ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ಅಧಿಕೃತ ಶಿಷ್ಟಾಚಾರ ಸೌಲಭ್ಯಗಳನ್ನು ಬಳಸಿಕೊಂಡು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ನ ಹಸಿರು ಮಾರ್ಗದ ಮೂಲಕ ಹೊರಬರುತ್ತಿದ್ದರು ಎನ್ನುವುದು ತನಿಖೆಯಿಂದ ಖಚಿತವಾಗಿದೆ. ಶಿಷ್ಟಾಚಾರ ಕುರಿತು ವಿಚಾರಣೆ ನಡೆಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತ ನೇತೃತ್ವದ ತನಿಖಾ ತಂಡಕ್ಕೆ ಈ ಮಾಹಿತಿ ಲಭ್ಯವಾಗಿದೆ. ಆದರೆ ರನ್ಯಾ ಅವರನ್ನು ರಕ್ಷಿಸಲು ಪೊಲೀಸರು ತಾವಾಗಿಯೇ ಮುಂದಾಗುತ್ತಿದ್ದರೇ ಅಥವಾ ಬೇರೊಬ್ಬರ ಒತ್ತಡಕ್ಕೆ ಕೆಲಸ ಮಾಡುತ್ತಿದ್ದರೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಂದು ಬಾರಿ ರನ್ಯಾ ಅವರನ್ನು ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಪೊಲೀಸ್ ವಾಹನದಲ್ಲಿ ಕರೆ ತಂದಿರುವುದು ದೃಢವಾಗಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಪಾತ್ರ ಕುರಿತು ಐಎಎಸ್ ಅಧಿಕಾರಿ ಗೌರವ ಗುಪ್ತ ನೇತೃತ್ವದ ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ರಾಮಚಂದ್ರ ರಾವ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಸೋಮವಾರ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಪೊಲೀಸರು ಮತ್ತು ಸಿಬ್ಬಂದಿ ನೀಡಿರುವ ಹೇಳಿಕೆಗಳನ್ನು ಕುರಿತೂ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ರನ್ಯಾ ರಾವ್ ಅವರ ಪ್ರವಾಸ ಕುರಿತು ರಾಮಚಂದ್ರರಾವ್ ಅವರ ಪಾತ್ರದ ಬಗ್ಗೆಯೂ ಪ್ರಶ್ನಿಸಲಾಗಿದೆ. ಒಂದೇ ದಿನದಲ್ಲಿ ದುಬೈಗೆ ಹೋಗಿ ಬರುತ್ತಿದ್ದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ. ಈಕೆಯ ಈ ಅನುಮಾನಾಸ್ಪದ ಪ್ರವಾಸ ಕುರಿತು ಮಲತಂದೆ ರಾಮಚಂದ್ರ ರಾವ್ ಅವರ ಪಾತ್ರ ಕುರಿತು ತನಿಖಾ ತಂಡ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ರಾಮಚಂದ್ರ ರಾವ್ ಅವರು ಒಬ್ಬ ಪೇದೆಗೆ ತಮ್ಮ ಮಲಪುತ್ರಿ ರನ್ಯಾಗೆ ಶಿಷ್ಟಾಚಾರ ನೀಡುವಂತೆ ಸೂಚನೆ ನೀಡುತ್ತಿದ್ದರು ಎನ್ನವುದು ಖಚಿತವಾಗಿದೆ. ಗೌರವ್ ಗುಪ್ತಾ ಅವರು ಎರಡು ಮೂರು ದಿನಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್) ರಾಮಚಂದ್ರ ರಾವ್ ಅವರು ಪ್ರೋಟೊಕಾಲ್ ದುರ್ಬಳಕೆ ಮಾಡಿಕೊಂಡಿರುವುದು ಬಹುತೇಕ ಸಾಬೀತಾಗಿದೆ ಎನ್ನಲಾಗಿದೆ. ರಾಮಚಂದ್ರ ರಾವ್ ಅವರು, ಶಿಷ್ಟಾಚಾರ ವಿಭಾಗದ ಸಿಬ್ಬಂದಿ ಹೆಡ್ ಕಾನ್ ಸ್ಟೇಬಲ್ ಬಸವರಾಜ ಬಿಳ್ಳೂರು ಆಲಿಯಾಸ್ ಬಸವರಾಜು ಗೆ ತಮ್ಮ ಪುತ್ರಿ ಮತ್ತು ಕುಟುಂಬದ ಸದಸ್ಯರಿಗೆ ಶಿಷ್ಟಾಚಾರ ನೀಡುವಂತೆ ಸೂಚನೆ ನೀಡಿದ್ದರು. ಸ್ವತಃ ಬಸವರಾಜು ಮಾರ್ಚ್ 14ರಂದು ತನಿಖೆಯ ಸಂದರ್ಭದಲ್ಲಿ ಈ ಅಂಶವನ್ನು ಡಿಆರ್ ಐ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.
ವಿಮಾನ ನಿಲ್ದಾಣ ಗುಪ್ತಚರ ದಳ ವಿಭಾಗದ ಕಾನ್‌ಸ್ಟೆಬಲ್ ಧನುಷ್ ಕುಮಾರ್ ಅವರನ್ನೂ ಡಿಆರ್ ಐ ವಿಚಾರಣೆಗೊಳಪಡಿಸಿದೆ. ರನ್ಯಾ ರಾವ್ ಅವರು ನನಗೆ ದುಬೈನಿಂದ ಕರೆ ಮಾಡಿ ಪ್ರೋಟೊಕಾಲ್ ಪ್ರಕಾರ ಕೆಐಎಎಲ್‌ನಿಂದ ಕರೆದುಕೊಂಡು ಹೋಗಲು ಹೇಳುತ್ತಿದ್ದರು. ತಮ್ಮ ಕುಟುಂಬದವರು ಯಾರೇ ಆಗಮಿಸಿದರೂ ಪ್ರೋಟೊಕಾಲ್ ನೀಡುವಂತೆ ಡಿಜಿಪಿ ರಾಮಚಂದ್ರ ರಾವ್ ಸಾಹೇಬರ ಸೂಚನೆಯಿತ್ತು. ಹೀಗಾಗಿ, ರನ್ಯಾ ರಾವ್ ಅವರನ್ನು ಶಿಷ್ಟಾಚಾರದ ಪ್ರಕಾರ ಕರೆದುಕೊಂಡು ಬರಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಇದಕ್ಕೂ ಮೊದಲೇ ರನ್ಯಾ ರಾವ್ ಅವರ ಪರಿಚಯವಿತ್ತು. ಈ ಹಿಂದೆಯೂ ಸಾಹೇಬರ ಸೂಚನೆಯಂತೆ ರನ್ಯಾ ರಾವ್‌ಗೆ ಎರಡು ಮೂರು ಬಾರಿ ಪ್ರೋಟೊಕಾಲ್ ಸೇವೆ ನೀಡಿದ್ದೆ. ಆದರೆ ಚಿನ್ನ ಕಳ್ಳ ಸಾಗಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಬಸವರಾಜು ಅವರು ಗೌರವ್ ಗುಪ್ತ ಎದುರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.