ಕಳ್ಳತನ ಮಾಡುತ್ತಿದ್ದ ಡೆಲಿವರಿ ಬಾಯ್‌ ಸೇರಿ ಮೂವರ ಬಂಧನ: 70 ಗ್ರಾಂ. ಚಿನ್ನ ವಶ

Most read

ಬೆಂಗಳೂರು: ಮನೆ ಮಾಲೀಕರು ಇಲ್ಲದಿರುವ ಸಮಯದಲ್ಲಿ ಕಳ್ಳತನ ಮಾಡುತ್ತಿದ್ದ ಫುಡ್‌ ಡೆಲಿವರಿ ಬಾಯ್ ಸೇರಿ ಮೂವರು ಆರೋಪಿಗಳನ್ನು ಬೆಳ್ಳಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೊಡತಿ ಗೇಟ್‌ ನಿವಾಸಿ ದೀಕ್ಷಿತ್, ಕ್ಲೆಂಟನ್ ಹಾಗೂ ಆಭರಣ ಅಂಗಡಿ ಮಾಲೀಕ ಮೋತಿಲಾಲ್ ಬಂಧಿತ ಆರೋಪಿಗಳು.

ಇವರಿಂದ 70 ಗ್ರಾಂ. ಚಿನ್ನ ಕಳ್ಳತನಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳ್ಳಂದೂರಿನ ನಿವಾಸಿ ಸುಧಾಕರ್ ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಗಿತ್ತು.

ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ದೀಕ್ಷಿತ್‌, ಹೆಚ್ಚಿನ ಹಣ ಸಂಪಾದನೆಗಾಗಿ ಕಳ್ಳತನ ಮಾಡಲು ಮುಂದಾಗಿದ್ದ. ಮಾರ್ಚ್‌ 2ರಂದು ಬೆಳ್ಳಂದೂರಿನ ಶುಭಾ ಎನ್‌ ಕ್ಲೇವ್ ಲೇಔಟ್ ಹತ್ತಿರದ ಮನೆಗೆ ಫುಡ್‌ ಡೆಲಿವರಿ ಮಾಡಲು ಬಂದಿದ್ದ. ಈ ವೇಳೆ ದೂರುದಾರರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ, ಸ್ನೇಹಿತ ಕ್ಲೆಂಟನ್‌ ನನ್ನು ಬರಹೇಳಿದ್ದ. ನಂತರ ಇಬ್ಬರೂ ಸೇರಿ ಮನೆಯಲ್ಲಿದ್ದ 210 ಗ್ರಾಂ. ಚಿನ್ನ ಹಾಗೂ ರೂ. 50 ಸಾವಿರ ನಗದು ಕಳ್ಳತನ ಮಾಡಿದ್ದರು. ಕಳವು ಮಾಡಿದ ಚಿನ್ನವನ್ನು ಚಿನ್ನದ ವ್ಯಾಪಾರಿ ಮೋತಿಲಾಲ್‌ ಬಳಿ ಅಡವಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಚಿನ್ನವನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಟೀ ಅಂಗಡಿ ತೆರೆಯಲು ಆರೋಪಿಗಳು ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

More articles

Latest article