ಕುಡಿದ ಮತ್ತಿನಲ್ಲಿ ಕಾರು ಅಪಘಾತ: ‘ಇನ್ನೊಂದು ರೌಂಡ್’ ಎಂದು ಕೂಗಿದ ವಿದ್ಯಾರ್ಥಿ!

Most read

ವಡೋದರಾ: ಪಾನ ನಿಷೇಧವಾಗಿರುವ ಗುಜರಾತ್‌ನ ವಡೋದರಾದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ್ದಾನೆ. ಶುಕ್ರವಾರ ಮಧ್ಯರಾತ್ರಿ 12.30 ರ ಸುಮಾರು ವಡೋದರಾ ನಗರದ ಕರೇಲಿಯಾಬಾಗ್‌ ನ ಮುಕ್ತಾನಂದ ಕ್ರಾಸ್‌ ಬಳಿ ಈ ಘಟನೆ ನಡೆದಿದೆ. ಈ ವಿಡಿಯೊ ಸಿಟಿಟಿವಿಯಲ್ಲಿ ದಾಖಲಾಗಿದ್ದು ವಡೋದರಾ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ವಾರಾಣಸಿ ಮೂಲದ 20 ವರ್ಷದ ಕಾನೂನು ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ ಎಂಬಾತ ತನ್ನ ಫೋಕ್ಸ್‌ ವ್ಯಾಗನ್‌ ಕಾರನ್ನು ಚಲಾಯಿಸಿಕೊಂಡು ಮುಕ್ತಾನಂದ ಕ್ರಾಸ್‌ ಮಾರ್ಗವಾಗಿ ಹೊರಟಿದ್ದ. ಈ ವೇಳೆ ಭಾರಿ ವೇಗದಲ್ಲಿ ಕಾರು ಸಾಗುತ್ತಿತ್ತು. ಎದುರಿಗೆ ಬಂದ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿತ್ತು. ನಂತರ ನಿಯಂತ್ರಣ ಕಳೆದುಕೊಂಡ ಕಾರು ಮುಂದೆ ಸಾಗುತ್ತಿದ್ದ ಹಲವು ವಾಹನಗಳು ಮತ್ತು ‍ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ನಲ್ಲಿದ್ದ ಹೇಮಾಲಿ ಪಟೇಲ್‌ ಎನ್ನುವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಂದು ಮಗು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ರಕ್ಷಿತ್ ಚೌರಾಸಿಯಾ ಜೊತೆಗೆ ಮುಂದಿನ ಸೀಟಿನಲ್ಲಿದ್ದ ರಕ್ಷಿತ್ ಸ್ನೇಹಿತ ಮಿತ್ ಚೌಹಾಣ್ ಎಂಬ ಯುವಕ ಕಾರಿನಿಂದ ಇಳಿದು ಬಂದಿದ್ದಾನೆ. ‘ರಕ್ಷಿತ್‌ನಿಂದ ಅಪಘಾತವಾಯಿತು..’ ಎಂದು ಆತ ಆತಂಕದಿಂದ ರಕ್ಷಿತ್‌ನತ್ತ ಬೆರಳು ತೋರಿಸುತ್ತಿದ್ದ. ನಂತರ ಕಾರಿನಿಂದ ಕೆಳಗಿಳಿದು ಬಂದ ರಕ್ಷಿತ್, ‘ಇನ್ನೊಂದು ರೌಂಡ್, ಇನ್ನೊಂದು ರೌಂಡ್’ ಎಂದು ಅರಚುತ್ತಿದ್ದದ್ದು ವಿಡಿಯೊದಲ್ಲಿ ದಾಖಲಾಗಿದೆ. ತಕ್ಷಣವೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ರಕ್ಷಿತ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಕ್ಷಿತ್‌ನನ್ನು ಬಂಧಿಸಿದ್ದಾರೆ. ಕುಡಿದು ಅತಿ ವೇಗದಿಂದ ಕಾರು ಚಲಾಯಿಸಿದ್ದರಿಂದ ಅಪಘಾತವಾಗಿದೆ. ಆರೋಪಿ ವಾಹನ ಚಾಲನಾ ಪರವಾನಗಿ ಹೊಂದಿದ್ದಾನೆ. ಆತ ನಗರದ ಪಿ.ಜಿ ಒಂದರಲ್ಲಿ ನೆಲೆಸಿದ್ದ. ಆತ ಡ್ರಗ್ಸ್ ಸೇವಿಸಿದ್ದನೇ ಎಂಬುದರ ಬಗ್ಗೆ ಪರೀಕ್ಷೆ ನಡೆಯುತ್ತಿದೆ ಎಂದು ವಡೋದರಾ ಡಿಸಿಪಿ ಪನ್ನಾ ಮೊಮ್ಯಾ ಹೇಳಿದ್ದಾರೆ. ಕಾರು ನಿಯಂತ್ರಣ ಕಳೆದುಕೊಂಡಿದ್ದರಿಂದ ಮುಂಬದಿಯ ಏರ್‌ ಬ್ಯಾಗ್ ತೆರೆದುಕೊಂಡಿತ್ತು. ಹೀಗಾಗಿ ನನಗೆ ಮುಂದೆ ಸ್ಕೂಟರ್ ಕಾಣಿಸಲಿಲ್ಲ ಎಂದು ಆರೋಪಿ ರಕ್ಷಿತ್‌ ಹೇಳಿದ್ದಾನೆ.

ಕಳೆದ ವರ್ಷ ಪುಣೆಯಲ್ಲಿಯೂ ಇದೇ ರೀತಿಯ ಅಪಘಾತ ಪ್ರಕರಣವೊಂದು ನಡೆದಿತ್ತು. ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಪಾನಮತ್ತ ಬಾಲಕನು ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಯುವ ಟೆಕಿಗಳು ಮೃತಪಟ್ಟಿದ್ದರು.

More articles

Latest article