ಸುಪ್ರೀಂ ಕೋರ್ಟ್‌ ಸಿಜೆಐ ಸ್ಥಾನಕ್ಕೆ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ನೇಮಕ

Most read

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ (ಸಿಜೆಐ) ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ (ಬಿ.ಆರ್‌. ಗವಾಯಿ) ಆಯ್ಕೆಯಾಗಲಿದ್ದಾರೆ. ಅವರ ಹೆಸರನ್ನು ಸಿಜೆಐ ನ್ಯಾ. ಸಂಜೀವ್‌ ಖನ್ನಾ ಅವರು ಶಿಫಾರಸು ಮಾಡಿದ್ದಾರೆ. ಸಿಜೆಐ ಖನ್ನಾ ಅವರು ಮೇ 13 ರಂದು ನಿವೃತ್ತಿಯಾಗುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ನ್ಯಾ. ಗವಾಯಿ ಅವರನ್ನು ಮುಂದಿನ ಸಿಜೆಐ ಆಗಿ ನೇಮಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದಾರೆ. ನ್ಯಾ. ಗವಾಯಿ ಅವರು ಮೇ 14 ರಂದು ಸುಪ್ರೀಂ ಕೋರ್ಟ್‌ನ 52ನೇ ಸಿಜೆಐ ಆಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ.

ಮಹಾರಾಷ್ಟ್ರದ ಅಮರಾವತಿ ಮೂಲದವರಾದ ಇವರು 2019ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಇವರು ಮುಖ್ಯ ನ್ಯಾಯಮೂರ್ತಿಗಳಾಗಿ 6 ತಿಂಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಎರಡನೇ ಮುಖ್ಯ ನ್ಯಾಯಮೂರ್ತಿ ಎಂಬ ಕೀರ್ತಿಗೂ ಇವರು ಭಾಜನರಾಗಲಿದ್ದಾರೆ. ದಲಿತ ಸಮುದಾಯದ ಕೆ.ಜೆ. ಬಾಲಕೃಷ್ಣನ್‌ ಅವರು 2007ರಲ್ಲಿ ಮೊದಲ ಸಿಜೆಐ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಗವಾಯಿ ಅವರು ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ ಪೀಠದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಎಲೆಕ್ಟೋರಲ್‌ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿದ ಪೀಠದಲ್ಲೂ ಅವರು ಕೆಲಸ ನಿರ್ವಹಿಸಿದ್ದರು.

More articles

Latest article