ನಲವತ್ತೈವತ್ತು ಕೋಟಿ ಜನ ಒಂದೂವರೆ ತಿಂಗಳ ಅವಧಿಯಲ್ಲಿ ನೆರೆದ ಮಹಾಜಾತ್ರೆಯ ಬಳಿಕ ಅಲ್ಲಿಯ ಊರು, ಜನ, ನದಿ, ನೆಲಗಳ ಕಾಣಬೇಕೆಂದು, ಅಕ್ಬರ್ ಕಟ್ಟುವಾಗ ಇಲಾಹಾಬಾದ್ ಆಗಿದ್ದದ್ದು ನಂತರ ಅಲಹಾಬಾದ್ ಆಗಿ ಈಗ ಪ್ರಯಾಗರಾಜ್ ಆಗಿರುವ ಊರಿಗೆ ಹೋದಾಗ ಅಲ್ಲಿ ಕಣ್ಣಿಗೆ ಕಂಡ, ಬೊಗಸೆಗೆ ದಕ್ಕಿದ ಅನುಭವಗಳನ್ನು ನವಿರಾಗಿ ಕಟ್ಟಿಕೊಟ್ಟಿದ್ದಾರೆ ಡಾ. ಎಚ್ ಎಸ್ ಅನುಪಮಾ. ಮೂರು ಕಂತುಗಳ ಈ ಲೇಖನದ ಮೊದಲ ಕಂತು ಇಲ್ಲಿದೆ.
ಈ ಶಹರ ಹಲವು ಖ್ಯಾತನಾಮರ ನೆಲೆ. ಹರಿವಂಶರಾಯ್ ಬಚ್ಚನ್, ಸುಮಿತ್ರಾನಂದನ್ ಪಂತ, ಮಹಾದೇವಿ ವರ್ಮ, ಫಿರಖ್ ಗೋರಖಪುರಿ (ರಘುಪತಿ ಸಹಾಯ್), ಝಾಮಿನ್ ಅಲಿ, ಶಬ್ನಮ್ ನಖ್ವಿ, ರುಡ್ಯಾರ್ಡ್ ಕಿಪ್ಲಿಂಗ್ ಮುಂತಾದ ಬರಹಗಾರರು, ಸಿನಿಮಾ ತಾರೆ ಅಮಿತಾಭ್ ಬಚ್ಚನ್ ಅಲ್ಲಿಯವರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆ ಊರಿನ ಹೆಸರು ಮರೆಯಲಾಗದು. ಅಲ್ಲಿನ ಫೌಜು ಸಿಪಾಯಿ ದಂಗೆಗೆ ಕೈಜೋಡಿಸಿತ್ತು. ಬ್ರಿಟಿಷರ ಕಾಲದಲ್ಲಿ ಆಗ್ರಾ ಮತ್ತು ಅವಧ್ ಸೇರಿ ಸೆಂಟ್ರಲ್ ಪ್ರಾವಿನ್ಸ್ ಆದಾಗ ರಾಜಧಾನಿಯಾಗಿತ್ತು. ಅಲ್ಲಿನ ಉಚ್ಚನ್ಯಾಯಾಲಯವು ದೇಶದ ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿತು. ಕಾಂಗ್ರೆಸ್ಸಿನ ಒಂದು ಮಹಾಧಿವೇಶನ ಅಲ್ಲಿಯೇ ನಡೆಯಿತು. ಚಂದ್ರಶೇಖರ್ ಆಜಾದ್ ಪ್ರಾಣವೊಪ್ಪಿಸಿದ್ದು ಅಲ್ಲೇ. ಕಾಂಗ್ರೆಸ್ ಸಭೆಗಳು ನಡೆಯುತ್ತಿದ್ದ ಆನಂದ ಭವನ, ಸ್ವರಾಜ್ಯ ಭವನಗಳಿದ್ದದ್ದೂ ಅಲ್ಲೇ. ಸ್ವತಂತ್ರ ಭಾರತದ ಏಳು ಪ್ರಧಾನಿಗಳು – ಜವಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಗುಲ್ಜಾರಿಲಾಲ್ ನಂದಾ, ಲಾಲಬಹಾದೂರ್ ಶಾಸ್ತ್ರಿ, ವಿ. ಪಿ. ಸಿಂಗ್, ಚಂದ್ರಶೇಖರ್ ಆ ಊರಿನವರು. ಪ್ರಖ್ಯಾತ ಬೌದ್ಧ ತಾಣ ಕೌಶಾಂಬಿ ಅಲ್ಲಿಂದ ಅನತಿ ದೂರದಲ್ಲಿದೆ.
ಇಷ್ಟೆಲ್ಲ ಸುಳಿವು ಕೊಟ್ಟರೂ ಊರು ಯಾವುದೆಂದು ತಿಳಿಯುತ್ತಿಲ್ಲ ಅಲ್ಲವೇ? ಸಹಜ. ಮಹಾ ಜನಪ್ರಿಯತೆಯ ಸುನಾಮಿಯೊಂದು ಬಂದೆರಗಿದರೆ ಇತಿಹಾಸ, ಗುರುತುಗಳೇ ಬೇರೆಯಾಗಿಬಿಡುತ್ತವೆ.
ಅದು `ಪಾಪ ಕಳೆವ’ ಕುಂಭಮೇಳ ನಡೆದ ಊರು. `ಅತಿ ಚೆಲುವೆ’ ಬಿರುದಾಂಕಿತ ಮುಗ್ಧ ಯುವತಿ ಮೊನಾಲಿಸಾಳ ದಿಕ್ಕೆಡಿಸಿದ ಊರು. ನಗ್ನ ತ್ರಿಶೂಲಧಾರಿಗಳು ತಂಡೋಪತಂಡವಾಗಿ ಗಂಗಾನದಿಯ ಸ್ನಾನಕ್ಕಿಳಿದ ಊರು. ಕಾಲ್ತುಳಿತದಲ್ಲಿ ಲೆಕ್ಕವಿಲ್ಲದಷ್ಟು ಜನ ಸತ್ತ ಊರು. ಯೋಗಿಯ ಬುಲ್ಡೋಜರ್ ನ್ಯಾಯದ ವಿರುದ್ಧ ಸೆಟೆದು ನಿಂತ ಊರು. ಇಷ್ಟೆಂದರೆ ಥಟ್ಟನೆ ಹೊಳೆಯುತ್ತದೆ ಆ ಊರು ಪ್ರಯಾಗರಾಜ್ ಎಂದು. ಮೊದಲು ಪ್ರಯಾಗ ಅಥವಾ ಪೂರಿಮ್ತಾಲ್ ಆಗಿದ್ದ ಊರು ಬಳಿಕ ಇಲಹಾಬಾದ್ ಆಗಿ ನಂತರ ಅಲಹಾಬಾದ್ ಆಗಿ ಈಗ ಪ್ರಯಾಗರಾಜ್ ಆಗಿದ್ದರೂ ಯಾವುದೇ ಹೆಸರಿನಿಂದ ಕರೆಯಿರಿ, ತಾನು ತಾನೇ ಎಂದು 360 ಚ. ಕಿ.ಮೀ.ನಷ್ಟು ವಿಸ್ತಾರವಾಗಿ ಬೆಳೆದು ನಿಂತ ಮಹಾನಗರ ಅದು.
ರಾಜಕೀಯವಾಗಿ ಒಂದು ದೇಶ ಭಾರತ. ಅದರೊಳಗೆ ಹಲವು ಭಾರತಗಳಿವೆ. ಧಾರ್ಮಿಕ ಭಾರತದ ಚಹರೆ ಒಂದು ರೀತಿಯದು. ವ್ಯಾಪಾರಿ ಹಿತಾಸಕ್ತಿಯ ಭಾರತ ಮತ್ತೊಂದು ತೆರನದು. ಪರಂಪರೆಯ ನೆನಪಿನ ಕೊಂಡಿಯಾಗಿರುವ ಭಾರತವಂತೂ ಬಹುರೂಪಿಯಾಗಿರುವುದು. ಇವೆಲ್ಲ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದ ಕೆಲವೇ ಪ್ರದೇಶಗಳಲ್ಲಿ ಪ್ರಯಾಗವೂ ಒಂದು.
ಅಂದು ಬೆಳಿಗ್ಗೆ ಬೇಗನೆದ್ದು ಸಾಕೇತದಿಂದ ಹೊರಟಿದ್ದೆವು. ನಾಲ್ಕು ತಾಸಿನ ಪಯಣವನ್ನು ಕಣ್ತುಂಬಿಕೊಳ್ಳಬೇಕಿತ್ತು. ಜನಭರಿತ ಊರುಗಳು, ಸಮೃದ್ಧ ಕೃಷಿ ನಡೆವ ನೆಲ. ಎರಡೂ ಕಡೆ ಬೆಳೆದು ನಿಂತ ಸಾಸಿವೆ, ಗೋಧಿಯ ಹೊಲಗಳು. ಸಾಸಿವೆಯ ಕಟಾವು ಹಲವೆಡೆ ನಡೆಯುತ್ತಿತ್ತು. ಗೋಧಿ ಪೈರು ತೆನೆ ಬಂದು ನಿಂತಿತ್ತು. ಸಹಸ್ರಮಾನಗಳಿಂದ `ಮಾಘಸ್ನಾನ’ ನಡೆಯುತ್ತಿರುವ ಪ್ರಯಾಗ ಹತ್ತಿರವಾಗುತ್ತಿತ್ತು. ಹಿಮಾಲಯದಲ್ಲಿ ಹುಟ್ಟಿದ ಗಂಗಾ, ಯಮುನಾ ಮಹಾನದಿಗಳು ಸಾವಿರಾರು ಕಿಲೋಮಿಟರ್ ಕ್ರಮಿಸಿದ ಬಳಿಕ ಎರಡೊಂದಾಗುವ, ಯಮುನೆಯೂ ತಾ ಗಂಗೆಯೇ ಆಗಿ ವಿಲೀನವಾಗುವ ತಾಣ ಬಳಿಯಲ್ಲಿತ್ತು. ಎರಡು ವಾರ ಕೆಳಗೆ ಮುಗಿದ ಕುಂಭಮೇಳದ ತಯಾರಿ-ಪರಿಣಾಮ-ಪ್ರಭಾವಗಳು ಎದ್ದು ಕಾಣುತ್ತಿದ್ದವು.
ಮನುಷ್ಯ ಸಮಾಜ ಬೆಳೆದಿದ್ದೇ ನದಿಬಯಲುಗಳಲ್ಲಿ. ಸಾವಿರಾರು ವರ್ಷಗಳಿಂದ ಪ್ರಯಾಗವು ಜನವಸತಿಯಿದ್ದ ಜಾಗವಾಗಿದೆ. ಮಜ್ಜಿಮ ನಿಕಾಯದಲ್ಲಿ ಬುದ್ಧ, `ಪ್ರಯಾಗದಲ್ಲಿ ಮಿಂದು ಕ್ರೂರ ಮತ್ತು ಕೇಡಿನ ಕೆಲಸಗಳ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ. ಶುದ್ಧನಾಗಬೇಕೆಂದರೆ ಮನದಲ್ಲಿ ಶುದ್ಧರಾಗಿ ನಡೆಯಲ್ಲಿ ನ್ಯಾಯಯುತವಾಗಿರಬೇಕು’ ಎಂದು ಹೇಳುತ್ತಾನೆ. ಏಳನೆಯ ಶತಮಾನದ ಚೀನಾ ಯಾತ್ರಿಕ ಹ್ಯೂಯೆನ್ ತ್ಸಾಂಗ್; ಹನ್ನೊಂದನೆಯ ಶತಮಾನದ ಘಜನಿಯ ಪಂಡಿತ, ಯಾತ್ರಿಕ, `ತಾರೀಖ್-ಅಲ್-ಹಿಂದ್’ ಬರೆದು ಭಾರತ ಕುರಿತ ಹಲವು ಒಳನೋಟಗಳನ್ನು ನೀಡಿರುವ ಅಲ್ ಬೈರೂನಿ ಪ್ರಯಾಗದ ಬಗೆಗೆ ಬರೆದಿದ್ದಾರೆ. ದೀನ್ ಇಲಾಹಿ ಎಂಬ ಹೊಸ ಮತ ಹುಟ್ಟುಹಾಕುವ ಯೋಚನೆಯ ಅಕ್ಬರನು ಕ್ರಿಶ 1575ರಲ್ಲಿ ತ್ರಿವೇಣಿ ಸಂಗಮದ ತಾಣಕ್ಕೆ ಬಂದವನು ಆಡಳಿತ ಕಾರ್ಯತಂತ್ರದ ದೃಷ್ಟಿಯಿಂದ ಒಂದು ಕೋಟೆ ಮತ್ತು ಹೊಸಪಟ್ಟಣವೊಂದನ್ನು ನಿರ್ಮಿಸಲು ನಿರ್ಧರಿಸಿದ. ಅವನು ಯೋಜಿಸಿ ಕಟ್ಟಿಸಿದ ಹೊಸ ಪಟ್ಟಣ ಇಲಾಹಾಬಾದ್. (ದೇವರ ನೆಲೆ ಎಂಬ ಅರ್ಥ) ಬಳಿಕ ಶಾಹಜಹಾನನು ಹೆಸರನ್ನು ಅಲಹಾಬಾದ್ ಮಾಡಿದನು. ಬಕ್ಸಾರ್ ಕದನದ ಬಳಿಕ ಬ್ರಿಟಿಷರು ಮಾಡಿಕೊಂಡ ಒಪ್ಪಂದದ ಪ್ರಕಾರ ಕೋಟೆಯು ಬ್ರಿಟಿಷರ ಕೈವಶವಾಯಿತು. ಕೋಟೆಯ ಒಡೆಯ ಶಾ ಅಲಮನು ಅದೇ ಕೋಟೆಯಲ್ಲಿ ಬಂಧನದಲ್ಲಿ ಆರು ವರ್ಷ ಕಳೆಯಬೇಕಾಯಿತು. ಕೊನೆಗೆ ಮರಾಠರ ಸೈನ್ಯ ಅವನನ್ನು ಬಿಡುಗಡೆಗೊಳಿಸಿತು. ಕಾಲಾನಂತರ ಮತ್ತೆ ಬ್ರಿಟಿಷರ ಕೈಸೇರಿತು.
ಭಾರತದ ಯಾವುದೇ ಊರು, ಕೋಟೆ, ಗುಡಿ, ಸ್ಮಾರಕವನ್ನೇ ತೆಗೆದುಕೊಳ್ಳಿ: ಎಲ್ಲವನ್ನು ಒಬ್ಬರಲ್ಲ ಹಲವರು ಕಟ್ಟಿದ್ದಾರೆ. ಎಲ್ಲವೂ ಮತ್ತೊಂದರ ಮೇಲೆಯೇ ಕಟ್ಟಲ್ಪಟ್ಟಿವೆ.
ಇದೆಲ್ಲವನ್ನು ಯೋಚಿಸುತ್ತ ಜನಭರಿತ ಊರುಗಳ ಹಾದು ಅಲಹಾಬಾದ್ ಪ್ರವೇಶಿಸಿದೆವು. ಮೊದಲು ಸಿಕ್ಕಿದ್ದು `ಗಂಗಾಜಿ’ಯ ಸೇತುವೆ. ಅಲ್ಲಿ ಗಂಗೆ, ಯಮುನೆಯರಿಗೆ ಅದೆಷ್ಟು ಸೇತುವೆಗಳಿವೆಯೋ! ಕೆಳಗೆ ನೋಡಿದರೆ ನದಿಯಿಲ್ಲ, ಮರಳ ಬಯಲು. ಒಣಗಿದ ನದಿತಳದ ಮಣ್ಣುನೆಲದಲ್ಲಿ ಅರಳಿಕೊಂಡ ದಾರಿಗಳು. ವಾಹನಗಳು ಓಡಾಡುತ್ತಿದ್ದವು. ದೂರದಲ್ಲಿ ಸ್ವಲ್ಪ ನೀರು ಹರಿವಲ್ಲಿ ಇರುವೆಗಳಂತೆ ಜನ ಚಲಿಸುತ್ತಿದ್ದರು. ಅಗೋ ಅಲ್ಲಿ ದೂರದಲ್ಲಿ ಕುಂಭಮೇಳಕ್ಕೆಂದು ನದಿ ದಾಟಲು ಮಾಡಿದ್ದ ತಾತ್ಕಾಲಿಕ ನಡೆದಾರಿಗಳು ಕಾಣುತ್ತಿದ್ದವು.
ಪಟ್ಟಣ ಪ್ರವೇಶಿಸಿದಾಗ ಅಲಹಾಬಾದ್ ವಿಶ್ವವಿದ್ಯಾಲಯ ಸರಿದು ಹೋಯಿತು. ನೂರಿಪ್ಪತ್ತೇಳು ವರ್ಷ ಹಳೆಯ ವಿಶ್ವವಿದ್ಯಾಲಯ ಕಟ್ಟಡ ಎಷ್ಟು ಆಕರ್ಷಕವಾಗಿದೆಯೆಂದರೆ ಇಳಿದು ನೋಡಲೇಬೇಕು. ಅದು ಭಾರತದ ನಾಲ್ಕನೇ ಅತಿಹಳೆಯ ಆಧುನಿಕ ವಿಶ್ವವಿದ್ಯಾಲಯ. ಮುಂಬಯಿಯ ಕ್ರಾಫರ್ಡ್ ಮಾರ್ಕೆಟ್, ಕಲಕತ್ತೆಯ ವಿಕ್ಟೋರಿಯಾ ಮೆಮೊರಿಯಲ್‍ಗಳನ್ನು ರೂಪಿಸಿದ ವಿಲಿಯಂ ಎಮರ್ಸನ್ ಇದನ್ನೂ ವಿನ್ಯಾಸ ಮಾಡಿದ್ದಾನೆ. ಮಾಜಿ ರಾಷ್ಟ್ರಪತಿಗಳಾದ ಝಾಕಿರ್ ಹುಸೇನ್ ಮತ್ತು ಶಂಕರ ದಯಾಳ್ ಶರ್ಮಾ, ಮಾಜಿ ಪ್ರಧಾನಿಗಳಾದ ವಿ. ಪಿ. ಸಿಂಗ್ ಮತ್ತು ಚಂದ್ರಶೇಖರ್, ರಾಜಕಾರಣಿಗಳಾದ ಮದನ ಮೋಹನ ಮಾಳವೀಯ, ಗೋವಿಂದ ವಲ್ಲಭ ಪಂತ್, ಮುರಳಿ ಮನೋಹರ್ ಜೋಶಿ, ಮುಖ್ಯ ನ್ಯಾಯಮೂರ್ತಿ ರಂಗನಾಥ ಮಿಶ್ರಾ, ಕವಿಗಳಾದ ಮಹಾದೇವಿ ವರ್ಮ, ಫಿರಖ್ ಗೋರಖಪುರಿ (ರಘುಪತಿ ಸಹಾಯ್), ಝಾಮಿನ್ ಅಲಿ, ಹರಿವಂಶರಾಯ್ ಬಚ್ಚನ್ ಮುಂತಾದ ಹಲವಾರು ಪ್ರಸಿದ್ಧರು ಈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು. ಮೊದಲು ಮುಯ್ರ್ ಸೆಂಟ್ರಲ್ ಕಾಲೇಜ್ ಆಗಿದ್ದ ಅದು ನಂತರ ವಿಶ್ವವಿದ್ಯಾಲಯವಾಯಿತು. ಘೋಷವಾಕ್ಯ ಮೊದಲಿನದೇ ಉಳಿಯಿತು: `ಖೋಟ್ ರ್ಯಾಮಿ ಟೋಟ್ ಅರ್ಬೋರಿಸ್’ ಅಥವಾ `ಯಾವತ್ಯಃ ಶಾಖಾಸ್ತಾವಂತೋ ವೃಕ್ಷಃ’. (`ಎಷ್ಟು ರೆಂಬೆಕೊಂಬೆಗಳೋ ಅಷ್ಟು (ದೊಡ್ಡ) ಮರ’). ಶಿಕ್ಷಣ ಪಡೆದ ಯುವಜನರಿರುವಂತೆ ದೇಶವಿರುತ್ತದೆ ಎನ್ನುವ ಅರ್ಥದ ಸಾಲು.
ಆಹಾ!
ಸೂರ್ಯ ನೆತ್ತಿ ಮೇಲೆ ಬರುತ್ತಿದ್ದ. ಕುಂಭಮೇಳ ನಗರದಲ್ಲಿ ಚಲಿಸುತ್ತಿದ್ದೆವು. ಎರಡೂ ಕಡೆ ಬಯಲು ತೆರೆದುಕೊಂಡು ಬಿದ್ದಿತ್ತು. ಕುಂಭಮೇಳದ ಯಾತ್ರಿಗಳಿಗೆ ವಸತಿ ಕಲ್ಪಿಸಲೆಂದು ಹಾಕಿದ ಟೆಂಟಿನ ಅವಶೇಷಗಳು, ಅಂಗಡಿಯ ಅವಶೇಷಗಳು ಎಲ್ಲೆಲ್ಲೂ ಕಾಣುತ್ತಿದ್ದವು. ಒಂದಷ್ಟನ್ನು ಕಿತ್ತು ಸಾಗಿಸಿದ್ದರು. ವಿಲೇವಾರಿಯಾಗದ ಕಸರಾಶಿ ಇನ್ನೂ ಇತ್ತು. ವಿಶೇಷ ಜಿಲ್ಲಾಡಳಿತ ಕಚೇರಿಯ ಟೆಂಟುಗಳು, ಸೇನಾ ಟೆಂಟುಗಳಷ್ಟೇ ಉಳಿದಿದ್ದವು. ಮೊದಲು ವಾಹನಗಳನ್ನು ಅಲ್ಲೆಲ್ಲೋ ನಿಲ್ಲಿಸುತ್ತಿದ್ದರೆಂದೂ, ನದಿದಂಡೆ ತಲುಪಲು ಮೈಲಿಗಟ್ಟಲೆ ದೂರ ನಡೆದೇ ಬರಬೇಕಿತ್ತೆಂದೂ, ಈಗ ಆಗುತ್ತಿರುವ ರಶ್ ಅಂದಿನ ಒಂದು ಪ್ರತಿಶತ ಸಹ ಇಲ್ಲವೆಂದೂ ಸಾರಥಿ ತಿಳಿಸಿದ.
ಕೊನೆಗೂ ಯಮುನೆಯ ದಂಡೆಗೆ ಬಂದೆವು. ಮರಳು ದಿಬ್ಬದ ಮೇಲೆ ಉರಿಬಿಸಿಲಿನಲ್ಲಿ ಕೆಳಗಿಳಿದೆವು. ನಮ್ಮೆದುರು ಇದ್ದದ್ದು ಮಹಾಜಾತ್ರೆ ಮುಗಿದ ಬಯಲು. ಅರೆ, ಇದೇನಾ ಇಡಿಯ ಪ್ರಪಂಚದ ಕೋಟಿಗಟ್ಟಲೆ ಜನರನ್ನು ಅಯಸ್ಕಾಂತದಂತೆ ಸೆಳೆದ ತಾಣ? ಮಳೆಗಾಲದ ಪ್ರವಾಹ ನಿಂತ, ಬೇಸಿಗೆಯ ಹಿಮ ಕರಗಿ ತಿಳಿನೀರಷ್ಟೇ ಹರಿವ (ಮಾಘ) ಮಾಸದಲ್ಲಿ ಸಾವಿರಾರು ವರ್ಷಗಳಿಂದ ನದಿಸ್ನಾನ ನಡೆದ ತಾಣ ಇದೇನಾ? ಬುದ್ಧ, ರಿಷಭನಾಥ, ಹ್ಯುಯೆನ್ ತ್ಸಾಂಗ್, ಶಂಕರ, ಅಲ್ ಬೈರೂನಿ, ಅಕ್ಬರ್, ಜಹಾಂಗೀರ್ ಬಂದು ಹೋದ ತಾಣ ಇದೇನಾ? ಅಚ್ಚರಿಯಿಂದ ನೋಡುತ್ತ ನಿಂತೆ. ಹದಿನೈದು ದಿನಗಳ ಕೆಳಗಷ್ಟೇ ಅಲ್ಲಿ ಭಾರತದ ಕಾಲುಭಾಗ ಜನಸಂಖ್ಯೆ ನೆರೆದು ಹೋಗಿತ್ತು. ಎಲ್ಲೆಡೆ ಅತಿ ಜನನಿಬಿಡತೆ ಬಿಟ್ಟುಹೋದ ಕುರುಹುಗಳು.
ಹೊಸದಂಡು ಬಂದಿತೆಂದು ದೋಣಿಗಳ ಏಜೆಂಟರು ನಮ್ಮನ್ನು ಮುತ್ತಿದರು. ತಾವು ತ್ರಿವೇಣಿ ಸಂಗಮದ ಬಳಿಗೇ ಕರೆದೊಯ್ದು, ಅಂತರ್ಗಾಮಿನಿ ಸರಸ್ವತಿಯನ್ನೂ ತೋರಿಸಿ, ಸಂಗಮ ಸ್ನಾನ ಮಾಡಿಸುವೆವೆಂದು ಆಣೆ ಮಾಡಿದರು. ಎಲ್ಲರೊಟ್ಟಿಗೆ ಹೋಗುವ ದೋಣಿಯಾದರೆ ಕಡಿಮೆ ಹಣ. ನಮಗೆಂದೇ ಆದರೆ ಹೆಚ್ಚು ದರ. ದೋಣಿಯೊಳಗೆ ಬಟ್ಟೆ ಬದಲಿಸುವ ಆವರಣ ಇರಬೇಕಾದಲ್ಲಿ ಇನ್ನೂ ಹೆಚ್ಚು. ಕಾಸಿಗೆ ತಕ್ಕ ಕಜ್ಜಾಯ.
ಹೆತ್ತವರನ್ನು ತಮ್ಮ ತಂಗಿ ದೋಣಿಯೊಂದರಲ್ಲಿ ಕರೆದೊಯ್ದರು. ನಾವು ದಡದಲ್ಲೇ ನಿರುಕಿಸುತ್ತ ನಿಂತೆವು. ಅಕೋ ಅಲ್ಲಿ ಗಂಗೆ, ಮತ್ತಿಲ್ಲಿ ಕಾಲಬುಡದಲ್ಲಿ ಯಮುನೆ. ಹಸಿರಾದ ತಿಳಿನೀರ ಹರಿವು ಯಮುನೆಯಲ್ಲಿ ಹೆಚ್ಚು. ಎಲ್ಲೆಲ್ಲೂ ನದಿಗಿಳಿಯುವ ಜನರು. ಭಕ್ತಿ, ತೃಪ್ತಿ, ಭಾವಾವೇಶ, ವ್ಯಾಪಾರ, ಕಳ್ಳತನ, ಅವಕಾಶವಾದ, ಯಾಚನೆ ಮುಂತಾಗಿ ವಿವಿಧ ಮನೋಭಾವದ, ವಿವಿಧ ಪ್ರದೇಶಗಳ, ವಿವಿಧ ಉದ್ದೇಶ ಹೊತ್ತುಬಂದ ಜನರು. ಯಾರೂ ಕರೆಯದೇ ಸಾವಿರ, ಲಕ್ಷ ಸಂಖ್ಯೆಯಲ್ಲಿ ವಲಸೆ ಹಕ್ಕಿಗಳು ಬಂದು ಹೋಗುವಂತೆ ಬರುವ ಜನರು! ಇದು ಸಂಗಮವೇ ಹೌದು. ಬುರ್ಖಾ ಧರಿಸಿದ ಮಹಿಳೆಯರಿದ್ದ ಮುಸ್ಲಿಂ ಕುಟುಂಬವೊಂದು ನದಿಯೆಡೆಗೆ ನೋಡುತ್ತ ನಿಂತಿತ್ತು. ಒಂಟೆಗಳ ಮಾಲೀಕರು ಸವಾರಿ ಮಾಡುವವರ ಕರೆಯುತ್ತ ಅಲೆಯುತ್ತಿದ್ದರು. ಅಲ್ಲಿ ಮಾರಾಟಕ್ಕಿಲ್ಲದ ವಸ್ತುವೇ ಇಲ್ಲ. `ಬೋಲೆ ಬಮ್. ಪವಿತ್ರ ಗಂಗಾಜಲ್, ಪ್ರಯಾಗ್ ರಾಜ್’ ಎಂಬ ಮುದ್ರಿತ ಅಕ್ಷರಗಳಿದ್ದ ಬಿಳಿ, ಕೆಂಪು, ನೀಲಿ ಕ್ಯಾನುಗಳು ಗಮನ ಸೆಳೆದವು. ಕೆಲವು ಸಾಧುಗಳು ಶ್ರೀರಾಮ್, ಸೀತಾ, ಕೃಷ್ಣ, ಶಿವ್, ನಂದಲಾಲ್, ರಾಧೆ, ಸೂರ್ಯ-ಅರ್ಧ ಚಂದ್ರ-ಮೂರೆಳೆ ವಿಭೂತಿ-ತಿಲಕ ಮುಂತಾದ ಅಚ್ಚುಗಳನ್ನು, ಹಳದಿ ಕುಂಕುಮಗಳನ್ನು ಇಟ್ಟುಕೊಂಡು ಕುಳಿತಿದ್ದರು. ಜನ ಸರದಿಯಲ್ಲಿ ನಿಂತು ಹಣೆ ಮೇಲೆ ಹಳದಿ ಹಚ್ಚಿಸಿಕೊಂಡು ಅದರ ನಡುವೆ ತಮ್ಮಿಷ್ಟದ ಕೆಂಪು ಠಸ್ಸೆ ಒತ್ತಿಸಿಕೊಳ್ಳುತ್ತಿದ್ದರು. ಅದಕ್ಕೆ ನಿರ್ದಿಷ್ಟ ದರವಿಲ್ಲ. ಮನಸ್ಸಿಗೆ ಬಂದಷ್ಟು ತಟ್ಟೆಗೆ ಹಾಕಿ ಹೋದರಾಯಿತು.
ದಂಡೆಯಿಂದ ನದಿಗೆ ಹೋಗಲು ಇರುವ ಹತ್ತಾರು ದಾರಿಗಳ ಪಕ್ಕ ಸುಡುಬಿಸಿಲ ಲೆಕ್ಕಿಸದೆ ಸಾಲಾಗಿ ಕುಳಿತು, ನಿಂತು ಬೇಡುವ ಜೀವಗಳು ಕಂಡವು. ಬಾಣಂತಿ-ಬಸುರಿ-ವೃದ್ಧ-ವಿಶೇಷಚೇತನ-ಎಳೆಯ ಮಕ್ಕಳೆನ್ನದೇ ಕರುಳಿರಿಯುವಂತೆ ಯಾಚಿಸುತ್ತಿದ್ದರು. ಸಂಗಮಕ್ಕೆ ಹೋಗುವ ಮುನ್ನ ಕೆಲವರು `ದಾನ’ ಮಾಡುತ್ತ ಪುಣ್ಯ ಗಳಿಸುವ ಹಂಬಲ ಹೊತ್ತಿದ್ದರು. ಯಾರೋ ಒಂದು ಚೀಲ ದವಸ ಹೊತ್ತು ತಂದರು, ತಕೋ, ಎದ್ದುಬಿದ್ದು ಎಲ್ಲರೂ ಅತ್ತ ಓಡಿದರು.
ಏನಮ್ಮ ಜಲಮಾತೆ? ನಿನ್ನ ತಟದ ಜೀವರೆಲ್ಲರ ಹಸಿವು ತಣಿಸದೇ ಯಾಚಿಸಲು ಬಿಟ್ಟು ತಣ್ಣಗೆ ಹೀಗೆ ಹರಿಯಬಹುದೇ?
(ಈ ಲೇಖನದ ಎರಡನೆಯ ಭಾಗ ನಾಳೆ (13 ) ಪ್ರಕಟವಾಗುವುದು- ಸಂ.)
ಡಾ.ಎಚ್ ಎಸ್ ಅನುಪಮಾ
ವೈದ್ಯೆ, ಸಾಹಿತಿ.
ಇದನ್ನೂ ಓದಿ- ಕುಂಭಮೇಳ ಬಿಂಬಿಸುವ ನಂಬಿಕೆ ಮತ್ತು ಮರೆಯಿಸುವ ವಾಸ್ತವ