ನವದೆಹಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ತಮ್ಮ ವಿರುದ್ಧ ಲೋಕಸಭೆಯಲ್ಲಿ ಮಾಡಿದ ಗಂಭೀರ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಪಡಿಸಿದ್ದಾರೆ.
ನನ್ನನ್ನು ಬೆದರಿಸಿ, ನಾನು ತಲೆ ತಗ್ಗಿಸುವಂತೆ ಮಾಡಲು ಬಿಜೆಪಿ ನಾಯಕರು ಉದ್ದೇಶಿಸಿರಬಹುದು. ಆದರೆ, ನಾನು ಎಂದಿಗೂ ತಲೆ ಬಾಗುವುದಿಲ್ಲ ಎಂಬ ಮಾತನ್ನು ಅವರಿಗೆ ನೆನಪಿಸಲು ಬಯಸುತ್ತೇನೆ ಎಂದರು.
ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಪ್ರಸ್ತಾಪಿಸಿದ ಖರ್ಗೆ, ನನ್ನ ಜೀವನವು ತೆರೆದ ಪುಸ್ತಕವಾಗಿದ್ದು, ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ಸುಮಾರು ಆರು ದಶಕಗಳ ಕಾಲ ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಇಂತಹ ಸನ್ನಿವೇಶ ಎದುರಿಸಿಲ್ಲ. ಬುಧವಾರ ಸಚಿವ ಅನುರಾಗ್ ಠಾಕೂರ್ ನನ್ನ ವಿರುದ್ಧ ತಪ್ಪು ಮತ್ತು ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಹಾನಿಯಾಗಿದೆ. ಎಲ್ಲ ಮಾಧ್ಯಮಗಳೂ ಆ ಸುದ್ದಿಯನ್ನು ಬಿತ್ತರಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಹರಡಲಾಗಿದೆ ಎಂದು ತಮ್ಮ ನೋವನ್ನು ಹಂಚಿಕೊಂಡರು.
ರಾಜ್ಯಸಭೆಯ ಸಭಾನಾಯಕ ಜೆ.ಪಿ. ನಡ್ಡಾ ಕ್ಷಮೆ ಕೋರಬೇಕು. ಆಡಳಿತಾರೂಢ ಪಕ್ಷ ಮಾಡಬಹುದಾದ ಕನಿಷ್ಠ ಕೆಲಸ ಇದಾಗಿದ್ದು, ಮಾಡಲೇಬೇಕು. ನನ್ನ ವಿರುದ್ಧದ ಆರೋಪಗಳನ್ನು ಠಾಕೂರ್ ಸಾಬೀತುಪಡಿಸದಿದ್ದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಆರೋಪ ಸಾಬೀತುಪಡಿಸಿದಲ್ಲಿ, ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಖರ್ಗೆ ಗುಡುಗಿದರು. ನಂತರ ಪ್ರತಿಪಕ್ಷಗಳ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ, ಹೊರ ನಡೆದರು.