ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ 101 ಜಾತಿಗಳಿದ್ದು, ಅವುಗಳನ್ನು ಆದಿ ಕರ್ನಾಟಕ (ಎಕೆ), ಆದಿ ದ್ರಾವಿಡ (ಎಡಿ) ಮತ್ತು ಆದಿ ಆಂಧ್ರ (ಎಎ) ಎಂದು ನಮೂದಿಸಲಾಗುತ್ತಿದೆ. ಒಳ ಮೀಸಲಾತಿಗಾಗಿ ನಡೆಸುವ ಸಮೀಕ್ಷೆ ವೇಳೆ ಈ 101 ಜಾತಿಗಳ ಮೂಲ ಹೆಸರಿನಲ್ಲೇ ದತ್ತಾಂಶ ಸಂಗ್ರಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಒಕ್ಕೂಟ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 101 ಜಾತಿಗಳಿಗೂ ಪ್ರತ್ಯೇಕ ಹೆಸರುಗಳಿವೆ. ಆದರೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಪರಸ್ಪರ ಭಿನ್ನವಾಗಿವೆ. ಈವರೆಗೂ ಈ ಎಲ್ಲ ಜಾತಿಗಳನ್ನು ಎಕೆ, ಎಡಿ ಮತ್ತು ಎಎ ಎಂದು ದಾಖಲಿಸುವ ಮೂಲಕ ಅವುಗಳ ನಡುವೆ ಇರುವ ಹಿಂದುಳಿದಿರುವಿಕೆಯನ್ನು ಕಡೆಗಣಿಸಲಾಗಿದೆ. ಈ ಲೋಪವನ್ನು ಈಗಲಾದರೂ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಸಂಯೋಜಕ ವಿ.ನಾಗರಾಜ್, ಹಳೇ ಮೈಸೂರು ಭಾಗದಲ್ಲಿ ಹೊಲೆಯ ಮಾದಿಗ ಸಮುದಾಯದ ಎಲ್ಲ ಜಾತಿಗಳನ್ನು ಆದಿ ಕರ್ನಾಟಕ, ಆಂಧ್ರ–ತೆಲಂಗಾಣ ಗಡಿ ಪ್ರದೇಶದಲ್ಲಿ ಆದಿ ದ್ರಾವಿಡ, ಆದಿ ಆಂಧ್ರ ಎಂದು ದಾಖಲಿಸಲಾಗುತ್ತಿದೆ. ಮೂಲ ಹೆಸರು ದಾಖಲಿಸದ ಕಾರಣ, ಈ ಸಮುದಾಯಗಳ ವಸ್ತುಸ್ಥಿತಿ ಕಣ್ಮರೆಯಾಗಿದೆ. ಈ ಪದ್ಧತಿಯನ್ನು ಮುಂದುವರೆಸಿದರೆ ಅತ್ಯಂತ ಹಿಂದುಳಿದಿರುವ ಮತ್ತು ಈವರೆಗೂ ಮೀಸಲಾತಿಯ ಅನುಕೂಲ ಸಿಗದ ಸಮುದಾಯಗಳಿಗೆ ಮತ್ತೆ ಅನ್ಯಾಯವಾಗುತ್ತದೆ. ಹೀಗಾಗಿ ಎಕೆ, ಎಡಿ, ಎಎ ಎಂದು ನಮೂದಿಸುವ ಪದ್ಧತಿಯನ್ನು ಕೈಬಿಡಬೇಕು ಎಂದರು.
ನಗರದಲ್ಲಿ ಪರಿಶಿಷ್ಟ ಸಮುದಾಯಗಳ ಜನರನ್ನು ಹುಡುಕಿ ದತ್ತಾಂಶ ಕಲೆಹಾಕುವುದು ಕಷ್ಟ. ಹೀಗಾಗಿ ನಗರ ಪ್ರದೇಶದಲ್ಲಿನ ಎಲ್ಲ ಸಮುದಾಯಗಳ ದತ್ತಾಂಶವನ್ನು ಸಂಗ್ರಹಿಸಬೇಕು. ಆಗ ಹಿಂದುಳಿದ ವರ್ಗಗಳ ಸ್ಥಿತಿಗತಿ ದತ್ತಾಂಶವೂ ದೊರೆತಂತಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಕೆರೆಗೋಡು ತಿಳಿಸಿದರು.