ಅಲಹಾಬಾದ್ (ಉತ್ತರಪ್ರದೇಶ): ಮದುವೆಯಾಗಬೇಕಿದ್ದ ಭಾವಿ ಪತಿಯ ಎದುರೇ ಯುವತಿಯೊಬ್ಬರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ಅಖಿಲೇಶ್ ಪ್ರತಾಪ್ ಸಿಂಗ್ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಈ ದುರಂತ ಪ್ರಕರಣ ವರದಿಯಾಗಿದೆ.
ಸಂತ್ರಸ್ತ ಯುವತಿ ಮತ್ತು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಅವರ ವಿವಾಹ ನಿಶ್ಚಯವಾಗಿತ್ತು. ಏಪ್ರಿಲ್ 10 ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ, ಸಂತ್ರಸ್ತ ಯುವತಿ ಮತ್ತು ನಿಶ್ಚಿತ ವರ ಇಬ್ಬರೂ ಕೆಲಸ ಮುಗಿಸಿಕೊಂಡು ಹಿಂತಿರುಗುತ್ತಿದ್ದು, ಮರದ ಕೆಳಗೆ ಕುಳಿತು ಮಾತನಾಡುತ್ತಿದ್ದರು. ಇಬ್ಬರೇ ಇರುವುದನ್ನು ಕಂಡ ದುಷ್ಕರ್ಮಿಗಳ ಗುಂಪೊಂದು ಅವರ ಹತ್ತಿರ ಹೋಗಿ ಅಸಭ್ಯವಾಗಿ ವರ್ತಿಸಿದ್ದಾರೆ.
ನಂತರ ವರನನ್ನು ಒತ್ತಾಯಾಳಾಗಿಟ್ಟುಕೊಂಡು ಎಂಟು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅವರ ಬಳಿ ಇದ್ದ ಹಣವನ್ನೂ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಅಖಿಲೇಶ್ ಪ್ರತಾಪ್ ಸಿಂಗ್ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತ್ವರಿತ ನ್ಯಾಯಕ್ಕಾಗಿ ಪೊಲೀಸರು ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.