ಬೆಂಗಳೂರು: ವೈದ್ಯಕೀಯ ಚಿಕಿತ್ಸೆಗಾಗಿ ಗ್ರಾಹಕಿಯ ಸೋಗಿನಲ್ಲಿ ಚಿನ್ನಾಭರಣ ಪ್ರದರ್ಶನ ಮೇಳಕ್ಕೆ ಆಗಮಿಸಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ನಿವೃತ್ತ ಶಿಕ್ಷಕಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಉದಯಗಿರಿ ನಿವಾಸಿ ಜಹೀರಾ ಫಾತೀಮಾ (64) ಬಂಧಿತ ಆರೋಪಿ. ಆಕೆಯಿಂದ ರೂ. 8 ಲಕ್ಷ ಮೌಲ್ಯದ 78 ಗ್ರಾಂ ಚಿನ್ನಾಭರಣ ಮತ್ತು 12 ಗ್ರಾಂ ವಜ್ರದ ಬ್ರೇಸ್ ಲೆಟ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜನವರಿ 17 ರಂದು ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ವೊಂದರಲ್ಲಿ ನಡೆದಿದ್ದ ಆಭರಣ ಪ್ರದರ್ಶನದಲ್ಲಿ ರೂ. 4.75 ಲಕ್ಷ ಮೌಲ್ಯದ ವಜ್ರದ ಬ್ರೇಸ್ ಲೆಟ್ ಮತ್ತು 59 ಗ್ರಾಂ ತೂಕದ ಚಿನ್ನದ ಬಳೆಗಳನ್ನು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನಾತಕೋತ್ತರ ಪದವೀಧರೆಯಾಗದ ಜಹೀರಾ ಮದುವೆಯಾದ ಎರಡೇ ವರ್ಷಕ್ಕೆ ಪತಿ ಮೃತಪಟ್ಟಿದ್ದರು. ಹಾಗಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದರು. ನಂತರ ಸುಧಾರಿಸಿಕೊಂಡು ದುಬೈ ಹಾಗೂ ಇತರೆ ದೇಶಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ತವರು ಮನೆಗೆ ಮರಳಿದ್ದರು. ಈ ಮಧ್ಯೆ ಅವರಿಗೆ ಹೃದಯ ಸಂಬಂಧಿ ರೋಗ ಕಾಣಿಸಿಕೊಂಡಿತ್ತು. ಇದಕ್ಕಾಗಿ ಮೂರ್ನಾಲ್ಕು ಬಾರಿ ಸ್ಟಂಟ್ ಅಳವಡಿಸಿಕೊಂಡಿದ್ದರು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸಾ ವೆಚ್ಚಕ್ಕಾಗಿ ಚಿನ್ನಾಭರಣ ಕಳವು ಮಾಡುತ್ತಿದ್ದರು
ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಾಭರಣ ಪ್ರದರ್ಶನಗಳ ಬಗ್ಗೆ ಫೇಸ್‌ಬಕ್ ಜಾಹೀರಾತು ನೋಡಿದ್ದ ಜಹೀರಾ, ಅದರಲ್ಲಿದ್ದ ಅರ್ಜಿ ತುಂಬಿ, ತಮ್ಮ ಮೊಬೈಲ್ ನಂಬರ್ ನೋಂದಾಯಿಸುತ್ತಿದ್ದರು. ಬೆಂಗಳೂರು, ಮೈಸೂರು ಸೇರಿ ಎಲ್ಲಿಯೇ ಆಭರಣ ಪ್ರದರ್ಶನ ನಡೆದರೂ ಅವರಿಗೆ ಸಂದೇಶ ಬರುತ್ತಿತ್ತು. ರಾಜಾಜಿನಗರದ ಹೋಟೆಲ್‌ವೊಂದರಲ್ಲಿ ಬೆಂಗಳೂರಿನ ಚಿನ್ನಾಭರಣ ಮಳಿಗೆಗಳು ಭಾಗವಹಿಸಿದ್ದವು. ಗ್ರಾಹಕರ ಸೋಗಿನಲ್ಲಿ ಪ್ರವೇಶಿಸಿದ್ದ ಜಹೀರಾ, ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.