ರೇಣುಕಾಸ್ವಾಮಿ ಕೊಲೆ ಪ್ರಕರಣ: ಬೆನ್ನು ನೋವು ಎಂದ ದರ್ಶನ್; ನಟನ ವಿರುದ್ಧ ನ್ಯಾಯಾಲಯ ಗರಂ

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ಇಂದು ನಡೆಯಿತು. ವಿಚಾರಣೆಗೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಹಾಗೂ ಇನ್ನಿತರ ಆರೋಪಿಗಳು ಹಾಜರಾಗಿದ್ದರು. ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿ ವಿಚಾರಣೆ ಇದ್ದಾಗ ಕಡ್ಡಾಯವಾಗಿ ಹಾಜರಾಗಬೇಕು ಎಂದು ತಾಕೀತು ಮಾಡಿದೆ.

ಬೆನ್ನು ನೋವಿನ ಕಾರಣ ನೀಡಿ ದರ್ಶನ್ ನ್ಯಾಯಾಲಯದ ವಿಚಾರಣೆಯಿಂದ ವಿನಾಯಿತಿ ಕೋರಿದ್ದರು. ಅವರು ಇತ್ತೀಚೆಗಷ್ಟೆ ರಾಜಸ್ಥಾನದಲ್ಲಿ ನಡೆದ ‘ಡೆವಿಲ್’ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಅಲ್ಲಿ ಸುಮಾರು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಸ್ಯಾಂಡಲ್ ವುಡ್ ಮೂಲಗಳು ತಿಳಿಸಿವೆ. ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದಲೇ ದರ್ಶನ್ ಗೆ ಬೆನ್ನು ನೋವು ಉಲ್ಬಣವಾಗಿದೆ ಎಂದು ತಿಳಿದು ಬಂದಿದೆ. ಈ ವಿಷಯವನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಷರತ್ತಿನ ಅನ್ವಯ ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಹೈಕೋರ್ಟ್ ಅನುಮತಿ ನೀಡಿತ್ತು ಎಂದು ತಿಳಿಸಿ ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ನೀಡಿದರು. ಈ ಸಮಜಾಯಿಷಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದರು.

ಇನ್ನುಳಿದ ಆರೋಪಿಗಳಾದ ಪವಿತ್ರಾ ಗೌಡ, ನಂದಿಶ್, ಜಗದೀಶ್, ನಾಗರಾಜ್, ವಿನಯ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್ ಕೇಶವ ಮೂರ್ತಿ ಇನ್ನೂ ಕೆಲವರು ಹಾಜರಾಗಿದ್ದರು. ಕೆಲವು ಆರೋಪಿಗಳು, ಪೊಲೀಸರು ವಶಪಡಿಸಿಕೊಂಡಿರುವ ತಮ್ಮ ಮೊಬೈಲ್ ಗಳನ್ನು ಮರಳಿಸಬೇಕು ಎಂದು ಮನವಿ ಸಲ್ಲಿಸಿದರು. ಅಂತಿಮವಾಗಿ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಯಿತು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ದರ್ಶನ್ ಹಾಗೂ ಇನ್ನೂ ಕೆಲವರ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್, ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದೆ.

More articles

Latest article