ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಚಾರ್ಜ್ ಶೀಟ್ ಸಲ್ಲಿಸಿರುವುದನ್ನು ಖಂಡಿಸಿ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಅಕ್ಬರ್ ರಸ್ತೆಯ 24ನೇ ಸಂಖ್ಯೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಏಪ್ರಿಲ್ 9 ರಂದು ಆರೋಪಪಟ್ಟಿ ಸಲ್ಲಿಸಿರುವುದಾಗಿ ಜಾರಿ ನಿರ್ದೇಶನಾಲಯ ಮಾಹಿತಿ ಹಂಚಿಕೊಂಡಿತ್ತು. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಷ್ಟೇ ಅಲ್ಲದೆ ಹಿರಿಯ ಕಾಂಗ್ರೆಸ್ ನಾಯಕರಾದ ಸ್ಯಾಮ್ ಪಿತ್ರೋಡಾ ಮತ್ತು ಸುಮನ್ ದುಬೆ ಅವರನ್ನೂ ಸಹ ಆರೋಪಿಗಳು ಎಂದು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಕೇಂದ್ರದ ಕ್ರಮವನ್ನು ಕಟು ಶಬ್ಧಗಳಲ್ಲಿ ಟೀಕಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ, ಇದು ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ದ್ವೇಷದ ಕ್ರಮವಾಗಿದೆ ಎಂದು ಹೇಳಿದ್ದಾರೆ.
ದಶಕದ ಹಿಂದಿನ ಪ್ರಕರಣ ಇದಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಒಂದೇ ಒಂದು ಪೈಸೆಯೂ ವಿನಿಮಯ ಆಗಿಲ್ಲ. ಸರ್ಕಾರ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ನಾವು ಅವರ ವಿರುದ್ಧ ಹೋರಾಟ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಶ್ರೀನಾತೆ ಗುಡುಗಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಹೋರಾಟ ಮತ್ತು ಅವರು ಪ್ರಸ್ತಾಪಿಸುವ ವಿಷಯಗಳಿಂದ ಬಿಜೆಪಿ ಅವರಿಗೆ ಹೆದರುತ್ತಿದೆ ಎಂದು ಶ್ರೀನಾತೆ ಹೇಳಿದ್ದಾರೆ. ಇ.ಡಿಯ ಈ ಕ್ರಮಕ್ಕೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಚಾರ್ಜ್ ಶೀಟ್ ಸಲ್ಲಿಸಿರುವುದು ಪ್ರತೀಕಾರದ ರಾಜಕೀಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.