ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ರದ್ದುಗೊಳಿಸುವಂತೆ ಸ್ಲಲಿಸಲಾಗಿದ್ದ ಅರ್ಜಿಯ ವಿಚಾರಣೆ ಏಪ್ರಿಲ್ 2ರಂದು ನಡೆಯಲಿದೆ. ಇಂದು ರಾಜ್ಯ ಸರ್ಕಾರದ ಪರ ವಕೀಲ ಅನಿಲ್ ಸಿ. ನಿಶಾನಿ ಮಾಡಿದ ತುರ್ತು ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹಾದೇವನ್ ಅವರ ಪೀಠ ದಿನಾಂಕವನ್ನು ನಿಗದಿಪಡಿಸಿದೆ. ಒಂದು ವೇಳೆ ದರ್ಶನ್, ಪವಿತ್ರಾಗೌಡ ಮೊದಲಾದ ಆರೋಪಿಗಳ ಜಾಮೀನು ರದ್ದುಗೊಂಡರೆ ಮತ್ತೆ ಎಲ್ಲ 17 ಆರೋಪಿಗಳು ಜೈಲು ಸೇರಬೇಕಾಗುತ್ತದೆ.
ಜನವರಿ 24 ರಂದು, ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು ಆದರೆ ಅದರ ಸಿಂಧುತ್ವವನ್ನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿಯನ್ನು ಪರಿಶೀಲಿಸಲು ಒಪ್ಪಿಕೊಂಡಿತ್ತು. ನಂತರ ಹೈಕೋರ್ಟ್‌ನ ಜಾಮೀನು ಆದೇಶದ ವಿರುದ್ಧ ರಾಜ್ಯದ ಅರ್ಜಿ ಸಂಬಂಧ ನಟ ದರ್ಶನ್ ಮತ್ತು ಇತರರಿಗೆ ನ್ಯಾಯಾಲಯ ನೋಟಿಸ್ ನೀಡಿತ್ತು.
ಜನವರಿ 6 ರಂದು, ರಾಜ್ಯ ಸರ್ಕಾರ 33 ವರ್ಷದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ 16 ಜನರಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಡಿಸೆಂಬರ್ 13, 2024 ರಂದು, ಹೈಕೋರ್ಟ್ 47 ವರ್ಷದ ದರ್ಶನ್ ಮತ್ತಿತರ ಆರೋಪಿಗಳಿಗೆ ಜಾಮೀನು ನೀಡಿತ್ತು. ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಗಿತ್ತು. ಜೂನ್ 9 ರಂದು ಬೆಂಗಳೂರಿನ ಮಾಗಡಿ ರಸ್ತೆಯ ರಾಜಕಾಲುವೆಯಲ್ಲಿ ರೇಣುಕಾ ಸ್ವಾಮಿ ಶವ ಪತ್ತೆಯಾಗಿತ್ತು.
ನಟ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಇದು ದರ್ಶನ್ ಅವರನ್ನು ಕೆರಳಿಸಿತ್ತು. ಜೂನ್ 8 ರಂದು 33 ವರ್ಷದ ರೇಣುಕಾಸ್ವಾಮಿಯನ್ನು ದರ್ಶನ್ ಸಹಚರರು ಚಿತ್ರದುರ್ಗದಿಂದ ಪುಸಲಾಯಿಸಿ ಬೆಂಗಳೂರಿಗೆ ಕರೆ ತಂದಿದ್ದರು. ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿತ್ತು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಮಂದಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಇದರಿಂದ ಆತ ಮೃತಪಟ್ಟಿದ್ದ. ನಂತರ ಶವವನ್ನು ಸುಮನಹಳ್ಳಿಯ ಮೋರಿಗೆ ಎಸೆದಿದ್ದರು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಇದು ಕೊಲೆ ಎನ್ನುವುದು ಖಚಿತವಾದ ನಂತರ ಪೊಲೀಸರು ಮೈಸೂರಿನಲ್ಲಿ ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಿದ್ದರು.
ನಟ ದರ್ಶನ್ ಈಗಾಗಲೇ ಮೈಸೂರಿನಲ್ಲಿ ದಿ ಡೆವಿಲ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಸೌಜನ್ಯ ಪರ ನ್ಯಾಯಕ್ಕಾಗಿ ಸಭೆ, ಪ್ರತಿಭಟನೆ ನಡೆಸಬಹುದು : ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಸೌಜನ್ಯ ಪರ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇನ್ನು ಮುಂದೆ ಸೌಜನ್ಯ ಪರವಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಲು ಇನ್ನು ಮುಂದೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ. ಇಂದು ಸಂಜೆ 5.30 ಕ್ಕೆ ನಡೆಯಲಿರುವ ದಿಕ್ಸೂಚಿ ಸಭೆ ನಿರಾತಂಕವಾಗಿ ಆರಂಭವಾಗಿದೆ.
ಮಾರ್ಚ್ 18, 2025 ಸಂಜೆ 5.30 ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರ ಪೊಲೀಸರು ನೀಡಿದ್ದ ನೋಟಿಸ್ ಬಗೆಗಿನ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ನೀಡಿದ್ದಾರೆ.
ಸಾಹಿತಿ-ಚಿಂತಕ- ಹೋರಾಟಗಾರರ ಸಮಾಲೋಚನಾ ಸಭೆಯ ಸಂಚಾಲಕರಲ್ಲಿ ಒಬ್ಬರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯಭಾಸ್ಕರ್ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ರಿಟ್ ಪಿಟೀಷನ್ ಸಲ್ಲಿಸಿದ್ದರು. ರಿಟ್ ಪಿಟೀಷನ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು “ಪೊಲೀಸರು , ಸರ್ಕಾರ ಸಭೆಯನ್ನು, ಪ್ರತಿಭಟನೆಯನ್ನು ತಡೆಯುವಂತಿಲ್ಲ. ಆದರೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಪ್ರತಿಭಟನೆಗಳನ್ನು ಊಹೆಯ ಆಧಾರದಲ್ಲಿ ತಡೆಯುವಂತಿಲ್ಲ” ಎಂದು ಆದೇಶ ನೀಡಿದ್ದಾರೆ.
ಸೌಜನ್ಯ ನ್ಯಾಯಕ್ಕಾಗಿ ಮತ್ತು ಊಳಿಗಮಾನ್ಯ ದರ್ಪ ವಿರೋಧಿಸಿ ಸಾಹಿತಿಗಳು-ಚಿಂತಕರು-ಹೋರಾಟಗಾರರ ಸಮಾಲೋಚನಾ ಸಭೆಯ ಆಯೋಜಕರಿಗೆ ಶೇಷಾದ್ರಿಪುರ ಪೊಲೀಸರು 17.03.2025 ರಂದು ರಾತ್ರಿ 10:22 ಕ್ಕೆ ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದರು. ಹೈಕೋರ್ಟ್ ರಿಟ್ ಅರ್ಜಿ ಆದೇಶದ ಪ್ರಕಾರ ಜಸ್ಟಿಸ್ ಫಾರ್ ಸೌಜನ್ಯ ಹೆಸರಿನಲ್ಲಿ ಯಾರೂ ಯಾವುದೇ ಸಭೆ, ಪ್ರತಿಭಟನೆ ನಡೆಸುವಂತಿಲ್ಲ. ಒಂದು ವೇಳೆ ಸಭೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ನೋಟಿಸ್ ನಲ್ಲಿ ಉಲ್ಲೇಖಿಸಿದ್ದರು.
ಶೇಷಾದ್ರಿಪುರ ಪೊಲೀಸ್ ಠಾಣೆಯ ನೋಟಿಸನ್ನು ಮೀರಿ ಸಭೆ ನಡೆಸಿದರೆ, ಅಥವಾ ಸಭೆ ನಡೆಸಲು ಸಭಾಂಗಣ ನೀಡಿದರೆ ಬಂಧಿಸುವುದಾಗಿ ಪೊಲೀಸರು ದೂರವಾಣಿಯಲ್ಲಿ ಸಂಘಟಕರಿಗೆ ಹೇಳಿದ್ದರು ಎಂದು ಹೋರಾಟಗಾರರ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ. ಪೊಲೀಸರು ಕಾನೂನು ಬಾಹಿರವಾಗಿ ನೀಡಲಾದ ವಾಟ್ಸಪ್ ನೋಟಿಸ್ ಹೋರಾಟಗಾರರ ಮೂಲಭೂತ ಹಕ್ಕುಗಳನ್ನು ಕಸಿದಿದೆ. ಪೊಲೀಸರ ಈ ಕ್ರಮ ವಿಕೃತ ಮತ್ತು ದುರುದ್ದೇಶಪೂರಿತವಾಗಿದೆ ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿತ್ತು.
ಸೌಜನ್ಯ ನ್ಯಾಯಕ್ಕಾಗಿ ನಡೆಸುತ್ತಿರುವ ಸಮಾಲೋಚನಾ ಸಭೆಯು ಕಚೇರಿಯೊಳಗೆ ನಡೆಯುತ್ತಿರುವ ಸಭೆಯಾಗಿದೆ. ಪ್ರತಿಭಟನೆಯಲ್ಲದೇ ಇದ್ದರೂ ದುರುದ್ದೇಶಪೂರ್ವಕವಾಗಿ ನೋಟಿಸ್ ನಲ್ಲಿ ಪ್ರತಿಭಟನೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸರು ಒಳಾಂಗಣ ಚಟುವಟಿಕೆಯನ್ನು ನಿಯಂತ್ರಿಸುವಂತಿಲ್ಲ. ಸಮಾಲೋಚನಾ ಸಭೆಯು ಪ್ರತಿಭಟನೆ ಅಲ್ಲದೇ ಇರುವುದರಿಂದ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ನೋಟಿಸ್ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ರಿಟ್ ಅರ್ಜಿಯಲ್ಲಿ ಹೇಳಲಾಗಿದೆ.
ಹೈಕೋರ್ಟ್ ರಿಟ್ ಅದೇಶವು (WP No : 19382/2023) ಕೇವಲ ಆ ಸದರಿ ರಿಟ್ ನ ವಾದಿ- ಪ್ರತಿವಾದಿಗಳಿಗೆ ಮಾತ್ರ ಅನ್ವಯಿಸುತ್ತದೆ. ಹೈಕೋರ್ಟ್ ರಿಟ್ ನ ಅಂತಿಮ ತೀರ್ಪು ಬರದೇ ಇರುವುದರಿಂದ ಹೈಕೋರ್ಟ್ ಆದೇಶವು ಪ್ರತಿವಾದಿಗಳಿಗಲ್ಲದೇ ಬೇರೆಯವರಿಗೆ ಅನ್ವಯಿಸುವುದಿಲ್ಲ. ಆದರೆ ಪೊಲೀಸರು ಹೈಕೋರ್ಟ್ ರಿಟ್ ಅದೇಶದ ಪ್ರತಿವಾದಿಯಲ್ಲದ ಹೋರಾಟಗಾರರನ್ನು ಸಭೆ ನಡೆಸದಂತೆ ತಡೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಹೈಕೋರ್ಟ್ ನ ರಿಟ್ ಆದೇಶದಲ್ಲಿ “9 ನೇ ಪ್ರತಿವಾದಿ ಅಥವಾ ಅವನ ಅನುಯಾಯಿಗಳು ಅಥವಾ ಯಾವುದೇ ವ್ಯಕ್ತಿ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿದರೆ ಅಥವಾ ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ಪ್ರಕಟಿಸಿದರೆ, ಅದು ಕಾನೂನಿಗೆ ಅನುಸಾರವಾಗಿ ಅಪರಾಧವಾಗಿದೆ. ಮತ್ತು ಆ ನಿಟ್ಟಿನಲ್ಲಿ 9 ನೇ ಪ್ರತಿವಾದಿ ಅಥವಾ ಅವನ ಅನುಯಾಯಿಗಳು ಮಾಡಿದ ಯಾವುದೇ ಕ್ರಮದಿಂದ ಬಾಧಿತರಾದ ಯಾವುದೇ ವ್ಯಕ್ತಿ ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕಾನೂನಿನ ಪ್ರಕಾರ ತಕ್ಷಣವೇ ಕ್ರಮ ಕೈಗೊಳ್ಳುವುದು ಪೊಲೀಸರ ಬದ್ಧ ಕರ್ತವ್ಯವಾಗಿದೆ.” ಎಂದು ಹೇಳಲಾಗಿದೆ. ಆದರೆ ಹೈಕೋರ್ಟ್ ರಿಟ್ ನಲ್ಲಿರುವ ಪ್ರತಿವಾದಿಗಳಲ್ಲದ ವ್ಯಕ್ತಿಗಳು ಶೇಷಾದ್ರಿಪುರಂ ಎಐಟಿಯುಸಿ ಸಭಾಂಗಣದಲ್ಲಿ ಸಭೆ ನಡೆಯುವುದಕ್ಕೂ ಮೊದಲೇ, ಯಾರೂ ದೂರು ನೀಡದೆಯೇ ಪೊಲೀಸರು ಕಾರ್ಯಕ್ರಮ ನಿಲ್ಲಿಸುವಂತೆ ನೋಟಿಸ್ ನೀಡಿದ್ದಾರೆ.
ಶೇಷಾದ್ರಿಪುರ ಪೊಲೀಸರ ನೋಟಿಸ್ ಮತ್ತು ಬಂಧನದ ಬೆದರಿಕೆಯು ಸಂವಿಧಾನದ ಆರ್ಟಿಕಲ್ 19(1)(a) ಮತ್ತು 19(1)(b) ಅಡಿಯಲ್ಲಿ ಸಾಹಿತಿ-ಚಿಂತಕ- ಹೋರಾಟಗಾರರ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೋರಾಟಗಾರರ ಪರವಾಗಿ ಹೈಕೋರ್ಟ್ ಗೆ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿಯವರು ಸಲ್ಲಿಸಿರುವ ರಿಟ್ ನಲ್ಲಿ ಹೇಳಲಾಗಿದೆ.