ನವದೆಹಲಿ: ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ಘನತೆಯನ್ನು ಎತ್ತಿ ಹಿಡಿದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ದಿ. ಟಿ.ಎನ್. ಶೇಷನ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್‌ನ ಮುಖಂಡ ಹಾಗೂ ಸಂಸದ ಸಾಕೇತ್ ಗೋಖಲೆ ಮಂಗಳವಾರ ಆಗ್ರಹಿಸಿದ್ದಾರೆ.
ರಾಜ್ಯ ಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಚುನಾವಣಾ ಆಯೋಗದ 10ನೇ ಆಯುಕ್ತರಾಗಿದ್ದ ಶೇಷನ್ ಅವರು ಆಯೋಗದ ಕಾರ್ಯವಿಧಾನಗಳಲ್ಲಿ ಆಮೂಲಾಗ್ರ ಬದಲಾವಣೆ ತಂದರು. ಶೇಷನ್ ಅವರು ನಿಜವಾಗಿಯೂ ಸ್ವತಂತ್ರ ಚುನಾವಣಾ ಆಯುಕ್ತರಾಗಿದ್ದರು. ‘ನಾನು ಉಪಾಹಾರದಲ್ಲಿ ರಾಜಕಾರಣಿಗಳನ್ನು ತಿನ್ನುತ್ತೇನೆʼ ಎಂಬ ಅವರ ಪ್ರಸಿದ್ಧವಾದ ಹೇಳಿಕೆಯು ಅವರ ಕಾರ್ಯವಿಧಾನ ಸಾರುತ್ತಿದೆ. ಭಯವಿಲ್ಲದ ಅಥವಾ ಯಾರ ಹಂಗಿನಲ್ಲೂ ಇಲ್ಲದೆ ಆಯೋಗದ ಘನತೆ ಮತ್ತು ಸ್ವಾತಂತ್ರವನ್ನು ಎತ್ತಿಹಿಡಿದಿದ್ದಕ್ಕೆ ಅವರ ಈ ಹೇಳಿಕೆ ಕನ್ನಡಿ ಹಿಡಿದಂತಿದೆ. ಸ್ವತಂತ್ರ ಕೇಂದ್ರ ಚುನಾವಣಾ ಆಯೋಗದ ಪರಿಕಲ್ಪನೆಗೆ ಭದ್ರ ಬುನಾದಿ ಹಾಕಿದ ಶೇಷನ್ ಅವರಿಗೆ ಭಾರತ ರತ್ನ ನೀಡಬೇಕು ಎಂದುಆಗ್ರಹಪಡಿಸಿದರು.
ಇಂದು ಚುನಾವಣಾ ಆಯುಕ್ತರನ್ನು ನೇರವಾಗಿ ಸರ್ಕಾರ ಆಯ್ಕೆ ಮಾಡುತ್ತಿದೆ. ಆಯ್ಕೆ ಸಮಿತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೆಚ್ಚಿನ ಮತವನ್ನು ಹೊಂದಿದ್ದಾರೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಲ್ಲ. ಹಾಗಿದ್ದರೆ ಈ ಆಯ್ಕೆ ಬಗ್ಗೆ ವಿಶ್ವಾಸವೇನಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಮಾದರಿ ನೀತಿ ಸಂಹಿತೆಯನ್ನು ಶೇಷನ್ ಅವರು ಜಾರಿಗೆ ತಂದರು. ಆದರೆ ಶೇಷನ್ ಅವರ ಅವಧಿಯ ನಂತರದಲ್ಲಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಈ ಮಾದರಿ ನೀತಿ ಸಂಹಿತೆಯನ್ನು ಮೂಲೆಗುಂಪು ಮಾಡಿದೆ. ಸಮಾಜವನ್ನು ಧರ್ಮ ಹಾಗೂ ಜಾತಿ ಆಧಾರದಲ್ಲಿ ವಿಭಜಿಸುವ ಪ್ರಯತ್ನವನ್ನು ಯಾವುದೇ ಸಂಸ್ಥೆಯ ಭಯವಿಲ್ಲದೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ 80 ಸಂದರ್ಶನಗಳನ್ನು ಮಾಧ್ಯಮಗಳ ಮಾಲೀಕರು ಬಿತ್ತರಿಸಿದ್ದಾರೆ. ಆದರೆ ನೀತಿ ಸಂಹಿತೆ ಆಧಾರದಲ್ಲಿ ಕ್ರಮ ಕೈಗೊಳ್ಳಲು ಆಯೋಗ ನಿರಾಕರಿಸುತ್ತಲೇ ಬಂದಿದೆ ಎಂದು ಆರೋಪಿಸಿದ್ದಾರೆ.
ಮತದಾರರ ನಕಲಿ ಗುರುತಿನ ಚೀಟಿ ಇರುವ ಕುರಿತು ಚನಾವಣಾ ಆಯೋಗವೇ ಒಪ್ಪಿಕೊಳ್ಳುತ್ತಿದೆ. ದೆಹಲಿ ಚುನಾವಣೆಯಲ್ಲಿ 8 ಲಕ್ಷ ಹೊಸ ಮತದಾರರು ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ 39 ಲಕ್ಷ ಹೊಸ ಮತದಾರರು ಸೇರಿರುವುದೇ ಇದಕ್ಕೆ ಸಾಕ್ಷಿ. ಆದರೆ ಮತದಾರರ ಗುರುತಿನ ಚೀಟಿಯನ್ನು ಮೊದಲ ಬಾರಿಗೆ ಜಾರಿಗೆ ತಂದು, ಒಂದು ಕಠಿಣ ವ್ಯವಸ್ಥೆ ಅನುಷ್ಠಾನಗೊಳಿಸಿದ ಶೇಷನ್ ಅವರು ಅದ್ವಿತೀಯ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಗೋಖಲೆ ಹೇಳಿದ್ದಾರೆ.