ನವದೆಹಲಿ: ವಕ್ಫ್ ತಿದ್ದುಪಡಿ ಕಾಯಿದೆ-2025 ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯವರೆಗೆ ವಕ್ಫ್ ಮಂಡಳಿಗೆ ಮುಸ್ಲಿಮೇತರರ ನೇಮಕಾತಿ ಮಾಡುವಂತಿಲ್ಲ ಹಾಗೂ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮಹತ್ವದ ಆದೇಶ ನೀಡಿದೆ.
ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ನೇಮಕ ಮಾಡಲು ಹೊಸ ತಿದ್ದುಪಡಿ ಅನುವು ಮಾಡಿಕೊಟ್ಟಿದೆ. ಈ ವಿವಾದಗಳನ್ನು ಕುರಿತು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠ ಮುಂದಿನ ಆದೇಶದವರೆಗೆ ಅಂತಹ ಯಾವುದೇ ನೇಮಕಾತಿಗಳನ್ನು ಮಾಡಬಾರದು ಎಂದು ಸೂಚನೆ ನೀಡಿದೆ.
ಈಗಾಗಲೇ ನೋಟಿಫೈ ಮಾಡಿದ ಅಥವಾ ನೊಂದಾಯಿಸಲಾದ, ಹಾಗೂ ದೀರ್ಘ ಕಾಲದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಿರುವ (ವಕ್ಫ್ ಬೈ ಯೂಸರ್) ಆಸ್ತಿಗಳನ್ನು ಒಳಗೊಂಡಂತೆ ಯಾವುದೇ ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳು ಅವುಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದೂ ನ್ಯಾಯಾಲಯ ಸೂಚಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ತನ್ನ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಒಂದು ವಾರದ ಕಾಲಾವಕಾಶ ನೀಡಿದ್ದು, ಅರ್ಜಿಗಳ ವಿಚಾರಣೆಯನ್ನು ಮೇ 5 ಕ್ಕೆ ಮುಂದೂಡಿದೆ.
1995 ರ ವಕ್ಫ್ ಕಾಯ್ದೆಗೆ 2025 ರಲ್ಲಿ ಮಾಡಲಾದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ಸತತ ಎರಡನೇ ದಿನವಾದ ಗುರುವಾರವೂ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.