ಫೇಕ್ ಅಂಡ್ ಹೇಟ್ ಫ್ಯಾಕ್ಟರಿಗಳ ಒಂದು ನೆನಪು

Most read

ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ʼಮುಂಜಾವುʼ ಪತ್ರಿಕೆ ನಡೆಸುತ್ತಿದ್ದಾಗ (1982 ಜನವರಿ – 1992 ಡಿಸೆಂಬರ್)‌ ನೆರೆಯ ತಾಲ್ಲೂಕಿನಲ್ಲಿ ಅದೇ ಸಮಯಕ್ಕೆ ಪತ್ರಿಕೆ ಆರಂಭಿಸಿದ್ದ ನನ್ನ ಸಮವಯಸ್ಕರಾದ ಸಂಪಾದಕರೊಬ್ಬರು ಕಾರಣಾಂತರದಿಂದ ನನ್ನ ಮೇಲೆ ಹಗೆತನ ಕಟ್ಟಿಕೊಂಡು, ನನ್ನ ವಿರುದ್ಧ ಯಾವಾಗಲೂ ಏನಾದರೂ ಅಲ್ಲಸಲ್ಲದ್ದು ಬರೆಯುತ್ತಲೇ ಇದ್ದರು. ನಾನು ಒಂದು ಸಾಮಾಜಿಕ ಧ್ಯೇಯವನ್ನಿಟ್ಟುಕೊಂಡು ಪತ್ರಿಕೆ ನಡೆಸುತ್ತಿದ್ದು, ಯಾವುದೇ ದುಶ್ಚಟಗಳಿಗೆ, ವ್ಯಕ್ತಿಗತ ಕಲಹಗಳಿಗೆ ಅವಕಾಶವಿಲ್ಲದಂತೆ ಬದುಕುತ್ತಿದ್ದುದರಿಂದ ಅವರಿಗೆ ನನ್ನ ವಿರುದ್ಧ ಬರೆಯಲು ಏನೂ ಇರುತ್ತಿರಲಿಲ್ಲ. ಆದರೂ ಏನಾದರೊಂದು ಸುಳ್ಳನ್ನು ಹುಟ್ಟಿಸಿಕೊಂಡು, ಅದನ್ನೇ ಪುನರಾವರ್ತನೆ ಮಾಡುತ್ತ ಬರೆಯುವುದನ್ನು ಬಿಡಲಿಲ್ಲ. “ಗಡ್ಡ ಬಿಟ್ಟುಕೊಂಡು ಹೆಗಲಿಗೊಂದು ಜೋಳಿಗೆ ನೇತಾಕಿಕೊಂಡು, ತಾನೊಬ್ಬ ಬುದ್ಧಿಜೀವಿಯಂತೆ ಪೋಸ್‌ ಕೊಡುವ …” ಎನ್ನುವುದು ಸರ್ವೇಸಾಮಾನ್ಯವಾಗಿರುತ್ತಿದ್ದ ಅವರ ಒಂದು ʼಆರೋಪʼ!

1988ರ ಏಪ್ರಿಲ್‌ 1ರಂದು ನಾವು ನನ್ನ ಜೀವನಸಂಗಾತಿ ಹೇಮಾ ಅವರ ಒಂದೂಮುಕ್ಕಾಲು ಲಕ್ಷ ರೂ. ಬ್ಯಾಂಕ್‌ ಲೋನಿನಲ್ಲಿ ಕೊಪ್ಪದಲ್ಲಿ ಮನೆ ಕಟ್ಟಿಸಲು ಆರಂಭಿಸಿದ್ದೆವು. ಅದಾಗಿ ಒಂದೆರಡು ವಾರದಲ್ಲೇ ಗುಬ್ಬಗದ್ದೆ ಕಾಡಿನ ಹೋರಾಟ ದಿಡೀರಾಗಿ ಶುರುವಾಯಿತು. (‘ಈದಿನ.ಕಾಂ’ ನ ʼಜೋಳಿಗೆʼ ಅಂಕಣದಲ್ಲಿ ಕಳೆದ ಸಂಚಿಕೆಯಲ್ಲಿ ಇದರ ಕುರಿತು ಬರೆದಿದೀನಿ.) ಅದರ ಭಾಗವಾಗಿ ಎಲ್ಲಾ ಕಾನೂನು ವ್ಯವಹಾರಗಳನ್ನು ನಿರ್ವಹಿಸಲು ಅದರ ಹೋರಾಟ ಸಮಿತಿ ಆಯ್ಕೆ ಮಾಡಿದ್ದ ನಮ್ಮ ಮೂವರ ತಂಡ ಪದೇಪದೇ ಬೆಂಗಳೂರಿಗೆ, ಚಿಕ್ಕಮಗಳೂರಿಗೆ, ಮೂಡಿಗೆರೆಗೆ ಹೋಗಬೇಕಾಗುತ್ತಿತ್ತು. ಹಳ್ಳಿಯವರು ಅಲ್ಪಸ್ವಲ್ಪ ಹಣ ಸಂಗ್ರಹಿಸಿ ಕೊಡುತ್ತಿದ್ದರು, ಆದರೆ ಅದು ಸಾಕಾಗದಿದ್ದಾಗ ಅಥವಾ ತುರ್ತು ಇದ್ದಾಗ ಕಪಾಟಿನಲ್ಲಿರುತ್ತಿದ್ದ ನಮ್ಮ ಮನೆ ಸಾಲದ ಹಣವನ್ನೇ ತೆಗೆದುಕೊಂಡು ಹೋಗಬೇಕಾಗುತ್ತಿತ್ತು. ಹೀಗೆ ಆರೇಳು ಸಾವಿರ ರೂ. (ಇಂದಿನ ಲೆಕ್ಕದಲ್ಲಿ ಕಮ್ಮಿಯೆಂದರೂ ಅರವತ್ತೆಪ್ಪತ್ತು ಸಾವಿರ) ಕೈಯಿಂದ ಖರ್ಚು ಮಾಡಿಕೊಂಡಿದ್ದೆ. ಮುಂದೆ ಖರ್ಚು ವಿಪರೀತ ಆದಾಗ ಒಂದು ಬಾರಿ ತಾಲ್ಲೂಕಿನ ವಿವಿಧೆಡೆ ಸುತ್ತಾಡಿ ಹಿತೈಷಿಗಳಿಂದಲೂ ವಂತಿಗೆ ಸಂಗ್ರಹಿಸಿದ್ದೆವಾದರೂ ಕೈಯಿಂದ ಖರ್ಚಾದ ಹಣವನ್ನು ವಾಪಸ್‌ ಭರ್ತಿ ಮಾಡಿಕೊಳ್ಳಲು ಆಗಲೇ ಇಲ್ಲ. ಅದಿರಲಿ.

ಆದರೆ ಕಾಡಿನ ಹೋರಾಟಕ್ಕಾಗಿ ಹಳ್ಳಿಗರು ಹಣ ಸಂಗ್ರಹಿಸಿ ಕೊಡುತ್ತಿದ್ದುದು, ಹಿತೈಷಿಗಳಿಂದ ವಂತಿಗೆ ಸಂಗ್ರಹಿಸಿದ್ದು, ಅದೇ ಹೊತ್ತಿನಲ್ಲಿ ನಾವು ಮನೆ ಕಟ್ಟಿಸುತ್ತಿದ್ದುದು, ಇದೆಲ್ಲ ನಮ್ಮ ʼಹಗೆಗಾರʼ ಸಂಪಾದಕರಿಗೆ ನನ್ನ ವಿರುದ್ಧ ಬರೆಯಲು ಸಮೃದ್ಧ ಸರಕನ್ನು ಒದಗಿಸಿತು. ಅವರೂ ರಂಜಕವಾಗಿ ತಿರುಗಿಸಿ ಮುರುಗಿಸಿ ಬರೆದೇ ಬರೆದರು (ಜನರೇನೂ ಕ್ಯಾರೇ ಅನ್ನಲಿಲ್ಲ ಅನ್ನುವುದು ಬೇರೆ ಮಾತು. ಅವರಿಗೆ ಅದರ ಪರಿವೆ ಇರಲಿಲ್ಲ. ತಮ್ಮ ಒಳಗಿನ ಉರಿಯನ್ನು ಕಾರಿಕೊಳ್ಳುವುದಷ್ಟೇ ಅವರಿಗೆ ಮುಖ್ಯವಾಗಿತ್ತು.)

ಹೀಗೆ ಒಮ್ಮೆ ತುಂಬಾ ಕಿರಿಕಿರಿ ಅನ್ನಿಸಿದ ಹೊತ್ತಿನಲ್ಲಿ ಇದಕ್ಕೊಂದು ಕಾನೂನು ರೀತ್ಯಾ ಕೊನೆ ಕಾಣಿಸಲು ಸಾಧ್ಯವಾ ನೋಡೋಣ ಅಂತ ಯೋಚಿಸಿದೆ. ಕೊಪ್ಪದಲ್ಲಿ ನಮ್ಮ ಅತ್ಯಂತ ಹಿತೈಷಿಗಳಾದ ಎಚ್.ಡಿ.ನಾಯಕ್‌ ಎಂಬ ಹಿರಿಯ ವಕೀಲರಿದ್ದರು. ನಮ್ಮ ಲೀಗಲ್‌ ವಿಚಾರಗಳು ಮಾತ್ರವಲ್ಲದೆ ಸ್ವಂತದ ಕಷ್ಟಸುಖದವರೆಗೆ ಎಲ್ಲವನ್ನೂ ಅವರ ಬಳಿ ಶೇರ್‌ ಮಾಡಿಕೊಳ್ಳುವಷ್ಟು ಅವರು, ಅವರ ಮಡದಿ ನಮ್ಮನ್ನು ಹಚ್ಚಿಕೊಂಡಿದ್ದರು. ಅವರಲ್ಲಿ ನನ್ನ ಆಲೋಚನೆ ಮುಂದಿಟ್ಟಾಗ ಅವರು, “ನೋಡಿ, ನೀವು ಬೇಕು ಅಂದರೆ ನಾನು‌ ಅವರಿಗೆ ಒಂದು ಲೀಗಲ್‌ ನೋಟೀಸ್ ಇಶ್ಯೂ ಮಾಡ್ತೀನಿ. ಕೇಸೂ ಬೇಕಿದ್ದರೆ ನಡೆಸೋಣ. ಆದರೆ, ನಿಮ್ಮ ಹಿತೈಷಿಯಾಗಿ ನಾನೊಂದು ಮಾತು ಹೇಳ್ತೀನಿ, ಕೇಳ್ತೀರಾ? ಅದು ಕೆಸರು. ಕೆಸರಿಗೆ ಕಲ್ಲು ಹಾಕಿದರೆ ನಮ್ಮ ಮೈಯೇ ಕೆಸರಾಗೋದು. ಯಾವ ನೈತಿಕತೆಯೂ ಇಲ್ಲದವರು ಎಂತಹ ನೀಚ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು, ಎಂತಹ ಹಸೀ ಸುಳ್ಳನ್ನು ಬೇಕಾದರೂ ರಾಜಾರೋಷವಾಗಿ ಬರೆಯಬಲ್ಲರು. … ʼಗುದ್ದಾಡಿದರೆ ಗಂಧದ ಕೊರಡಿನ ಜೊತೆ ಗುದ್ದಾಡಬೇಕುʼ ಅಂತ ಹಿರಿಯರು ಹೇಳಿದಾರೆ. ಕೆಸರನ್ನೇ ತಿಂದುಕೊಂಡು ಅದರಲ್ಲೇ ಮುಳುಗೇಳುವ ಹಂದಿಯ ಜೊತೆ ಗುದ್ದಾಡುವ ಕೆಲಸ ನಿಮಗೆ ಬೇಕಾ?” ಎಂದರು.

ಅವರ ಇಂತಹ ಅನುಭವಪೂರ್ಣವಾದ ಹಿತನುಡಿ ಕೇಳಿ ನಾನು ನನ್ನ ಆಲೋಚನೆ ಕೈಬಿಟ್ಟೆ.

[ಮುಂದೆ ಆ ಸಂಪಾದಕರು ವ್ಯಕ್ತಿಗತ ವಿಚಾರಗಳಿಗಾಗಿ ಅನೇಕ ಸಲ ಪೆಟ್ಟು ತಿಂದರು, ಒಮ್ಮೆ ಜೈಲು ವಾಸವನ್ನೂ ಸವಿದರು. ಬಹಳ ಕಾಲದ ಮೇಲೆ ʼಹಿರಿಯ ಪತ್ರಕರ್ತರುʼ ಅಂತಲೂ ಕರೆಸಿಕೊಂಡರು!]

ʼಫೇಕ್‌ & ಹೇಟ್‌ʼ ಫ್ಯಾಕ್ಟರಿಯ ನಿನ್ನೆಯ ಒಂದು ʼಉತ್ಪನ್ನʼವನ್ನು ಓದಿದಾಗ ಇದೆಲ್ಲ ನೆನಪಾಗಿ, ʼಕನ್ನಡ ಪ್ಲಾನೆಟ್ʼ ಓದುಗರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು ಅಷ್ಟೆ.

ಸಿರಿಮನೆ ನಾಗರಾಜ್

More articles

Latest article