ಶಿವಮೊಗ್ಗ: ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೆಲ್ವಮಣಿ ಆರ್ (Dr.Selvamani R) ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ, ಬಡವರ ಪರವಾದ ಅಂತಃಕರಣವುಳ್ಳ ಅಪರೂಪದ ಅಧಿಕಾರಿಗಳಲ್ಲಿ ಒಬ್ಬರು ಎಂದು ಮನೆಮಾತಾಗಿರುವ IAS ಅಧಿಕಾರಿ ಡಾ. ಸೆಲ್ವಮಣಿಯವರನ್ನು ದಿಡೀರನೆ ವರ್ಗಾವಣೆಗೊಳಿಸಿರುವುದು ಅಚ್ಚರಿ ಮೂಡಿಸಿದೆ.
ಇದೀಗ ಶಿವಮೊಗ್ಗದಿಂದ ವರ್ಗಾವಣೆ ನಂತರ ಡಾ.ಸೆಲ್ವಮಣಿ ಅವರನ್ನು ಬೆಂಗಳೂರಿನ ಸೆಂಟರ್ ಫಾರ್ ಇ-ಗವರ್ನೆನ್ಸ್ ನ (Centre For e-governance) ಸಿಇಓ ಆಗಿ ನೇಮಿಸಿದೆ.
ಕಳೆದ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಕೋಮು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಅದನ್ನು ಶಮನಗೊಳಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಡಾ. ಸೆಲ್ವಮಣಿಯವರ ಪ್ರಯತ್ನ ನಾಗರಿಕರಿಂದ ಮೆಚ್ಚುಗೆಗೆ ಒಳಗಾಗಿತ್ತು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ, ಯಾರಿಗೂ ಪಕ್ಷಪಾತ ಮಾಡದೇ ದಕ್ಷತೆಯಿಂದ ಜನಪರವಾಗಿ ಕಾರ್ಯನಿರ್ವಹಿಸುವ ಡಾ.ಸೆಲ್ವಮಣಿಯವರ ಕುರಿತು ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ ಹೀಗೆ ದಿಢೀರ್ ವರ್ಗಾವಣೆ ನಡೆದಿರುವುದರ ಹಿಂದೆ ಯಾರಿದ್ದಾರೆ, ಯಾವ ಒತ್ತಡದಿಂದ ಸರ್ಕಾರ ಈ ವರ್ಗಾವಣೆ ನಡೆಸಿದ ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ. ಎರಡು ಮೂರು ತಿಂಗಳ ಹಿಂದೆಯೇ ಸೆಲ್ವಮಣಿಯವರನ್ನು ವರ್ಗಾವಣೆಗೊಳಿಸಲು ಕೆಲವು ರಾಜಕೀಯ ಶಕ್ತಿಗಳು ಪ್ರಯತ್ನ ನಡೆಸಿದ್ದರೂ ನಂತರ ಮತ್ತೆ ಶಿವಮೊಗ್ಗದಲ್ಲೇ ಮುಂದುವರೆಸಲಾಗಿತ್ತು.
ಈಗ ಶಿವಮೊಗ್ಗ ಜಿಲ್ಲಾಧಿಕಾರಿ ಹುದ್ದೆಗೆ ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಗುರುದತ್ತ ಹೆಗಡೆ (Gurudatta Hegade) ಅವರನ್ನು ಸರ್ಕಾರ ನೇಮಿಸಿದೆ. 2014ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಗುರುದತ್ತ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನ್ನಗದ್ದೆಯವರು.