ಧರ್ಮಸ್ಥಳದ ಸೌಜನ್ಯ ಪ್ರಕರಣ: ಯೂ ಟ್ಯೂಬರ್ ಸಮೀರ್ ವಿರುದ್ಧ ಎಫ್‌ ಐಆರ್

Most read

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣ ಕುರಿತು ಯೂ ಟ್ಯೂಬ್ ಮಾಡಿದ್ದ ಸಮೀರ್‌ ಎಂಡಿ ಅವರ ವಿರುದ್ಧ ಬಳ್ಳಾರಿ ಕೌಲ್‌ ಬಜಾರ್‌ ಪೊಲೀಸ್‌ ಸ್ಟೇಷನ್‌ ನಲ್ಲಿ ಎಫ್‌ ಐಆರ್‌ ದಾಖಲಾಗಿದೆ. ಠಾಣೆಯ ಇನ್‌ ಸ್ಪೆಕ್ಟರ್ ಎಂ.ನಿಂಗಪ್ಪ ಅವರೇ ಸ್ವತಃ ದೂರು ನೀಡಿದ್ದಾರೆ. ಫೆ. 27ರಂದು ಸಮೀರ್‌ ಅವರು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಊರಿಗೆ ದೊಡ್ಡವರೇ ಕೊಲೆ ಮಾಡಿದವರಾ ಎಂಬ ಶೀರ್ಷಿಕೆಯಡಿಯಲ್ಲಿಸುಮಾರು ೪೦ ನಿಮಿಷಗಳ ವಿಡಿಯೋ ಅಪ್‌ ಲೋಡ್‌ ಮಾಡಿದ್ದಾರೆ. ಇದರಲ್ಲಿ ರಾಜ್ಯದ ವಿಶ್ವವಿಖ್ಯಾತ ಧಾರ್ಮಿಕ ಸ್ಥಳವಾದ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬದವರ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಲಾಗಿದೆ. ಸೌಜನ್ಯ ಪ್ರಕರಣ, ನಾರಾಯಣ ಮತ್ತು ಯಮುನಾ ಪ್ರಕರಣ, ವೇದವಲ್ಲಿ, ಬ್ಯಾಂಕ್ ಮ್ಯಾನೇಜರ್ , ಪದ್ಮಲತಾ ಮತ್ತು ರವಿ ಪೂಜಾರಿ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣಗಳಲ್ಲಿ ನೇರವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿರುತ್ತಾರೆಂದು ಆರೋಪಿಸಿರುವುದು ಕಂಡು ಬರುತ್ತದೆ. ಧರ್ಮಸ್ಥಳವು ವಿಶ್ವದಲ್ಲಿ ಪ್ರಸಿದ್ಧ ಧಾರ್ಮಿಕ ಸ್ಮಳವಾಗಿದ್ದು ಈ ಧಾರ್ಮಿಕ ಸ್ಥಳಕ್ಕೆ ಮತ್ತು ಅದರ ಧರ್ಮಾಧಿಕಾರಿಗಳ ಮೇಲೆ ಸಾರ್ವಜನಿಕರು ಭಾವನೆ ಹೊಂದಿರುತ್ತಾರೆ. ಈ ಯೂಟ್ಯೂಬ್ ಚಾನಲ್‌ ನಿಂದ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ಮೇಲೆ ಧಾರ್ಮಿಕ ಭಾವನೆ ಹೊಂದಿರುವ ಸಾರ್ವಜನಿಕರ ಧಾರ್ಮಿಕ ಭಾವನೆಗೆ ದಕ್ಕೆಯುಂಟು ಮಾಡುವಂತೆ ಇರುತ್ತದೆ, ಆದ್ದರಿಂದ ದೂರು ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ನಡುವೆ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅವರು ಆದೇಶವೊಂದನ್ನು ಹೊರಡಿಸಿ Social Media Monitoring Cell ಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಈ ಆದೇಶದ ಪ್ರತಿ ನಿನ್ನೆ ರಾತ್ರಿಯಿಂದಲೇ ಹರಿದಾಡುತ್ತಿದೆ. ಈ ಆದೇಶದಲ್ಲಿ “ಸಮೀರ್ ವೀಡಿಯೊದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್ ಅನ್ನು ಚುರುಕುಗೊಳಿಸಿ ಕ್ರಮ ಕೈಗೊಳ್ಳಬೇಕು” ಎಂದು ಹೇಳಿರುವುದು ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ.

“ಇತ್ತೀಚಿಗೆ ಸಮೀರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಹರಿಬಿಟ್ಟದ್ದು, ಘಟಕಾಧಿಕಾರಿಗಳು ಈ ವಿಷಯವನ್ನು ತಮ್ಮ ಘಟಕಗಳಲ್ಲಿರುವ Social Media Monitoring Cell ಮುಖೇನ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುತ್ತೀರಿ. ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ/ವಿರೋಧ ಅನಿಸಿಕೆಗಳು ಉದ್ಭವಿಸಿ ಸಾಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿರುತ್ತದೆ. ಆದ್ದರಿಂದ, Social Media Monitoring Cell ಚುರುಕುಗೊಳಿಸುವುದು ಹಾಗೂ ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಮಾನ್ಯ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ರವರಿಗೆ ಮಾಹಿತಿ ನೀಡುವುದು” ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಮೃತ ಸೌಜನ್ಯ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಆಕೆಯನ್ನು 2012ರ ಅಕ್ಟೋಬರ್ 10 ರಂದು ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಕಾಡಿನಲ್ಲಿ ಈ ಕೃತ್ಯ ನಡೆದಿತ್ತು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗಿ ಜನಾಕ್ರೋಶ ವ್ಯಕ್ತವಾಗಿತ್ತು.

ಘಟನೆ ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಮಾನಸಿಕ ಸ್ಥಿಮಿತ ಕಳೆದುಕೊಂಡು ಅತ್ಯಾಚಾರ ಎಸಗಿದ್ದ ಎನ್ನಲಾಗಿತ್ತು. ಆರೋಪಿಯು ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ, ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿ, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಹೇಳಿತ್ತು. ಹಾಗಾದರೆ, ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆಗೈದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

More articles

Latest article