ಬೆಂಗಳೂರು: ಇನ್ ಸ್ಟಾಗ್ರಾಂ ರೀಲ್ಸ್‌ಗಾಗಿ ವಿಡಿಯೋ ಮಾಡುತ್ತಿರುವಾಗ ಮಹಿಳೆಯೊಬ್ಬರು ಮಗಳ ಎದುರೇ ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋದ ಹೃದಯ ವಿದ್ರಾವಕ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಏಪ್ರಿಲ್ 16 ರಂದು ಉತ್ತರಾಖಂಡದ ಉತ್ತರಕಾಶಿ ಬಳಿಯ ಗಂಗಾನದಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸುಮಾರು 25 ವರ್ಷದ ಮಹಿಳೆಯೊಬ್ಬರು ವಿಡಿಯೋ ಮಾಡುವಂತೆ ಹೇಳಿ ತನ್ನ ಪುತ್ರಿಯ ಕೈಗೆ ಮೊಬೈಲ್ ಕೊಟ್ಟು ನೀರಿಗೆ ಇಳಿದಿದ್ದಾರೆ. ಅಮ್ಮನ ಮಾತಿನಂತೆ ಮಗಳು ವಿಡಿಯೋ ಮಾಡುತ್ತಿದ್ದಳು. ರೀಲ್ಸ್ ವಿಡಿಯೋಗಾಗಿ ನಟಿಸುವತ್ತ ಮಹಿಳೆ ಚಿತ್ತ ಹರಿಸಿದ್ದರು. ಈ ವೇಳೆ ಮಹಿಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.
ಮಹಿಳೆ ನೀರಿನ ಸೆಳೆತಕ್ಕೆ ಸಿಲುಕಿದಾಗ ವಿಡಿಯೋ ಮಾಡುತ್ತಿದ್ದ ಬಾಲಕಿ ‘ಮಮ್ಮಿ.. ಮಮ್ಮಿ..‘ ಎಂದು ಚೀರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮೃತ ಮಹಿಳೆಯ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಮಹಿಳೆಯ ಪತ್ತೆಗಾಗಿ ವಿಪತ್ತು ನಿರ್ವಹಣಾ ತಂಡದವರು ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ರೀಲ್ಸ್ ಹುಚ್ಚಿಗಾಗಿ, ಸಾಮಾಜಿಕ ಮಾಧ್ಯಮದಲ್ಲಿ ಹೆಸರು ಮಾಡಬೇಕು ಎಂದು ಮೈಮರೆತರೆ ಇಂತಹ ಆಪತ್ತಿಗೆ ಒಳಗಾಗಬೇಕಾಗುತ್ತದೆ ಎಂದು ಹಲವು ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ.