ನವದೆಹಲಿ: ಮುಂಬೈನಲ್ಲಿ 2008ರಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ (26/11) ಪ್ರಕರಣದಲ್ಲಿ ಭಾರತಕ್ಕೆ ಬೇಕಿದ್ದ ಪ್ರಮುಖ ಆರೋಪಿ ಪಾಕಿಸ್ತಾನದ ಮೂಲದ ಕೆನಡಾ ನಿವಾಸಿ ತಹವ್ವುರ್ ರಾಣಾ ಅಮೆರಿಕದಿಂದ ಗಡೀಪಾರಾಗಿರುವುದು ಹಿಂದಿನ ಯುಪಿಎ ಸರ್ಕಾರದ ಪ್ರಬುದ್ಧ ಮತ್ತು ನಿಪುಣ ರಾಜತಾಂತ್ರಿಕ ಪ್ರಯತ್ನದ ಫಲ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ. ಕಾಂಗ್ರೆಸ್ ನ ಪ್ರಯ್ನದ ಫಲವಾಗಿ ಕಿಂಚಿತ್ತೂ ಪ್ರಯತ್ನ ಮಾಡದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಫಲ ಅನುಭವಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಿ. ಚಿದಂಬರಂ ರಾಣಾ ಹಸ್ತಾಂತರ ಪ್ರಕ್ರಿಯೆಯಲ್ಲಿ ಮೋದಿ ಸರ್ಕಾರ ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಇಂತಹ ಫಲಿತಾಂಶವನ್ನೂ ನಿರೀಕ್ಷಿಸಿರಲಿಲ್ಲ. ಆದರೂ ನರೇಂದ್ರ ಮೋದಿ ಅವರು ಇದರ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ ಎಂದಿದ್ದಾರೆ.
ರಾಣಾನನ್ನು ಗಡೀಪಾರಾಗಲು ಒಂದೂವರೆ ದಶಕದ ಹಿಂದೆ ನಡೆಸಿದ ಕಠಿಣ ರಾಜತಾಂತ್ರಿಕ ಪ್ರಯತ್ನಗಳೇ ಕಾರಣ. ಜತೆಗೆ ಕಾನೂನು ಮತ್ತು ಗುಪ್ತಚರ ಇಲಾಖೆಗಳ ಪ್ರಯತ್ನವೂ ಇದೆ. ಯುಪಿಎ ಸರ್ಕಾರವು ನಿರಂತರವಾಗಿ ಅಮೆರಿಕದೊಂದಿಗೆ ಮಾತುಕತೆ ನಡೆಸಿದ ಫಲ ಈಗ ಸಿಕ್ಕಿದೆ. ಗಡೀಪಾರು ಮಾಡದಂತೆ ರಾಣಾ ಮಾಡಿಕೊಂಡ ಮನವಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಈತನನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂದು ಹೇಳಿದ್ದಾರೆ.
2008ರಿಂದ 2012ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ ಅವರು, 2008ರ ನ. 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 166 ಜನ ಮೃತಪಟ್ಟಿದ್ದರು. 2009ರ ನ. 11ರಂದು ದಾಳಿಯ ಸಂಚುಕೋರ ಅಮೆರಿಕದ ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ಕೆನಡಾ ನಾಗರಿಕ ತಹವ್ವುರ್ ರಾಣಾ ವಿರುದ್ಧ ಎನ್ ಐ ಎ ಪ್ರಕರಣ ದಾಖಲಿಸಿಕೊಂಡಿತ್ತು. ಅದೇ ತಿಂಗಳು ಕೆನಡಾ ವಿದೇಶಾಂಗ ಸಚಿವರು ಭಾರತಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದು, ಯುಪಿಎ ಸರ್ಕಾರದ ಪರಿಣಾಮಕಾರಿ ವಿದೇಶಾಂಗ ನೀತಿಗೆ ಹಿಡಿದ ಕನ್ನಡಿಯಾಗಿದೆ. ಕೋಪೆನ್ ಹೆಗನ್ ನಲ್ಲಿ ಲಷ್ಕರ್ ಎ ತೊಯ್ಬಾ ಹೆಣೆದ ಭಯೋತ್ಪಾದನಾ ಸಂಚು ರೂಪಿಸಿದ್ದ ರಾಣಾ ವಿರುದ್ಧ 2009ರಲ್ಲಿ ಎಫ್‌ಬಿಐ ಷಿಕಾಗೊದಲ್ಲಿ ಪ್ರಕರಣ ದಾಖಲಿಸಿಕೊಂಡಿತು ಎಂದು ವಿವರಿಸಿದ್ದಾರೆ.
ಮುಂಬೈ ದಾಳಿಯಲ್ಲಿ ಈತನ ನೇರ ಪಾತ್ರವಿಲ್ಲ ಎಂದು ಅಮೆರಿಕದ ನ್ಯಾಯಾಲಯ ರಾಣಾನನ್ನು ಖುಲಾಸೆಗೊಳಿಸಿತ್ತು. ಆದರೆ ಮತ್ತೊಂದು ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈತನಿಗೆ 14 ವರ್ಷ ಜೈಲು ಶಿಕ್ಷೆಯಾಗಿತ್ತು. ಮುಂಬೈ ದಾಳಿಯಲ್ಲಿ ಈತನ ಪಾತ್ರವಿಲ್ಲ ಎಂಬ ನಿಲುವಿಗೆ ಆ ಸಂದರ್ಭದಲ್ಲಿ ಯುಪಿಎ ಸರ್ಕಾರ ಸಾರ್ವಜನಿಕವಾಗಿ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ವಿಶೇಷ ಎನ್ ಐಎ ನ್ಯಾಯಾಲಯವು ರಾಣಾ ವಿರುದ್ಧ ಜಾಮೀನು ರಹಿತ ವಾರೆಂಟ್ ಮತ್ತು ಇಂಟರ್ ಪೋಲ್ ರೆಡ್ ನೋಟಿಸ್ ಹೊರಡಿಸಿತ್ತು. ಇವೆಲ್ಲವೂ ಕಾನೂನಾತ್ಮಕ ರಾಜತಾಂತ್ರಿಕ ಪ್ರಕ್ರಿಯೆಗಳೇ ಹೊರತು, ಮಾಧ್ಯಮ ತಂತ್ರಗಳಲ್ಲ. 2012ರಲ್ಲಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಅವರು ಹೆಡ್ಲಿ ಮತ್ತು ರಾಣಾ ಗಡೀಪಾರು ವಿಷಯವನ್ನು ಅಮೆರಿಕದ ಕಾರ್ಯದರ್ಶಿ ಹಿಲೇರಿ ಕ್ಲಿಂಟನ್ ಜತೆ ಚರ್ಚಿಸಿದ್ದರು. 2013ರ ಜನವರಿಯಲ್ಲಿ ಹೆಡ್ಲಿಗೆ 35 ವರ್ಷಗಳ ಕಾರಾಗೃಹವಾಸ ಮತ್ತು ರಾಣಾಗೂ ಶಿಕ್ಷೆಯಾಗಿತ್ತು ಎಂದು ಚಿದಂಬರಂ ವಿವರಿಸಿದ್ದಾರೆ.