ವಿನಯ್‌ ಕುಲಕರ್ಣಿ ರಾಜಕೀಯ ಭವಿಷ್ಯ ಮುಗಿಸಲು 15 ಕೋಟಿ ರೂ. ಡೀಲ್ !!!

Most read


ಬೆಂಗಳೂರು: ರಾಜಕಾರಣಿಯೊಬ್ಬರ ಹತ್ತಿರ ನೀನು ನನಗೆ 15 ಕೋಟಿ ರೂ. ಕೊಡಿಸಿದರೆ ನಾನು ಮಾಫಿ ಸಾಕ್ಷಿ ಆಗುತ್ತೇನೆ. ಮಾಜಿ ಸಚಿವ ವಿನಯ ಕುಲಕರ್ಣಿ ಅವರ ರಾಜಕೀಯ ಭವಿಷ್ಯವನ್ನುಮುಗಿಸಿ ಅವರನ್ನು ಕೊಲೆ ಕೇಸಿನಲ್ಲಿ ಸಿಕ್ಕಿ ಹಾಕಿಸುತ್ತೇನೆ. ಈ ರೀತಿ ಬಸವರಾಜ ಮುತ್ತಗಿ ಉದ್ಯಮಿ ಐಶ್ವರ್ಯಾ ಗೌಡ ಅವರಿಗೆ ಮಾತುಕೊಟ್ಟಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ವಿನಯ ಕುಲಕರ್ಣಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿಯನ್ನು ಮೂರನೇ ಬಾರಿಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಮಾನಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಸೋಮವಾರ ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ  ವಿನಯ ಕುಲಕರ್ಣಿ ಪರ ಹಿರಿಯ ವಕೀಲರು  ವಿಷಯವನ್ನು ಕೋರ್ಟ್‌ ಗಮನಕ್ಕೆ ತಂದರು.

ಈ ಪ್ರಕರಣ ಕುರಿತಂತೆ ವಿನಯ ಕುಲಕರ್ಣಿ, ದಿನೇಶ್, ಅಶ್ವತ್ ಮತ್ತಿತರ ಆರೋಪಿಗಳು ಸಲ್ಲಿಸಿರುವ ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ನೀನು ನನಗೆ ರಾಜಕಾರಣಿಯೊಬ್ಬರ ಹತ್ತಿರ ರೂ. 15 ಕೋಟಿ ಕೊಡಿಸಿದರೆ ಅವರಿಗೂ ಅನುಕೂಲ ಆಗುವಂತೆ ಮಾಫಿ ಸಾಕ್ಷಿಯಾಗಿ ವಿನಯ ಕುಲಕರ್ಣಿ ಅವರನ್ನು ಕೇಸಿನಲ್ಲಿ ಸಿಕ್ಕಿ ಹಾಕಿಸುತ್ತೇನೆ ಎಂದು ಬಸವರಾಜ ಮುತ್ತಗಿಯು, ಐಶ್ವರ್ಯಾ ಗೌಡ ಜೊತೆಗೆ ನಡೆಸಿರುವ ಮಾತುಕತೆಯ ಪೆನ್ ಡ್ರೈವ್ ನಮ್ಮ ಬಳಿ ಇದೆ ಎಂದು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಆದರೆ ಮುತ್ತಗಿ ಪರ ವಕೀಲ ನಾಗೇಂದ್ರ ನಾಯಕ್ ಈ ಆರೋಪವನ್ನು ತಳ್ಳಿ ಹಾಕಿದರು.  ಅವರು ವಾದಿಸಿ ಉದ್ಯಮಿ ಐಶ್ವರ್ಯ ಗೌಡ ಅವರು ವಿನಯ ಕುಲಕರ್ಣಿಗೆ ರೂ. 40 ಕೋಟಿ ಕೊಡಬೇಕಿತ್ತು. ಆ ಹಣವನ್ನು ವಸೂಲಿ ಮಾಡುವ ಕೆಲಸವನ್ನು ಬಸವರಾಜ ಮುತ್ತಗಿಗೆ ವಹಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದ ವಿಷಯ ಇದಾಗಿದೆಯೇ ಹೊರತು ಹೊರತು ಮಾಫಿ ಸಾಕ್ಷಿ ಸಂಬಂಧ ಅಲ್ಲ. ಈ ಸಂಬಂಧ ನಮ್ಮ ಬಳಿಯೂ ಪೆನ್ ಡ್ರೈವ್ ದಾಖಲೆ ಇದೆ ಎಂದು ಪ್ರತಿಪಾದಿಸಿದರು. ವಾದ ವಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ ತಿಂಗಳ 11ಕ್ಕೆ ಮುಂದೂಡಿತು.

ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್‌, ಆರೋಪಿಗಳ ಪರ ಸಂದೀಪ್‌ ಚೌಟ, ಶ್ಯಾಮಸುಂದರ್‌ ಮೊದಲಾದವರು ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದರು.

More articles

Latest article