ಸಾವಿನ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಜೆಪಿ ಚಾಳಿ; ಕಾಂಗ್ರೆಸ್‌ ವಾಗ್ದಾಳಿ

Most read

ಬೆಂಗಳೂರು: ಬಿಜೆಪಿಗೆ ಜನಪರವಾಗಿ ಹೋರಾಟ ಮಾಡಿ ಎಂದಿಗೂ ಅಭ್ಯಾಸವಿಲ್ಲ. ಕೇವಲ ಸಾವಿನ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದಾ ಸಿದ್ಧವಾಗಿರುತ್ತದೆ ಎಂದು ಕೆಪಿಸಿಸಿ ಮುಖಂಡರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್.‌ ವಿ.ವೆಂಕಟೇಶ್, ರಮೇಶ್‌ ಬಾಬು ಮತ್ತು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ವಿ.ಧನಂಜಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ವೆಂಕಟೇಶ್‌ ಮಾತನಾಡಿ, ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿರುವ ವಿನಯ್ ಸೋಮಯ್ಯ ಅವರ ಸಾವಿನ ಹಿಂದೆ ಬೇರೆಯದೇ ಹುನ್ನಾರವಿದೆ. ಏಕೆಂದರೆ ಆರ್ ಟಿಐ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡುವ ಅನೇಕ ಯುವಕರು ಧೈರ್ಯದಿಂದ ಇರುತ್ತಾರೆ. ಪ್ರಾಣ ಕಳೆದುಕೊಳ್ಳುವ ಕೆಲಸಕ್ಕೆ ಇಂತಹ ಕ್ಷೇತ್ರದಲ್ಲಿ ಇರುವವರು ಕೈ ಹಾಕುವುದಿಲ್ಲ.  ಪೊನ್ನಣ್ಣ, ಮಂಥರ್ ಗೌಡ ಅವರಿಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಅವರ ಗಮನಕ್ಕೂ ಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ವಿನಯ್ ಸೋಮಯ್ಯ ಅವರು ಡೆತ್ ನೋಟ್ ಅನ್ನು ವಾಟ್ಸಪ್ ಅಲ್ಲಿದೆ. ಇದನ್ನು ಯಾರೂ ಬೇಕಾದರೂ ಬರೆದಿರಬಹುದು. ಮೃತ ವಿನಯ್ ಸಹೋದರ ದೂರು ನೀಡಿದ್ದು ಇದನ್ನು ಪೊಲೀಸರು ತನಿಖೆ ಮಾಡಲಿದ್ದಾರೆ.‌ ಶಾಸಕ ಮಂಥರ್ ಗೌಡ ಅವರು ಯಾವುದೇ ಭಿನ್ನಾಭಿಪ್ರಾಯವಿದ್ದರೆ ಎದುರು ಬಂದು ಹೇಳಬಹುದು. ಆಗ ಅದನ್ನು ಸರಿಪಡಿಸಬಹುದು ಎಂದು ಸ್ಪಷ್ಟವಾಗಿ ಹೇಳಿದ್ದರು. ಅವರ ಗಮನಕ್ಕೆ ಇಲ್ಲದೇ ಇದು ನಡೆದು ಹೋಗಿದೆ ಎಂದರು.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ವಿನಯ್ ಸೋಮಯ್ಯ ಅವರ ವಿರುದ್ದ ದೂರು ದಾಖಲಾಗಿ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ನಂತರದ ಎರಡು ತಿಂಗಳ ಅವಧಿಯಲ್ಲಿ ಏನು ನಡೆದಿದೆ ಎನ್ನುವುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕ ಅಮಿತ್ ಮಾಳವಿಯಾ, ನಡ್ಡಾ ಅವರು ಅನೇಕ ಸುಳ್ಳು ಸುದ್ದಿಯನ್ನು ಹರಡುತ್ತಾ ಇರುತ್ತಾರೆ. ಇದರ ವಿರುದ್ದ ನಾನೇ ಕರ್ನಾಟಕದಲ್ಲಿ ದೂರು ದಾಖಲು ಮಾಡಿದ್ದೇನೆ. ಎಫ್ ಐಆರ್ ಕೂಡ ದಾಖಲಾಗಿ ಇದು ಹೈಕೋರ್ಟಿನಲ್ಲಿ ಬಾಕಿ ಉಳಿದಿದೆ. ಈ ರೀತಿಯ ಕಾನೂನಾತ್ಮಕ ಹೋರಾಟವನ್ನು ಎಲ್ಲಾ ಪಕ್ಷದವರು ಮಾಡುತ್ತಿದ್ದಾರೆ. ಸೂಕ್ಷ್ಮ ಮನಸ್ಸಿನ ಯುವಕರನ್ನು ಪ್ರಚೋದಿಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಹೀಗೆ ಸುದ್ದಿಗಳನ್ನು ಹರಡಲು ಕಾರಣವೇ ಮಾಜಿ ಸಂಸದ ಪ್ರತಾಪ್ ಸಿಂಹ ಎಂದು ಆಪಾದಿಸಿದರು.

ಕೊಡಗಿನಲ್ಲಿ ಬಿಜೆಪಿ ಬಿಟ್ಟರೇ ಬೇರೆ ಯಾರೂ ಸಹ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ ಪ್ರತಾಪ್ ಸಿಂಹ ಅವರ ಮಾತು ಸುಳ್ಳಾಯಿತು. ಈ ಇಬ್ಬರು ಕಾಂಗ್ರೆಸ್ ಶಾಸಕರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಹಾಳು ಮಾಡಲು ಈ ರೀತಿಯ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ,‌‌‌ ಸರ್ಕಾರದ ಕೆಲಸಗಳ ಮೇಲೆ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಚಿತಾವಣೆಯೇ ಅಡಗಿದೆ ಎಂದರು.

ಧನಂಜಯ ಮಾತನಾಡಿ, ಬಿಜೆಪಿ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ‌‌. ವಿನಯ್ ಸೋಮಯ್ಯ ಅವರು ಎಲ್ಲಿಯೂ ಸಹ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿಲ್ಲ. ಇವರ ಸಹೋದರನೂ ಸಹ ದೂರಿನಲ್ಲಿ ಬಿಜೆಪಿ ಕಾರ್ಯಕರ್ತ ಎಂದು ಹೇಳಿಲ್ಲ‌. ಈತ ಬಿಜೆಪಿ ಕಾರ್ಯಕರ್ತ ಎಂದು ಹೇಳುವುದಕ್ಕೆ ಯಾವುದೇ ಆಧಾರವಿಲ್ಲ ಎಂದರು.

ಇದೇ ಬಿಜೆಪಿಯವರು ಪೊಲೀಸ್ ಅಧಿಕಾರಿ ಗಣಪತಿ ಅವರ ಸಾವಿನಲ್ಲಿ ರಾಜಕೀಯ ಮಾಡಿದರು. ಇದು ಜನರಿಗೆ ಅರ್ಥವಾಯಿತು. ಇಂತಹ ಕಾರಣಗಳಿಗಾಗಿಯೇ ಈ ಬಾರಿ ಕೊಡಗಿನಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದಾರೆ.  ಪೊನ್ನಣ್ಣ ಅವರ ಬಗ್ಗೆ ಪ್ರತಾಪ್ ಸಿಂಹ ಅವರಿಗೆ ಮಾತನಾಡುವ ನೈತಿಕತೆಯಿಲ್ಲ. ಇದೇ ಚಾಳಿಯನ್ನು ಮುಂದುವರೆಸಿದರೆ ಕೆಪಿಸಿಸಿ ಕಾನೂನು ಘಟಕದಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

More articles

Latest article