ಮಂಗಳಸೂತ್ರ ಕಸಿದುಕೊಳ್ಳುವ ಹೇಳಿಕೆ: ಮೋದಿ ಸರ್ಕಾರದಲ್ಲಿ ನಿಜವಾಗಿದೆ; ಖರ್ಗೆ

Most read

ನವದೆಹಲಿ: ಮಹಿಳೆಯರ ಮಂಗಳಸೂತ್ರ ಕಸಿದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಇದೀಗ ಅವರ ಆಡಳಿತದಲ್ಲಿಯೇ ನಿಜವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ  ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ದೇಶದಲ್ಲಿ ತಮ್ಮ ಚಿನ್ನಾಭರಣ ಅಡವಿಡುವಂತೆ ಮೋದಿ ಸರ್ಕಾರ ಮಹಿಳೆಯರನ್ನು ಒತ್ತಾಯಿಸುತ್ತಿದೆ. ಏಕೆಂದರೆ ಮೊದಲು ನೋಟು ರದ್ದತಿಯನ್ನು ಜಾರಿಗೆ ತರುವ ಮೂಲಕ ಆರ್ಥಿಕ ತೊಂದರೆ ಉಂಟು ಮಾಡಿದ್ದರು, ಈಗ ಹಣದುಬ್ಬರದಿಂದ ತತ್ತರಿಸಿರುವ ಮಹಿಳೆಯರು ಆರ್ಥಿಕ ಸಂಕಷ್ಟಕ್ಕೆ ನಲುಗಿ ಆಭರಣಗಳನ್ನು ಅಡಮಾನವಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಧ್ಯಮ ವರ್ಗದವರ ಆರ್ಥಿಕತೆಯು ಹದಗೆಟ್ಟಿದ್ದರಿಂದ ಜನರು ತಮ್ಮ ಆಭರಣ ಅಡವಿಟ್ಟು ಸಾಲ ಪಡೆದುಕೊಳ್ಳುತ್ತಾರೆ. ದೇಶದಲ್ಲಿ ಹಬ್ಬದುಬ್ಬರ, ನಿರುದ್ಯೋಗ ಸಮಸ್ಯೆಯಿಂದಾಗಿ ಸಾಲದ ಮೊರೆ ಹೋಗುವಂತೆ ಸರ್ಕಾರವೇ ಒತ್ತಡ ಹೇರುತ್ತಿದೆ. ಈ ಮೂಲಕ ಮಹಿಳೆಯ ಮಂಗಳಸೂತ್ರವನ್ನು ಮೋದಿ ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಪ್ರಚಾರದ ಮೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ, ಮಂಗಳಸೂತ್ರವನ್ನೂ ಒಳಗೊಂಡಂತೆ ಜನರ ಚಿನ್ನವನ್ನು ಕಸಿದುಕೊಳ್ಳುತ್ತದೆ ಎಂದು ಮೋದಿ ಹೇಳಿಕೆ ನೀಡಿದ್ದರು. ಈ ಸಂಪತ್ತು ಮುಸ್ಲಿಮರಿಗೆ ಹೋಗುತ್ತದೆ ಎಂದಿದ್ದರು. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಖರ್ಗೆ, 2019 ಮತ್ತು 2024ರ ನಡುವೆ 4 ಕೋಟಿ ಮಹಿಳೆಯರು ತಮ್ಮ ಚಿನ್ನವನ್ನು ಅಡವಿಟ್ಟು ರೂ. 4.7 ಲಕ್ಷ ಕೋಟಿ ಸಾಲ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

More articles

Latest article