ಬೆಳಗಾವಿ: ಕೆಲವೇ ವಾರಗಳ ಹಿಂದೆ ಬೆಂಗಳೂರು- ಪುಣೆ ರಸ್ತೆಯ ನೆಲಮಂಗಲ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಕಂಟೈನರ್ ಲಾರಿ ಬಿದ್ದು ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್ ಮಿಕ್ಸರ್ ಲಾರಿ ಮುಗುಚಿ ಬಿದ್ದ ಭೀಕರ ದುರಂತ ಘಟನೆ ನಡೆದಿದೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿ ಸರ್ವಿಸ್ ರಸ್ತೆಯ ಬೆಳಗಾವಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕಾರಿನೊಳಗೆ ಸಿಲುಕಿ ಒದ್ದಾಡುತ್ತಿದ್ದ ಇಬ್ಬರನ್ನು ಎರಡು ಕ್ರೇನ್ ಮೂಲಕ ರಕ್ಷಣೆ ಮಾಡಲಾಗಿದೆ.
ಕಾಂಕ್ರಿಟ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಅಪ್ಪಚ್ಚಿಯಾಗಿದ್ದು, ಕಾರಿನೊಳಗೆ ಸಿಲುಕಿಕೊಂಡ ಇಬ್ಬರು ನರಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಮ್ಮನ್ನು ರಕ್ಷಿಸುವಂತೆ ಕೈ ಬೀಸಿ ಕೂಗಿಕೊಳ್ಳುತ್ತಿದ್ದರು. ಕೂಡಲೇ ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೇವಲ 15 ನಿಮಿಷದಲ್ಲಿ ಕಾರಿನಲ್ಲಿದ್ದ ಇಬ್ಬರನ್ನು ಹೊರತೆಗೆದು ರಕ್ಷಿಸಿದ್ದಾರೆ. ಕಾರಿನಲ್ಲಿದ್ದ ಪರಪ್ಪ ಬಾಳೆಕಾಯಿ, ನಿಂಗಪ್ಪ ಕೊಪ್ಪದ ಅವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಕ್ರೀಟ್ ಮಿಕ್ಸರ್ ಲಾರಿ ಮುಗುಚಿ ಬಿದ್ದ ಪರಿಣಾಮ ವೆಗನರ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು.