ಜೈಪುರ: ರಾಜಸ್ಥಾನ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಈ ದಾಳಿ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಗ್ ಖಚರಿಯಾವಾಸ್, ನೀವು (ಬಿಜೆಪಿ) ಇದನ್ನು ಪ್ರಾರಂಭಿಸಿದ್ದೀರಿ ನಾವು ಮುಂದುವರಿಸುತ್ತೇವೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣವೊಂದರ ತನಿಖೆಯ ಭಾಗವಾಗಿ ಪ್ರತಾಪ್ ಸಿಂಗ್ ಅವರಿಗೆ ಸೇರಿದ ಮನೆ ಮತ್ತು ಇತರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಗ್, ‘ಕಾಲ ಬದಲಾದ ಹಾಗೆ ಸರ್ಕಾರಗಳು ಬದಲಾಗುತ್ತವೆ. ರಾಹುಲ್ ಗಾಂಧಿ ಅವರು ಪ್ರಧಾನಿಯಾದ ಮೇಲೆ ಬಿಜೆಪಿಯವರ ಸ್ಥಿತಿ ಏನಾಗಬಹುದೆಂದು ಯೋಚಿಸಿ ಎಂದು ಗುಡುಗಿದ್ದಾರೆ.
ನಾವು ಅಧಿಕಾರಕ್ಕೆ ಬಂದ ಮೇಲೆ ನೀವು ಮಾಡಿದ್ದನ್ನೇ ಮುಂದುವರಿಸುತ್ತೇವೆ. ಅವರು ಎಷ್ಟು ಬೇಕಾದರೂ ಹುಡುಕಾಟ ನಡೆಸಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ಯಾರಿಗೂ ಹೆದರುವ ಅಗತ್ಯ ಇಲ್ಲ. ಅಧಿಕಾರಿಗಳಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.
ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಬಿಜೆಪಿ ಬಿಡಬೇಕು ಎಂದೂ ಅವರು ತಿಳಿಸಿದ್ದಾರೆ.