ನವದೆಹಲಿ: ಅತ್ತ ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ- 2025 ಅಂಗೀಕಾರವಾಗುತ್ತಿದ್ದಂತೆ ಈ ಮಸೂದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ವಕ್ಫ್ (ತಿದ್ದುಪಡಿ) ಮಸೂದೆ, 2025 ರ ಸಾಂವಿಧಾನಿಕತೆಯನ್ನು ಶೀಘ್ರದಲ್ಲೇ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತದ ಸಂವಿಧಾನದಲ್ಲಿರುವ ತತ್ವಗಳು, ಅವಕಾಶಗಳು, ಆಚರಣೆಗಳ ಮೇಲೆ ಮೇಲೆ ಮೋದಿ ಸರ್ಕಾರ ಮಾಡುತ್ತಿರುವ ಎಲ್ಲಾ ದಾಳಿಗಳನ್ನು ನಾವು ವಿರೋಧಿಸುತ್ತೇವೆ ಎಂದು ಅವರೂ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಯ ಮೇಲಿನ ಚರ್ಚೆಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಮಸೂದೆಯನ್ನು ಮುಸ್ಲಿಂ ವಿರೋಧಿ ಮತ್ತು ಅಸಂವಿಧಾನಿಕ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಮಸೂದೆಯನ್ನು ಐತಿಹಾಸಿಕ ಸುಧಾರಣೆ ಎಂದು ಬಣ್ಣಿಸಿದ್ದ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನಕಾರಿ ಎಂದು ವಾದಿಸಿದೆ.
2019ರ ಸಿಎಎ ಬಗ್ಗೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರೆದಿದೆ. 2005 ಆರ್‌ಟಿಐ ಕಾಯ್ದೆಯ 2019ರ ತಿದ್ದುಪಡಿ, ಚುನಾವಣಾ ನಿಯಮಗಳ (2024) ತಿದ್ದುಪಡಿಗಳ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.