ಶ್ರೀಸಾಮಾನ್ಯರ ಬವಣೆಯೂ ರಾಜಕೀಯ ನಾಟಕಗಳೂ

Most read

ಮಾಲ್‌ಗಳಲ್ಲಿ ಜೋಡಿಸಿಟ್ಟ ವಸ್ತುಗಳನ್ನು ತಳ್ಳುಗಾಡಿಯಲ್ಲಿ ತುಂಬಿಸಿಕೊಂಡು ಅಥವಾ ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೇ ತರಿಸಿಕೊಂಡು ಡಿಜಿಟಲ್‌ ಪಾವತಿ ಮಾಡುವ ಈ ಹಿತವಲಯಕ್ಕೆ ಬೆಲೆ ಏರಿಕೆ ಬಾಧಿಸುವುದೇ ಇಲ್ಲ. ಇದರ ಪರಿಣಾಮ, ಈ ವರ್ಗಗಳೇ ನಿರ್ದೇಶಿಸುವ-ನಿರ್ವಹಿಸುವ ನಾಗರಿಕ-ಕಾರ್ಮಿಕ ಸಂಘಟನೆಗಳೂ ಸಹ ಬೆಲೆ ಏರಿಕೆಯನ್ನು ಹೋರಾಟದ ನೆಲೆಯಲ್ಲಿ ಪರಿಭಾವಿಸುವುದಿಲ್ಲ. ಇದು ಗಂಭೀರ ಅಧ್ಯಯನಕ್ಕೊಳಗಾಗಬೇಕಾದ ಒಂದು ವಿದ್ಯಮಾನ ನಾ ದಿವಾಕರ, ಚಿಂತಕರು.

ಆರ್ಥಿಕ ಹಣದುಬ್ಬರವನ್ನು ಆಧರಿಸಿ ನಿರ್ವಹಿಸಲ್ಪಡುವ ಅರ್ಥವ್ಯವಸ್ಥೆಯಲ್ಲಿ ಜನಸಾಮಾನ್ಯರ ಜೀವನಾವಶ್ಯ ವಸ್ತುಗಳ ಬೆಲೆಗಳಲ್ಲಿ ಏರುಪೇರಾಗುವುದನ್ನು ಅರ್ಥಶಾಸ್ತ್ರಜ್ಞರು ಅನಿವಾರ್ಯ ಮಾರುಕಟ್ಟೆ ಪ್ರಕ್ರಿಯೆ ಎಂದೇ ಪರಿಗಣಿಸುತ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ವಸ್ತುಗಳ ಸರಬರಾಜು ಮತ್ತು ಬೇಡಿಕೆಗಳ ನೆಲೆಯಲ್ಲಿ ನಿರ್ಧಾರವಾಗುವ ವಸ್ತುಗಳ ಬೆಲೆಗಳನ್ನು, ತೆರಿಗೆಗಳ ಮೂಲಕ ಹೆಚ್ಚಿಸುವ ಒಂದು ವಿಧಾನವನ್ನು ಸರ್ಕಾರಗಳು ಅನುಸರಿಸುತ್ತಲೇ ಇರುತ್ತವೆ. ಹಣದುಬ್ಬರವನ್ನು ನಿರ್ಧರಿಸಲು ಸರ್ಕಾರಗಳು ಅನುಸರಿಸುವ, ಗ್ರಾಹಕ ದರ ಸೂಚಿ ಇತ್ಯಾದಿ (ಸಿಪಿಐ) ವೈಜ್ಞಾನಿಕ ವಿಧಾನಗಳು, ಜನಸಾಮಾನ್ಯರ ಗ್ರಹಿಕೆಗೆ ನಿಲುಕದ ಅಂಶಗಳು. ಆದರೆ ತಮ್ಮ ನಿತ್ಯಬದುಕಿನಲ್ಲಿ ಅತ್ಯವಶ್ಯ ಎನಿಸುವ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಕಾಲಕಾಲಕ್ಕೆ ಉಂಟಾಗುವ ವ್ಯತ್ಯಯಗಳಿಗೆ ತಲೆಕೊಡುವುದು ಶ್ರೀಸಾಮಾನ್ಯರೇ.

1960-70ರ ದಶಕದಲ್ಲಿ, ತದನಂತರದ ಮೂರು ದಶಕಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಎನ್ನುವುದು ಸಾರ್ವಜನಿಕ ಜೀವನದಲ್ಲಿ ಪ್ರಕ್ಷುಬ್ಧತೆ ಉಂಟುಮಾಡುವ, ಆಕ್ರೋಶಗಳಿಗೆ ಎಡೆಮಾಡಿಕೊಡುವ ವಿದ್ಯಮಾನವಾಗಿದ್ದನ್ನು ಈಗ ನೆನೆಯಲೇಬೇಕು. ಏಕೆಂದರೆ 21ನೇ ಶತಮಾನದ ಮಿಲೆನಿಯಂ ಮಕ್ಕಳಿಗೆ ಇದರ ಅರಿವಿಲ್ಲ. ಕಾರಣವೇನೆಂದರೆ, ಭಾರತ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡು, ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿದ ನಂತರದಲ್ಲಿ, ಬೆಲೆ ಏರಿಕೆಯನ್ನು “ ಸಹಜ ಮಾರುಕಟ್ಟೆ ಪ್ರಕ್ರಿಯೆ ” ಎಂದು ನಿರ್ವಚಿಸುವ ಬೌದ್ಧಿಕ ವಲಯವೂ ಹುಟ್ಟಿಕೊಂಡಿದೆ. ಈ ವಲಯದ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ, ಮಾಧ್ಯಮಗಳೂ ಸಹ ಬೆಲೆ ಏರಿಕೆಯಿಂದ ತಳಸಮಾಜದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ಯಾನೆಲ್‌ ಚರ್ಚೆಗಳನ್ನು ಮಾಡುವುದಿಲ್ಲ.

ಹಾಗೊಮ್ಮೆ ಚರ್ಚೆ ಮಾಡಿದರೂ, ಹಿಂದಿನ ಮತ್ತು ಇಂದಿನ ಆಳ್ವಿಕೆಯ ಅವಧಿಯಲ್ಲಿ ಆದಂತಹ ಬೆಲೆ ವ್ಯತ್ಯಯಗಳು ಮಾತ್ರ ರಾಜಕೀಯ ಆರೋಪ-ಪ್ರತ್ಯಾರೋಪಗಳ ನೆಲೆಯಲ್ಲಿ ಚರ್ಚೆಯಾಗುತ್ತವೆ. ಸುದ್ದಿಮನೆಗಳಲ್ಲಿ ಚರ್ಚೆ ಮಾಡುವವರ ಅಬ್ಬರ, ಅರಚಾಟ ಮತ್ತು ದೋಷಾರೋಪಗಳಲ್ಲಿ, ಶ್ರೀಸಾಮಾನ್ಯ ಎಲ್ಲೋ ಮೂಲೆಯಲ್ಲಿ ನಿಂತ ಮೌನಿಯಾಗಿ ಬಿಡುತ್ತಾನೆ. (ಆರ್‌.ಕೆ. ಲಕ್ಷ್ಮಣ್‌ ಅವರ ವ್ಯಂಗ್ಯ ಚಿತ್ರಗಳ ಕಾಮನ್‌ ಮ್ಯಾನ್‌ ಸ್ಮರಿಸಬಹುದು). ಅವನ ವಿಸ್ಮಯವಾಗಲೀ, ಬೇಸರವಾಗಲೀ ಮಾರುಕಟ್ಟೆಯ ನಿರ್ವಾಹಕರಿಗೆ ಅಥವಾ ಆಳ್ವಿಕೆಯ ನಿಯಂತ್ರಕರಿಗಾಗಲೀ ಒಂದು ಚರ್ಚೆಯ ವಿಷಯ ಆಗುವುದೇ ಇಲ್ಲ. ಇದು 21ನೇ ಶತಮಾನದ ವಿದ್ಯಮಾನ. ಕಳೆದ 25 ವರ್ಷಗಳಲ್ಲಿ ಮಾರುಕಟ್ಟೆ ಆರ್ಥಿಕತೆ ತಳಮಟ್ಟದ ಶ್ರೀಸಾಮಾನ್ಯನ ಬದುಕನ್ನೂ ಪ್ರವೇಶಿಸಿದ ನಂತರ ದೇಶದ ಯಾವುದೇ ಭಾಗದಲ್ಲೂ ಬೆಲೆ ಏರಿಕೆ ವಿರುದ್ಧ ಜನಾಂದೋಲನಗಳು ನಡೆದ ನಿದರ್ಶನಗಳಿಲ್ಲ.

ಜನಾಂದೋಲನ ಸೃಷ್ಟಿಸದ ವಿದ್ಯಮಾನ

ಸಾಂದರ್ಭಿಕ ಚಿತ್ರ

ಈ ಸಂತೆಯಲ್ಲಿ ನಿತ್ಯಾವಶ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಗೆ ನಲುಗಿಹೋಗುವುದು ತಳಸಮಾಜದ ದುಡಿಯುವ ವರ್ಗಗಳು, ಅಸಂಘಟಿತ ಕಾರ್ಮಿಕರು, ವಲಸಿಗರು ಮತ್ತು ದಿನಗೂಲಿಯನ್ನೇ ನಂಬಿ ಬದುಕುವ ಒಂದು ಬೃಹತ್‌ ಸಮಾಜ. ಹಿತವಲಯದ ಸಮಾಜದಲ್ಲಿ ಬೆಲೆ ಏರಿಕೆ ವಸ್ತುಗಳ ಖರೀದಿಯ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ, ಏಕೆಂದರೆ ಅಲ್ಲಿ ಕೊಳ್ಳುವ ಶಕ್ತಿ ಇರುತ್ತದೆ. ನೌಕರಿಯಲ್ಲಿರುವವರಿಗೆ ಈ ಇಂಧನವನ್ನು ಹಣದುಬ್ಬರದ ಏರಿಳಿತಕ್ಕೆ ಅನುಗುಣವಾಗಿ, ತುಟ್ಟಿಭತ್ಯೆಯ ಹೆಚ್ಚಳದ ಮೂಲಕ ಸರ್ಕಾರಗಳೇ ಪೂರೈಸುತ್ತವೆ. ಆದರೆ ನರೇಗಾದಿಂದ ನಗರಾಭಿವೃದ್ಧಿಯ ಕಾಮಗಾರಿಗಳವರೆಗೆ ನಿರ್ಮಾಣ ಕಾರ್ಯದಲ್ಲಿ ನಿರತರಾದ ಶ್ರಮಜೀವಿಗಳ ದಿನಗೂಲಿಗೆ ಈ ಮಾರುಕಟ್ಟೆ ಆರ್ಥಿಕ ಸೂತ್ರ ಅನ್ವಯಿಸುವುದೇ ಇಲ್ಲ. ಕೂಲಿ ಹೆಚ್ಚಳಕ್ಕಾಗಿ ಹೋರಾಡಲೇಬೇಕಾದ ಅನಿವಾರ್ಯತೆಯನ್ನು ಈ ವರ್ಗಗಳು ಎದುರಿಸುತ್ತವೆ. ಇದಕ್ಕೆ ಸ್ಪಂದಿಸುವ ಸಾಂಘಿಕ ನೆಲೆಗಳು ತಾತ್ವಿಕವಾಗಿ ದುರ್ಬಲವಾಗಿರುವುದು ಗಂಭೀರ ಸಮಸ್ಯೆಯಾಗಿದೆ.

ತಳಸಮಾಜದಲ್ಲಿ, ಅಲ್ಲಿಯೂ ಬಡತನದಲ್ಲಿರುವ ಕುಟುಂಬಗಳಲ್ಲಿ, ಬೆಲೆ ಏರಿಕೆ ಎನ್ನುವುದು ನಿತ್ಯ ಬದುಕನ್ನು ಪಲ್ಲಟಗೊಳಿಸುವ ಒಂದು ಪ್ರಕ್ರಿಯೆಯಾಗುತ್ತದೆ. ಈ ಸಮಾಜದಲ್ಲಿ ಬಳಕೆಯ ಪ್ರಮಾಣವೇ ಕಡಿಮೆಯಾಗುತ್ತದೆ. ಪೌಷ್ಟಿಕ ಆಹಾರಗಳನ್ನು ಅಲಕ್ಷಿಸಲಾಗುತ್ತದೆ. ಅತ್ಯಾವಶ್ಯಕ ವಸ್ತುಗಳನ್ನು ಮಾತ್ರ ಖರೀದಿಸಲಾಗುತ್ತದೆ. ಸಹಜವಾಗಿ ಮಕ್ಕಳ ಕುಂಠಿತ ಬೆಳವಣಿಗೆ ಈ ಸಮಾಜದಲ್ಲಿ ಸಾಮಾನ್ಯವಾಗಿಬಿಡುತ್ತದೆ. ಬೆಲೆ ಏರಿಕೆಯ ವಿರುದ್ಧ “ ಜನಾಕ್ರೋಶ ಅಭಿಯಾನ ” ಹಮ್ಮಿಕೊಂಡಿರುವ ರಾಜಕೀಯ ಪಕ್ಷಗಳು, ವಿಶೇಷವಾಗಿ ಬಿಜೆಪಿ, ಕಳೆದ ಹತ್ತು ವರ್ಷಗಳಲ್ಲಿ ಭಾರತದ ತಳಸಮಾಜ ಹೇಗೆ ಬೆಲೆ ಏರಿಕೆಯಿಂದ ನಲುಗಿ ಹೋಗಿದೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುತ್ತವೆಯೇ ? ಇತ್ತೀಚೆಗೆ ಅಡುಗೆ ಅನಿಲದ ಬೆಲೆ 50 ರೂ ಹೆಚ್ಚಿಸಿರುವುದನ್ನೂ ಸಮರ್ಥಿಸಿಕೊಳ್ಳುವ ದಾರ್ಷ್ಟ್ಯತೆಯನ್ನು ಪಕ್ಷದ ನಾಯಕರು ಪ್ರದರ್ಶಿಸುತ್ತಾರೆ. ಮೂರು ವರ್ಷದ ಹಿಂದೆ ಇದ್ದ ಬೆಲೆಗಿಂತಲೂ ಕಡಿಮೆ ಇದೆ ಅಲ್ಲವೇ ಎಂದು ಪ್ರಶ್ನಿಸುವವರಿಗೆ, ಹತ್ತು ವರ್ಷದ ಹಿಂದೆ ಇದ್ದ ಬೆಲೆ ನೆನಪಾಗುವುದೇ ಇಲ್ಲ.

ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿ

ತಳಸಮಾಜದ ಬಡಜನತೆಯ ಮತ್ತು ಶ್ರೀಸಾಮಾನ್ಯರ ದೃಷ್ಟಿಯಲ್ಲಿ,  ನಿತ್ಯಾವಶ್ಯ ವಸ್ತುಗಳ ಅಥವಾ ಸಾರಿಗೆ ಇತ್ಯಾದಿ ಸೌಕರ್ಯಗಳ ದರ ಹೆಚ್ಚಳವಾಗುವುದೆಂದರೆ, ತಮ್ಮ ಎಂದಿನ ವರಮಾನವೇ ಜೀವನ ನಿರ್ವಹಣೆಗೆ ಸಾಕಾಗದಂತೆ ಮಾಡುವ ಒಂದು ಭೀಕರ ವಿದ್ಯಮಾನ. ಬೆಲೆ ಏರಿಕೆ ವಿರುದ್ಧ ಭಯಂಕರ ಜನಾಕ್ರೋಶ ಅಭಿಯಾನ ನಡೆಸಿರುವ ಬಿಜೆಪಿ ನಾಯಕರಿಗೆ, ಈ ಸಮಾಜದ ನೋವುಗಳು ಅರ್ಥವಾಗುವುದುಂಟೇ ? ಹಾಗಾಗಿದ್ದಲ್ಲಿ ಇಂತಹ ಅಭಿಯಾನಗಳು ಕಳೆದ ಹತ್ತು ವರ್ಷಗಳಲ್ಲಿ ವಾರ್ಷಿಕ ಕಾರ್ಯಕ್ರಮಗಳಾಗುತ್ತಿದ್ದವು. ಏಕೆಂದರೆ ಡಿಜಿಟಲ್‌ ಆರ್ಥಿಕತೆ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ವಿಸ್ತರಣೆ ಶ್ರೀಸಾಮಾನ್ಯನಿಗೆ ದಕ್ಕುವಂತಹ ಬೆಲೆಗಳನ್ನು ನಿಗದಿಪಡಿಸಲು ಅವಕಾಶವನ್ನೇ ನೀಡುವುದಿಲ್ಲ. ಸಗಟು ಮಾರುಕಟ್ಟೆಯಲ್ಲಿ ದರಗಳು ಕಡಿಮೆ ಇದ್ದಾಗ ಬೃಹತ್‌ ಪ್ರಮಾಣದಲ್ಲಿ ಖರೀದಿಸಿ, ದಾಸ್ತಾನು ಮಾಡಿ, ಬೆಲೆ ಹೆಚ್ಚಳವಾದ ಕೂಡಲೇ ಮಾರುಕಟ್ಟೆಗೆ ಸರಬರಾಜು ಮಾಡುವ ಒಂದು ಕ್ರೂರ ಪದ್ಧತಿಯನ್ನು ಇಲ್ಲಿ ಅನುಸರಿಸಲಾಗುತ್ತದೆ. ಮಾಲ್‌ ಸಂಸ್ಕೃತಿ ಮತ್ತು ಆನ್‌ಲೈನ್‌ ಮಾರುಕಟ್ಟೆ ಇದರ ವಾರಸುದಾರ ಶಕ್ತಿಗಳಾಗಿರುತ್ತವೆ.

ಈ ಮಾರುಕಟ್ಟೆ ಭಾಗಿದಾರರ ಹಿತದೃಷ್ಟಿಯಿಂದಲೇ ತಮ್ಮ ಇಡೀ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಸರ್ಕಾರಗಳು ಸಹಜವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು, ಜನಕಂಟಕ ಎಂದು ಭಾವಿಸುವುದೇ ಇಲ್ಲ. ಇದಕ್ಕೆ ʼ ಸಮಾಜವಾದಿ ʼ ಎಂಬ ಹಣೆಪಟ್ಟಿ ಹೊತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಳ್ವಿಕೆಯೂ ಹೊರತಲ್ಲ. ಹಾಗಾಗಿಯೇ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಹಾಲಿನ ಬೆಲೆ ಮೂರು ಸಲ ಹೆಚ್ಚಾಗಿದೆ, ರಸ್ತೆ ಸಾರಿಗೆ ದರಗಳನ್ನು, ಮೆಟ್ರೋ ದರಗಳನ್ನು, ವಿದ್ಯುಚ್ಚಕ್ತಿ ದರಗಳನ್ನು  ಹೆಚ್ಚಿಸಲಾಗಿದೆ. ಇತ್ತೀಚೆಗೆ ಡೀಸೆಲ್‌ ಬೆಲೆಯನ್ನೂ ರಾಜ್ಯ-ಕೇಂದ್ರ ಸರ್ಕಾರಗಳು ಪೈಪೋಟಿಯ ಮೇಲೆ ಹೆಚ್ಚಿಸಿವೆ. ಬಿಜೆಪಿಯ ಜನಾಕ್ರೋಶದ ಅಬ್ಬರದ ನಡುವೆಯೇ ಅಡುಗೆ ಅನಿಲದ ಬೆಲೆ ಸದ್ದಿಲ್ಲದೆ ಹೆಚ್ಚಾಗಿದೆ. ತಳಸಮಾಜದ ಶ್ರೀಸಾಮಾನ್ಯರ ಬದುಕಿನಲ್ಲಿ ಇದು ಅತ್ಯವಶ್ಯ ವಸ್ತುಗಳ ಬಳಕೆಯನ್ನೂ ಕಡಿಮೆ ಮಾಡುವ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಜನಾಕ್ರೋಶ ಅಭಿಯಾನ ಈ ಸಮಾಜವನ್ನು ಪ್ರತಿನಿಧಿಸುತ್ತಿದೆಯೇ ?

ಅಧಿಕಾರ ರಾಜಕಾರಣದ ಹಿತಾಸಕ್ತಿ

ಖಂಡಿತವಾಗಿಯೂ ಸಾಧ್ಯವಿಲ್ಲ. ಕಾಂಗ್ರೆಸ್‌ ಸರ್ಕಾರದ ಆಳ್ವಿಕೆಯನ್ನು ಜನವಿರೋಧಿ ಎಂದು ನಿರೂಪಿಸುವ ಒಂದು ಪ್ರಯತ್ನವಾಗಿ ಜನಾಕ್ರೋಶ ಬಳಕೆಯಾಗುತ್ತದೆ. ಆದರೆ ಕಳೆದ ಹತ್ತುವರ್ಷಗಳಲ್ಲಿ ʼ ಬೆಲೆ ಏರಿಕೆ ʼ ಏಕೆ ಜನಾಕ್ರೋಶಕ್ಕೆ ಕಾರಣವಾಗಲಿಲ್ಲ ? ಮಧ್ಯಮ ವರ್ಗಗಳನ್ನೂ ಕಾಡುವ ಬೆಲೆ ಏರಿಕೆಗಳೂ ರಾಜಕೀಯ ಪಕ್ಷಗಳಿಗೆ ʼ ಜನಾಕ್ರೋಶದ ʼ ನೆಲೆಯಲ್ಲಿ ಕಾಣಲಾಗಿಲ್ಲ. ಭಾರತ ಅನುಸರಿಸುತ್ತಿರುವ ಡಿಜಿಟಲ್‌ ಕಾರ್ಪೋರೇಟ್‌ ಮಾರುಕಟ್ಟೆ ಆವರಣದಲ್ಲಿ ಕಾಣಿಸಿಕೊಳ್ಳದ ಒಂದು ಬೃಹತ್‌ ಸಮಾಜವು, ಹಳ್ಳಿ ಸಂತೆಗಳಲ್ಲಿ, ನಗರಗಳ ಕಿರಾಣಿ ಅಂಗಡಿಗಳ ಮುಂದೆ, ತರಕಾರಿ ವ್ಯಾಪಾರಿಗಳೊಡನೆ ಚೌಕಾಸಿ ಮಾಡುತ್ತಾ ತಮ್ಮ ಜೀವನ ಸವೆಸುವ ಒಂದು ದೃಶ್ಯ, ರಾಜಕೀಯವಾಗಿ ಮುಖ್ಯವಾಹಿನಿಯ ಯಾವ ಪಕ್ಷಗಳನ್ನೂ ಕಾಡುವುದಿಲ್ಲ. ಒಂದು ತೆಂಗಿನ ಕಾಯಿಯ ಬೆಲೆ 50 ರೂಗಳಾಗಿರುವುದು, ಒಂದು ಕಟ್ಟು ಕೊತ್ತಂಬರಿ 20-30 ರೂಗಳಾಗಿರುವುದು, ಅಧಿಕಾರ ರಾಜಕಾರಣದ ದೃಷ್ಟಿಯಲ್ಲಿ, ಸಹಿಸಿಕೊಳ್ಳಬೇಕಾದ ಮಾರುಕಟ್ಟೆ ಪ್ರಕ್ರಿಯೆ ಎನಿಸಿ ಬಿಡುತ್ತದೆ. ಆದರೆ ಶ್ರೀಸಾಮಾನ್ಯರು ಅದನ್ನು ವರ್ಜಿಸುವ ಪರಿಸ್ಥಿತಿಯಲ್ಲಿರುತ್ತಾರೆ. ಕಾಂಗ್ರೆಸ್‌ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳು ಈ ಸಂಕಷ್ಟವನ್ನು ಸಮತೋಲನ ಮಾಡುವ ಪ್ರಕ್ರಿಯೆಯಾಗಿ ಕಾಣುತ್ತದೆ.

ನವ ಉದಾರವಾದ-ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ವಿರುದ್ಧ ಸೊಲ್ಲೆತ್ತದ ಅಥವಾ ಸೊಲ್ಲೆತ್ತಲಾಗದ ರಾಜಕೀಯ ಪಕ್ಷಗಳು ನಮ್ಮನ್ನಾಳುತ್ತಿವೆ. ಈ ಸರ್ಕಾರಗಳಿಗೆ, ಅವುಗಳನ್ನು ನಿರ್ದೇಶಿಸುವ ಮಾರುಕಟ್ಟೆ ನಿಯಂತ್ರಿತ ಬೌದ್ಧಿಕ ವಲಯಗಳಿಗೆ ಮತ್ತು ಈ ನಿರ್ದೇಶನದಡಿಯಲ್ಲೇ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಮಾಧ್ಯಮಗಳಿಗೆ, ಈ ಆರ್ಥಿಕತೆಯಿಂದ ತಳಸಮಾಜದ ಮೇಲೆ ಉಂಟಾಗುತ್ತಿರುವ ಭೀಕರ ಪರಿಣಾಮಗಳು ಚರ್ಚೆಯ ವಿಚಾರ ಆಗುವುದೇ ಇಲ್ಲ. ಕಳೆದ ಲೋಕಸಭೆ-ವಿಧಾನಸಭೆ ಚುನಾವಣೆಗಳಲ್ಲೇ ಇದನ್ನು ಕಂಡಿದ್ದೇವೆ.  ನಾಗರಿಕ ವಲಯದಲ್ಲಿ ನಿರಂತರ ಹೋರಾಟಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಬೆಲೆ ಏರಿಕೆ ಸಾಂಕೇತಿಕ ಪ್ರತಿಭಟನೆಯಲ್ಲಿ ಪರ್ಯವಸಾನ ಹೊಂದುವ ವಿದ್ಯಮಾನವಾಗುತ್ತದೆ. ಹಾಗಾಗಿಯೇ ನವ ಭಾರತ ಕಳೆದ 25 ವರ್ಷಗಳಲ್ಲಿ ಬೆಲೆ ಏರಿಕೆಯ ವಿರುದ್ಧ ಜನಾಂದೋಲನಗಳಿಗೆ ಸಾಕ್ಷಿಯಾಗಿಲ್ಲ.

ಈ ಸುಡುವಾಸ್ತವದ ನೆಲೆಯಲ್ಲಿ ನಿಂತು, ಸುಡುತ್ತಿರುವ ಬಿಸಿಲ ಬೇಗೆಯಷ್ಟೇ ಬಾಧಿಸುವ, ಬೆಲೆ ಏರಿಕೆಯ ಬಿಸಿ, ತಳಸಮಾಜದ ಶ್ರಮಿಕ ವರ್ಗಗಳನ್ನು ಹೇಗೆ ಕಾಡುತ್ತವೆ ಎಂದು ವಸ್ತುನಿಷ್ಠವಾಗಿ ಪರಾಮರ್ಶಿಸುವುದು ನಾಗರಿಕ ಸಂಘಟನೆಗಳ ಆದ್ಯತೆಯಾಗಬೇಕಿದೆ.

ನಾ. ದಿವಾಕರ

ಚಿಂತಕರು.

ಇದನ್ನೂ ಓದಿ- ಅಡುಗೆ ಅನಿಲ ಬೆಲೆ ಏರಿಕೆ: ಬಿಜೆಪಿ ಜನಾಕ್ರೋಶ ಯಾತ್ರೆಗೆ ಕಪಾಳಮೋಕ್ಷ: ಸಿಎಂ ಸಿದ್ದರಾಮಯ್ಯ ಲೇವಡಿ

More articles

Latest article