ಬಿಜೆಪಿ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾ. ಡಿ.ಕುನ್ಹಾ ಸಮಿತಿ ಶಿಫಾರಸ್ಸು

Most read

ಬೆಂಗಳೂರು: ಕೋವಿಡ್‌ ಹಗರಣದಲ್ಲಿ ಅಕ್ರಮ ನಡೆಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಉನ್ನತ ಅಧಿಕಾರಿಗಳು, ಬೆಂಗಳೂರು ಗ್ರಾಮೀಣ, ಗದಗ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ನ್ಯಾಯಮೂರ್ತಿ ಮೈಖೇಲ್‌ ಡಿ ಕುನ್ಹಾ ಸಮಿತಿ ಶಿಫಾರಸ್ಸು ಮಾಡಿದೆ. ಕೋವಿಡ್‌ ಹಗರಣ ಕುರಿತು ನ್ಯಾಯಮೂರ್ತಿ ಮೈಖೇಲ್‌ ಡಿ ಕುನ್ಹಾ ಸಮಿತಿ ತನಿಖೆ ನಡೆಸುತ್ತಿದೆ.

 ಬಿಬಿಎಂಪಿಯ ನಾಲ್ಕು ವಿಭಾಗಗಳು ಮತ್ತು ಮೂರು ಜಿಲ್ಲೆಗಳಲ್ಲಿ ಶೇ. 54 ರಷ್ಟು ಅಂದರೆ 157.55 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಸಮಿತಿ ಪತ್ತೆ ಹಚ್ಚಿದೆ. ಇತ್ತೀಚೆಗಷ್ಟೇ ಸಮಿತಿಯು ತನ್ನ ಎರಡನೇ ವರದಿ ಸಲ್ಲಿಸಿದ್ದು ವರದಿಯ ಅಂಶಗಳು ಬಹಿರಂಗವಾಗಿವೆ. ನ್ಯಾಯಮೂರ್ತಿ ಕುನ್ಹಾ ಅವರು, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ ಮತ್ತು ಯಲಹಂಕ ವಲಯಗಳಲ್ಲಿ ಮಾರ್ಚ್‌ 2020 ರಿಂದ ಡಿಸೆಂಬರ್‌ 2022 ರಿಂದ ಅವ್ಯವಹಾರ ನಡೆಸಿರುವ ಜಂಟಿ ಆಯುಕ್ತರು, ಆರೋಗ್ಯ ವಿಭಾಗದ ಅಧಿಕಾರಿಗಳು ಮತ್ತಿತರರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದೆ.

ಈ ನಾಲ್ಕೂ ವಲಯಗಳಲ್ಲಿ 184.62 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳನ್ನು ಖರೀದಿಸಲಾಗಿದ್ದು, 113.09 ಕೋಟಿ ರೂ. ಅಕ್ರಮ ನಡೆದಿದ್ದು, ಶೇ.61.31 ರಷ್ಟು ಅವ್ಯವಹಾರ ನಡೆದಿದೆ. ಲೋಕಾಯುಕ್ತ ಅಥವಾ ಸೂಕ್ತ ಏಜೆನ್ಸಿಯಿಂದ ತನಿಖೆ ನಡೆಸಬೇಕು ಮತ್ತು ನಷ್ಟವನ್ನು ಈ ಉಪಕರಣ ಮತ್ತು ಔಷಧಿಗಳನ್ನು ಪೂರೈಕೆ ಮಾಡಿರುವ ಕಂಪನಿಗಳಿಂದ ವಸೂಲಿ ಮಾಡಬೇಕು ಎಂದೂ ಶಿಫಾರಸ್ಸು ಮಾಡಿದೆ.

ಇದೇ ರೀತಿಯ ಶಿಕ್ಷೆಯನ್ನು ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತು ಇತರ ಅಧಿಕಾರಿಗಳಿಗೆ ವಿಧಿಸಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 45.55 ಕೋಟಿ ಖರೀದಿಯಲ್ಲಿ 27.83 ಕೋಟಿ ರೂ ಅವ್ಯವಹಾರ ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ 23.71 ಕೋಟಿ ರೂ ಖರೀದಿಯಲ್ಲಿ 5.04 ಕೋಟಿ ರೂ ಮತ್ತು ಗದಗ ಜಿಲ್ಲೆಯಲ್ಲಿ 35.13 ಕೋಟಿ ರೂ. ಖರೀದಿಯಲ್ಲಿ 23.71 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವರದಿ ತಿಳಿಸಿದೆ.  

ಕೆಟಿಟಿಪಿ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಈ ಅಧಿಕಾರಿಗಳು ಖರೀದಿಯಲ್ಲಿ ಭ್ರಷಾಚಾರ ನಡೆಸಿದ್ದಾರೆ. ಸೂಕ್ತ ರೀತಿಯಲ್ಲಿ ಖರೀದಿ ಪ್ರಕ್ರಿಯೆಗಳನ್ನು ನಡೆಸಿಲ್ಲ. ವೈದ್ಯಕೀಯ ಉಪಕರಣಗಳನ್ನು ಖರೀದಿಸುವಾಗ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆ ಪಾವತಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನ್ಯಾಯಮೂರ್ತಿ ಕುನ್ಹಾ ಸಮಿತಿಯನ್ನು ಆಗಸ್ಟ್‌ 2023 ರಲ್ಲಿ ರಚಿಸಿತ್ತು. ಆಗಸ್ಟ್‌ 2024ರಲ್ಲಿ ಮೊದಲ ವರದಿಯನ್ನು ಸಲ್ಲಿಸಿತ್ತು. ಸಮಿತಿಯ ಅವಧಿಯನ್ನು 2025 ರ ಅಂತ್ಯದವರೆಗೂ ವಿಸ್ತರಿಸಲಾಗಿದೆ.

ಮೊದಲ ವರದಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ವೆಂಟಿಲೇಟರ್ಸ್‌, ಪಿಪಿಇ ಕಿಟ್‌, ಔಷಧಿಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆಪಾದೆನಗಳು ಕೇಳಿ ಬಂದಿದ್ದವು.

More articles

Latest article