ಗಿಡಕ್ಕೆ ನೀರೆರೆಯುವುದು, ಹಸಿದವರಿಗೆ ಅನ್ನ ನೀಡುವುದು ನಿಜವಾದ ಧರ್ಮ: ಈಶ್ವರ ಖಂಡ್ರೆ

Most read

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ಸಾಲಿನಲ್ಲಿದ್ದು, ಇದಕ್ಕೆ ವೀರಶೈವ, ಲಿಂಗಾಯತ ಮಠ ಮಾನ್ಯಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದಗಂಗೆ ಮಠ, ಸುತ್ತೂರು ಸಂಸ್ಥಾನ, ಸಿರಿಗೆರೆ ಸೇರಿದಂತೆ ನಮ್ಮ ಸಮಾಜದ ಹಲವು ಮಠಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಪ್ರತಿಭಾವಂತರು ಇಂದು ದೇಶ, ವಿದೇಶಗಳಲ್ಲಿ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ತಮ್ಮ ಜೀವನವನ್ನು ಕೇವಲ ಧಾರ್ಮಿಕ, ಆಧ್ಯಾತ್ಮಿಕತೆಗಷ್ಟೇ ಸೀಮಿತಗೊಳಿಸದೆ, ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು. ಅವರು ಧರ್ಮ ದಂಡಯಾತ್ರೆ ಕೈಗೊಂಡು ವೀರಶೈವಧರ್ಮ ಕೇಂದ್ರಗಳು, ಭೂರುದ್ರ ಭಕ್ತ ಸಂಘಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಅಗ್ರೇಸರಾಗಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯೇ ರೈತರ ಕಲ್ಯಾಣಕ್ಕಾಗಿ ಬಡಜನರ ಉದ್ದಾರಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೈಗೊಂಡ ನಿರ್ಧಾರಗಳು ಅವರಿಗಿದ್ದ ಸಾಮಾಜಿಕ ಕಾಳಜಿಗೆ ಸಾಕ್ಷೀಭೂತವಾಗಿವೆ ಎಂದ ಈಶ್ವರ ಖಂಡ್ರೆ, ಅದೇ ಪರಂಪರೆಯನ್ನು ನಮ್ಮ ವೀರಶೈವ ಮಠಗಳು ಅನೂಚಾನವಾಗಿ ಮುಂದುವರಿಸಿಕೊಂಡು ಬಂದಿವೆ ಎಂದು ತಿಳಿಸಿದರು.

ಇಂತಹ ಜಯಂತಿ ಆಚರಣೆ ಇಂದಿನ ಪೀಳಿಗೆಗೆ ನಮ್ಮ ಪೂರ್ವಜರ ಮಹತ್ಕಾರ್ಯ, ಜನಸೇವೆಯ ಬಗ್ಗೆ ತಿಳಿಯಹೇಳುತ್ತದೆ. ಇದು ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸುತ್ತದೆ. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತದೆ. ಇದು ಯುವ ಪೀಳಿಗೆಯಲ್ಲಿ ಮನಃಪರಿವರ್ತನೆಗೆ ಬೆಳಕಾಗಿ, ಸಮಾಜದ ಪರಿವರ್ತನೆಗೆ ದಾರಿದೀಪವಾಗುತ್ತದೆ ಎಂದು ಹೇಳಿದರು.

ಹಸಿದವರಿಗೆ ಅನ್ನ ನೀಡುವುದೇ ಧರ್ಮ:

ವಿಶ್ವಗುರು ಬಸವಣ್ಣನವರು ದಯಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದಾರೆ. ಬಿದ್ದವರನ್ನು ಮೇಲೆತ್ತುವುದೇ ಧರ್ಮ, ಹಸಿದವರಿಗೆ ಅನ್ನ ಹಾಕುವುದು ಧರ್ಮ, ವೃದ್ಧ ತಂದೆ, ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಧರ್ಮ, ಗಿಡಮರಗಳಿಗೆ ನೀರೆರೆದು ಪೋಷಿಸುವುದು ಧರ್ಮ. ಇಂತಹ ಧರ್ಮದ ಪ್ರಚಾರವನ್ನು ವೀರಶೈವ, ಲಿಂಗಾಯತ ಮಠ ಮಾನ್ಯಗಳು ಮಾಡುತ್ತಿವೆ. ಹಾಗೆಯೇ ಈ ಭೂಮಿಯಲ್ಲಿ ಹುಟ್ಟಿದ ಎಲ್ಲ ಮಹಾಪುರುಷರೂ ಪ್ರಕೃತಿ, ಪರಿಸರ ಹಾಗೂ ಅರಣ್ಯವನ್ನು ಉಳಿಸಲು ಮಹತ್ವದ ಕಾಳಜಿ ತೋರಿದ್ದಾರೆ. ಪ್ರಕೃತಿ ಮತ್ತು ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಮುಂದಿನ ಪೀಳಿಗೆಗೆ ಇರುವ ಒಂದೇ ಭೂಮಿಯನ್ನು ಉತ್ತಮವಾಗಿ ಹಸ್ತಾಂತರಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ವೀರಶೈವ ಮತ್ತು ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಶ್ರೀಕ್ಷೇತ್ರ ಯಡಿಯೂರು ಸಂಸ್ಥಾನದ ಪರಮಪೂಜ್ಯ  ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತಿತರರು ಪಾಲ್ಗೊಂಡಿದ್ದರು.

More articles

Latest article