದ್ಯೆ, ಸಾಹಿತಿ.

More articles

Latest article