ಬೆಂಗಳೂರು: ಸರ್ಕಾರಿ ಶಾಲೆಗಳು ಉಳಿದಲ್ಲಿ ಕನ್ನಡ ಉಳಿಯುತ್ತದೆ ಎಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವಿಗೆ ಪೂರಕವಾಗಿ ಸರ್ಕಾರವು ಕೆಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ , ಕನ್ನಡದ ಸಮಸ್ಯೆಯನ್ನು ಅಗಾಧವಾಗಿಸಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ 10,267 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಕ್ರಮ ವಹಿಸುತ್ತಿದ್ದು, ಕನ್ನಡದ ಹಿತದೃಷ್ಠಿಯಿಂದ ಇದು ಅಭೂತಪೂರ್ವ ಘೋಷಣೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ನಂತರ ಅವರು ಪ್ರತಿಕ್ರಿಯೆ ನೀಡಿದ್ದು, ಸರ್ಕಾರಿ ಶಾಲಾ ಮಕ್ಕಳ ಪೌಷ್ಠಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಆಹಾರ ಒದಗಿಸಲು 1500 ಕೋಟಿ ರೂ.ಗಳ ವೆಚ್ಚ ಮಾಡುತ್ತಿರುವುದು, ಸರ್ಕಾರಿ ಶಾಲೆಯ ಪೂರ್ವ ಪ್ರಾಥಮಿಕ ತರಗತಿಗಳನ್ನು ಹೆಚ್ಚುವರಿಯಾಗಿ 5 ಸಾವಿರ ಶಾಲೆಗಳಿಗೆ ವಿಸ್ತರಿಸುವುದು ಕೂಡ ಅಭಿನಂದನೀಯವಾದದ್ದಾಗಿದೆ. ಇದು ಸರ್ಕಾರಿ ಶಾಲೆಗಳ ಕನ್ನಡ ಮಕ್ಕಳನ್ನು ಕಲಿಕೆಗೆ ತೊಡಗಿಸುವ ಮೂಲಕ ಕನ್ನಡದ ಪರಿಸರವನ್ನು ಸೃಷ್ಠಿಸುವಲ್ಲಿ ತನ್ನದೆ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶಕ್ಕಾಗಿ 2500 ಕೋಟಿ ರೂ.ಗಳ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತಂತೆ ಘೋಷಿಸಿರುವುದು ಸಹ ಕನ್ನಡಿಗ ವಿದ್ಯಾರ್ಥಿಗಳು ಜಾಗತೀಕ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಅನುಕೂಲವಾಗಲಿದೆ. ಕಲಾವಿದರ ಮಾಸಾಶನದಲ್ಲಿ ಹೆಚ್ಚಳ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಕನ್ನಡದ ಬೆಳವಣಿಗೆಗೆ ತನ್ನದೇ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.
ಕನ್ನಡವನ್ನು ಎಲ್ಲ ಆಯಾಮಗಳಲ್ಲಿ ಸಬಲೀಕರಣಗೊಳಿಸಲು ಪುಸ್ತಕ ಪ್ರಕಟಣೆ, ಕನ್ನಡ ಕಲಿಕಾ ಕೇಂದ್ರಗಳ ಹೆಚ್ಚಳ, ಕನ್ನಡ ಸಂಸ್ಕೃತಿ ಶಿಬಿರಗಳ ಆಯೋಜನೆ, ಮೊದಲಾದ ಹಲವು ಯೋಜನೆಗಳನ್ನು ಸಿದ್ಧಪಡಿಸಿದ್ದೆ. ಹೊರನಾಡಿನಲ್ಲಿ ಕನ್ನಡ ಪೀಠಗಳು ಕ್ರಿಯಾಶೀಲವಾಗುವುದು ಅಗತ್ಯ.ಈ ಯೋಜನೆಗಳು ಸಾಕಾರಗೊಳ್ಳಲು ಒಂದು ಕಾರ್ಯಪಡೆಯೂ ಬೇಕು. ವಿವಿಧ ಉಪಸಮಿತಿಗಳು ಕನ್ನಡವನ್ನು ಕೇಂದ್ರವಾಗಿರಿಸಿಕೊಂಡು ಕೆಲಸ ಮಾಡಬೇಕು. ಪ್ರಾಧಿಕಾರದ ವ್ಯಾಪ್ತಿ ಇಡೀ ಕರ್ನಾಟಕವಾದ್ದರಿಂದ ಸಹಜವಾಗಿ ಒಂದಷ್ಟು ಹೆಚ್ಚು ಹಣ ಬೇಕು. ಆದರೆ ಕಾರಣಾಂತರಗಳಿಂದ ಸರ್ಕಾರ ಕೇವಲ ಎರಡು ಕೋಟಿ ರೂಪಾಯಿಗಳನ್ನು ಮಾತ್ರ ನೀಡಿದೆ. ಈಗ ಲಭಿಸಿದ ಅನುದಾನಕ್ಕೆ ಅನುಗುಣವಾಗಿ ಯೋಜನೆಗಳನ್ನು ಮರುರೂಪಿಸಿಕೊಳ್ಳಬೇಕಾಗಿದೆ. ಹೀಗೆ ಮಾಡಿದಾಗ ನಿರೀಕ್ಷಿತ ಫಲಿತಾಂಶ ದೊರೆಯುವುದು ಕಷ್ಟ. ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟದ್ದರಿಂದ ಹೀಗಾಗಿರಬಹುದು. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡಿದ್ದರೆ ಚೆನ್ನಾಗಿತ್ತು ಎಂದೂ ಅಭಿಪ್ರಾಯಪಟ್ಟಿದ್ದಾರೆ.