ಕೆಪಿಎಸ್ ಸಿ ಪ್ರೊಬೆಷನರಿ ಗೆಜೆಟೆಡ್ ಹುದ್ದೆಗಳ ಪರೀಕ್ಷಾ ಲೋಪ; ಸಿಎಂ ಪ್ರ.ಕಾ. ಎಲ್.ಕೆ. ಅತೀಕ್ ಅವರಿಗೆ ಕರವೇ ಪ್ರಶ್ನೆಗಳು

Most read

ಬೆಂಗಳೂರು: 384 ಪ್ರೊಬೆಷನರಿ ಗೆಜೆಟೆಡ್ ಅಧಿಕಾರಿಗಳ ಹುದ್ದೆಗೆ ಕಳೆದ ಡಿಸೆಂಬರ್ ನಲ್ಲಿ ನಡೆದ ಮರುಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸುವುದಕ್ಕೆ ಮುಖ್ಯಮಂತ್ರಿಗಳನ್ನು ದಾರಿತಪ್ಪಿಸುತ್ತಿದ್ದೀರಿ ಎಂಬ ಗಂಭೀರ ಆರೋಪ ನಿಮ್ಮ ಮೇಲಿದೆ. ಒಂದು ವೇಳೆ ಈ ಆರೋಪ ನಿರಧಾರ ಎನ್ನುವುದಾದರೆ ಮುಖ್ಯಮಂತ್ರಿಗಳ ಗಮನಕ್ಕೆ ಈಗಾಗಲೇ ಸಾರ್ವಜನಿಕವಾಗಿ ಬಹಿರಂಗಗೊಂಡಿರುವ ಪ್ರಶ್ನೆಪತ್ರಿಕೆಯ ಲೋಪವನ್ನು ನೀವು ಏಕೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರನ್ನು ಪ್ರಶ್ನಿಸಿದ್ದಾರೆ.

ಈ ಸಂಬಂಧ ಅವರು ಅತೀಕ್ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದು, ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವ ಮೂಲಕ ತಾವು ಪುಟಕ್ಕಿಟ್ಟ ಚಿನ್ನ ಎನ್ನುವುದನ್ನು ಸಾಬೀತುಪಡಿಸಬೇಕು ಎಂದೂ ಆಗ್ರಹಪಡಿಸಿದ್ದಾರೆ.
ಕೆಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡದ ಮಕ್ಕಳಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಆರಂಭದಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದೆ. ಈ ಅನ್ಯಾಯವನ್ನು ಸರಿಪಡಿಸುವ ಕಾರ್ಯವನ್ನು ಸರ್ಕಾರ ಇಷ್ಟು ಹೊತ್ತಿಗೆ ಮಾಡಬೇಕಿತ್ತು. ಆದರೆ ತಾವೇ ಇದಕ್ಕೆ ಅಡ್ಡಿಯಾಗಿದ್ದೀರಿ ಎಂಬುದು ವಿದ್ಯಾರ್ಥಿಗಳ ಅಭಿಮತವಾಗಿತ್ತು. ಕಳೆದ ಬಾರಿ ನಡೆದ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ ದೊಡ್ಡ ಪ್ರಮಾಣದ ತಪ್ಪುಗಳು ಕಾಣಿಸಿಕೊಂಡು, ಇಡೀ ಪರೀಕ್ಷೆಯೇ ರದ್ದಾಗಲು ಮುಖ್ಯ ಕಾರಣರಾದ ಪರೀಕ್ಷಾ ನಿಯಂತ್ರಕರನ್ನು ತಾವು ಬೆಂಬಲಿಸುತ್ತಿದ್ದೀರಿ. ಪರೀಕ್ಷಾ ನಿಯಂತ್ರಕರು ಅದೇ ಹುದ್ದೆಯಲ್ಲಿ ಮುಂದುವರೆಯಲು ಕೂಡ ತಾವೇ ಕಾರಣ ಎಂಬ ಅಭಿಪ್ರಾಯಗಳು ವಿದ್ಯಾರ್ಥಿಗಳಲ್ಲಿದೆ. ಅಷ್ಟೇ ಅಲ್ಲದೆ ಮರುಪರೀಕ್ಷೆಯಲ್ಲಿ ಆದ ತಪ್ಪುಗಳ ಬಗ್ಗೆ ತಾವು ಮಾನ್ಯ ಮುಖ್ಯಮಂತ್ರಿಗಳಿಗೆ ಸರಿಯಾದ ಮಾಹಿತಿ ನೀಡದೆ ಅವರನ್ನು ದಾರಿ ತಪ್ಪಿಸಿದ್ದೀರಿ ಎಂಬ ಆರೋಪಗಳೂ ನಿಮ್ಮ ವಿರುದ್ಧ ಕೇಳಿ ಬರುತ್ತಿವೆ. ಈ ಆರೋಪಗಳಿಂದ ಮುಕ್ತರಾಗಿ ಹೊರಬರಲು ಈ ಕೆಳಕಂಡ ಪ್ರಶ್ನೆಗಳಿಗೆ ತಾವು ಉತ್ತರಿಸುತ್ತೀರಿ ಎಂಬ ಅಖಂಡ ವಿಶ್ವಾಸದಿಂದ ಸಮಸ್ತ ಕನ್ನಡಿಗರ ಪರವಾಗಿ ಈ ಪ್ರಶ್ನೆಗಳನ್ನು ತಮಗೆ ಕೇಳಲು ಬಯಸುತ್ತೇನೆ.
ಕರವೇ ಪ್ರಶ್ನೆಗಳು:

  1. ಮರುಪರೀಕ್ಷೆಯ ಪ್ರಶ್ನೆಪತ್ರಿಕೆ- 1ರಲ್ಲಿ ಕನ್ನಡ ಮಾಧ್ಯಮದ ಪ್ರಶ್ನೆಪತ್ರಿಕೆಯಲ್ಲಿ ಮಾತ್ರ 45 ತಪ್ಪುಗಳಾಗಿವೆ. ಪ್ರಶ್ನೆ ಪತ್ರಿಕೆ -2ರಲ್ಲಿ ಒಟ್ಟು 35 ತಪ್ಪು ಸೇರಿ ಒಟ್ಟು 80 ತಪ್ಪುಗಳಾಗಿವೆ. ಈ ತಪ್ಪುಗಳ ವಿವರ ನಿಮ್ಮ ಬಳಿಯೂ ಇದೆ ಎಂದು ಭಾವಿಸುತ್ತೇನೆ. ಇಷ್ಟು ತಪ್ಪುಗಳಿದ್ದಾಗ ವಿದ್ಯಾರ್ಥಿಗಳು ಹೇಗೆ ಉತ್ತರ ಬರೆಯಲು ಸಾಧ್ಯ? ಈ ಎಲ್ಲ ತಪ್ಪುಗಳನ್ನು ನೀವು ಒಪ್ಪಿಕೊಳ್ಳುವಿರಾ? ಒಪ್ಪಿಕೊಳ್ಳದೇ ಹೋದರೆ ನೀವು ಸೂಚಿಸುವ ಕನ್ನಡದ ವಿದ್ವಾಂಸರ ಮುಂದೆ ಪ್ರಶ್ನೆ ಪತ್ರಿಕೆಗಳನ್ನು ಇಡೋಣ. ಸರಿಯೋ ತಪ್ಪೋ ಎಂಬುದನ್ನು ಅವರು ವಿಶ್ಲೇಷಣೆ ಮಾಡಲಿ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ?
  2. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರೂ ಕೂಡ ಕನ್ನಡಿಗರೇ. ಈಗ ಮತ್ತೆ ಮರುಪರೀಕ್ಷೆಯಾದರೆ ಅವರಿಗೆ ಅನ್ಯಾಯವಾಗುವುದಿಲ್ಲವೇ ಎಂದು ನಿನ್ನೆ ನೀವು ಹೇಳಿದ್ದೀರಿ. ಕೆಲವು ವಿಷಯಗಳನ್ನು ನಿಮಗೆ ಸ್ಪಷ್ಟಪಡಿಸಿಬಿಡುತ್ತೇನೆ.
    ಅ.) ನಾನಾಗಲೀ, ಈ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಾಗಲೀ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ವಿರೋಧವಾಗಿಲ್ಲ. ಒಂದು ವೇಳೆ ಅವರಿಗೆ ನೀಡಿದ ಪ್ರಶ್ನೆಪತ್ರಿಕೆಗಳಲ್ಲಿ ಹೀಗೆ 80 ತಪ್ಪುಗಳಾಗಿದ್ದರೆ ಅವರ ಪರವಾಗಿಯೂ ನಾನು ಹೋರಾಟ ಮಾಡುತ್ತಿದ್ದೆ. ಅವರಿಗೆ ನೀಡಿದ ಇಂಗ್ಲಿಷ್ ಪತ್ರಿಕೆಗಳಲ್ಲಿ ತಪ್ಪುಗಳು ಆಗಿಲ್ಲ.
    ಆ.) ಪೂರ್ವಭಾವಿ ಪರೀಕ್ಷೆಯಲ್ಲಿ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳ ಜೊತೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿದ್ದಾರೆ. ಹೀಗೆ ಉತ್ತೀರ್ಣರಾದವರಲ್ಲಿ ಹಲವರು ನಮ್ಮ ಹೋರಾಟದ ಜೊತೆ ಕೈಜೋಡಿಸಿದ್ದಾರೆ. ಅಷ್ಟೇಕೆ ಯಾರಿಗೇ ಆಗಲಿ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಕೆಲವು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳೂ ನಮ್ಮ ಜೊತೆ ಕೈಜೋಡಿಸಿದ್ದಾರೆ. ಹೀಗಾಗಿ ನೀವು ಹೇಳುವ ನ್ಯಾಯ-ಅನ್ಯಾಯದ ಪ್ರಶ್ನೆಗಳೇ ಅಸಂಗತವಾಗಿವೆ. ಒಬ್ಬ ವಿದ್ಯಾರ್ಥಿಗೆ ಅನ್ಯಾಯವಾದರೂ ಅದು ಸರಿಯಲ್ಲ. ಹೀಗಿರುವಾಗ 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ನೀವು ಯಾಕೆ ಇಷ್ಟು ಲಘುವಾಗಿ ಪರಿಗಣಿಸುತ್ತಿದ್ದೀರಿ?
  3. ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಾಗಿರಲಿ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಾಗಿರಲಿ ಅವರು ಆಡಳಿತ ಸೇವೆಗೆ ನೇಮಕಗೊಂಡ ನಂತರ ವ್ಯವಹರಿಸಬೇಕಿರುವುದು ಕನ್ನಡದಲ್ಲಿಯೇ. ಕನ್ನಡವೇ ಕರ್ನಾಟಕದ ಆಡಳಿತ ಭಾಷೆ. ಹೀಗಿರುವ ಕೆಪಿಎಸ್ ಸಿ ಏಕೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಕನ್ನಡಕ್ಕೆ ಕೆಟ್ಟದಾಗಿ ಅನುವಾದಿಸುತ್ತದೆ? ಕಳೆದ ಬಾರಿ ಪರೀಕ್ಷೆಯಲ್ಲಿ ಅನುವಾದದ ಸಮಸ್ಯೆ ಆದಾಗಲೇ ನಾವು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಇಂಗ್ಲಿಷ್ ಗೆ ಅನುವಾದಿಸಿ ಎಂದು ಒತ್ತಾಯಿಸಿದ್ದೆವು. ಆದರೆ ಎರಡನೇ ಬಾರಿ ಮರುಪರೀಕ್ಷೆಯಲ್ಲೂ ಇದೇ ತಪ್ಪು ಏಕೆ ಪುನರಾವರ್ತನೆಯಾಗಿದೆ? ಇದಕ್ಕೆ ಯಾರು ಹೊಣೆಗಾರರು? ಕನ್ನಡದ ಕುರಿತು ಯಾಕಿಷ್ಟು ಅವಜ್ಞೆ, ತಿರಸ್ಕಾರ? ಇದಕ್ಕೆ ನಿಮ್ಮ ಸಮರ್ಥನೆಯೇನು?
  4. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ದೋಷವಿದ್ದರೆ, ಇಂಗ್ಲಿಷ್ ಪತ್ರಿಕೆಯನ್ನು ನೋಡಿ ಉತ್ತರ ಬರೆಯಬೇಕಿತ್ತು ಎಂದು ಕೆಪಿಎಸ್ ಸಿ ಅಧಿಕಾರಿಗಳು ಹೇಳುತ್ತಾರೆ. ಇದು ಅನ್ಯಾಯ ಅಲ್ಲವೇ? ಅವರಿಗೆ ಇಂಗ್ಲಿಷ್ ಸುಲಭವಾಗಿದ್ದರೆ ಇಂಗ್ಲಿಷ್ ಮಾಧ್ಯಮದಲ್ಲೇ ಓದಿ,ಇಂಗ್ಲಿಷ್ ನಲ್ಲೇ ಬರೆಯುತ್ತಿದ್ದರು. ಕನ್ನಡ ಮಾಧ್ಯಮದಲ್ಲಿ ಅವರು ಏಕೆ ಓದುತ್ತಿದ್ದರು? ಹೀಗೆ ಹೇಳುವುದೇ ಒಂದು ಕ್ರೌರ್ಯವಲ್ಲವೇ? ಅಷ್ಟೇಕೆ ಹೀಗೆ ಸಮರ್ಥಿಸಿಕೊಳ್ಳುವುದಾದರೆ ಕನ್ನಡ ಪ್ರಶ್ನೆ ಪತ್ರಿಕೆಯ ಅಗತ್ಯವೇ ಇರಲಿಲ್ಲವಲ್ಲವೇ? ಇಂಗ್ಲಿಷ್ ಪ್ರಶ್ನೆ ಪತ್ರಿಕೆಯನ್ನೇ ಕೊಡಬಹುದಿತ್ತಲ್ಲವೇ? ಪ್ರಶ್ನೆಪತ್ರಿಕೆಯ ತುಂಬ 80 ದೋಷಗಳನ್ನು ತುಂಬಿ ಅವುಗಳನ್ನು ಇಂಗ್ಲಿಷ್ ನಲ್ಲಿ ಓದಿ ಅರ್ಥ ಮಾಡಿಕೊಂಡು ಬರೆಯಲು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಾಧ್ಯವೇ?
  5. ಮರುಪರೀಕ್ಷೆಯಲ್ಲಿ ಆಗಿರುವ ದೋಷಗಳಿಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ 5 ಕೃಪಾಂಕ (ಗ್ರೇಸ್ ಮಾರ್ಕ್ಸ್) ಕೊಟ್ಟಿರುವುದಾಗಿ ಕೆಪಿಎಸ್ ಸಿ ಹೇಳುತ್ತಿದೆ. ಎಂಭತ್ತು ಪ್ರಶ್ನೆಗಳಲ್ಲಿ ದೋಷಗಳನ್ನು ಮುಚ್ಚಿಕೊಳ್ಳಲು 5 ಹೆಚ್ಚುವರಿ ಅಂಕ! ಇದು ಹೇಗೆ ಸಾಧ್ಯ? 80 ದೋಷಗಳಿರುವ ಪ್ರಶ್ನೆಗಳ ಪೈಕಿ 50ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಉತ್ತರಿಸಲು ಸಾಧ್ಯವೇ ಇಲ್ಲದ ಗಂಭೀರ ಸ್ವರೂಪದ ತಪ್ಪುಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರಶ್ನೆಗಳೇ ಅರ್ಥವಾಗದೇ ಹಾಗೇ ಬಿಟ್ಟಿದ್ದಾರೆ. ಇದಕ್ಕೆ 5 ಅಂಕ ಕೊಟ್ಟರೆ ಆಗಿರುವ ಪ್ರಮಾದ ಸರಿ ಹೋಗುತ್ತದೆಯೇ? 6. ಈ ಅವಘಡಗಳನ್ನು ಗಮನಿಸಿದರೆ ಕೆಪಿಎಸ್ ಸಿ ಅಧಿಕಾರಿಗಳಿಗೆ ಕನ್ನಡ, ಕನ್ನಡಿಗ ಮತ್ತು ಕನ್ನಡತನ ಕುರಿತು ಗಂಭೀರವಾದ ಉಪೇಕ್ಷೆ, ತಿರಸ್ಕಾರ, ದ್ವೇಷ ಇರುವಂತೆ ಕಂಡು ಬರುತ್ತಿದೆ. ಮೊದಲು ನಡೆದ ಪರೀಕ್ಷೆಯಲ್ಲಿ ಇದೇ ರೀತಿಯ ದೋಷಗಳಾದ ಮೇಲೂ ಮರುಪರೀಕ್ಷೆಯಲ್ಲೂ ಅದಕ್ಕಿಂತ ಹೆಚ್ಚಿನ ದೋಷಗಳು ಕಾಣಿಸಿಕೊಂಡಿರುವುದು ಆಕಸ್ಮಿಕ ಎಂದರೆ ನಂಬಲು ಸಾಧ್ಯವೇ? ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವುದು ಕೆಪಿಎಸ್ ಸಿಗೆ ಬೇಡವಾಗಿದೆ ಎಂದು ಭಾವಿಸಬಹುದಲ್ಲವೇ? ಈ ಕನ್ನಡದ್ರೋಹಿಗಳು ಯಾರು? ಯಾವ ಉದ್ದೇಶಕ್ಕೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲೆ ಹೀಗೆ ಅಮಾನುಷವಾಗಿ ಬರೆ ಎಳೆಯಲಾಗುತ್ತಿದೆ. ಕೆಪಿಎಸ್ ಸಿ ಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರಕ್ಕೂ ಇದಕ್ಕೂ ಏನು ಸಂಬಂಧ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
  6. ಈ ಬಾರಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.5 ರಷ್ಟು ಏರಿಕೆಯಾಗಿದೆ ಎಂದು ನೀವು ಮತ್ತು ಕೆಪಿಎಸ್ ಸಿ ಹೇಳುತ್ತಿದೆ. ಇದು ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ತಪ್ಪುಗಳಿಗೆ ಹೇಗೆ ಸಮರ್ಥನೆಯಾಗಲು ಸಾಧ್ಯ? ಬಹುಶಃ ಆ ಎಂಭತ್ತು ತಪ್ಪುಗಳು ಇಲ್ಲದೇ ಇದ್ದಿದ್ದರೆ ಶೇ. 20ರಷ್ಟೋ ಶೇ. 30ರಷ್ಟೋ ಏರಿಕೆ ಆಗಬಹುದಿತ್ತಲ್ಲವೇ? ಕಳೆದ ಬಾರಿ 2017-18ರ ಅಧಿಸೂಚನೆಯಲ್ಲಿ ಕೇವಲ 106 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಈ ಬಾರಿ ನಡೆದಿರುವುದು 384 ಹುದ್ದೆಗಳಿಗೆ ಪರೀಕ್ಷೆಗಳು. ಸಹಜವಾಗಿಯೇ ಪೂರ್ವಭಾವಿ ಪರೀಕ್ಷೆ ಉತ್ತೀರ್ಣರಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆಯೂ ಅಲ್ಪಪ್ರಮಾಣದಲ್ಲಿ ಹೆಚ್ಚಿರಬಹುದು. ಇದು ಪರೀಕ್ಷಾ ಪತ್ರಿಕೆಯಲ್ಲಿ ಎಸಗಿದ ಪ್ರಮಾದಕ್ಕೆ ಹೇಗೆ ಸಮರ್ಥನೆಯಾಗುತ್ತದೆ? ಅಷ್ಟಕ್ಕೂ ಮುಖ್ಯಪರೀಕ್ಷೆಗೆ ಅಭ್ಯರ್ಥಿಗಳು ವಿವರಗಳ ಅರ್ಜಿ ನಮೂನೆ (ಡಾಫ್) ಸಲ್ಲಿಸುವ ಮುನ್ನವೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಕೆಪಿಎಸ್ ಸಿ ಅಧಿಕಾರಿಗಳಿಗೆ ಹೇಗೆ ಗೊತ್ತಾಯಿತು? ಯಾವ ಬ್ರಹ್ಮಜ್ಞಾನವನ್ನು ಪಡೆದು ಅವರು ಪತ್ರಿಕಾ ಹೇಳಿಕೆ ನೀಡಿದ್ದರು?
  7. ಮರುಪರೀಕ್ಷೆಯನ್ನು ರದ್ದುಪಡಿಸಿ, ಮರು ಅಧಿಸೂಚನೆ ಹೊರಡಿಸಿದರೆ ಕೆಪಿಎಸ್ ಸಿಗೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಆಗಿರುವ ಪ್ರಮಾದವನ್ನು ಸರಿಪಡಿಸಲು ಸರ್ಕಾರ ಮುಂದಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮತ್ತೆ ಮರು ಅಧಿಸೂಚನೆ ಹೊರಡಿಸದೇ ಹೋದಲ್ಲಿ ಸರ್ಕಾರ ದೊಡ್ಡ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ ಎಂಬುದನ್ನು ವಿನಮ್ರವಾಗಿ ನೆನಪಿಸಲು ಬಯಸುತ್ತೇವೆ. . 70 ಸಾವಿರಕ್ಕೂ ಹೆಚ್ಚು ಕನ್ನಡದ ಮಕ್ಕಳಿಗೆ ಈ ಸರ್ಕಾರ ದ್ರೋಹವೆಸಗಿತು ಎಂಬ ಅಪವಾದವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಮುಖ್ಯಮಂತ್ರಿಗಳಿಗೆ ಈ ಕುರಿತು ಸರಿಯಾದ ಮಾಹಿತಿ ಒದಗಿಸುವುದು ನಿಮ್ಮ ಕರ್ತವ್ಯವಾಗಿತ್ತಲ್ಲವೇ? ನೀವು ಏಕೆ ಕೆಪಿಎಸ್ ಸಿಯನ್ನು ಸಮರ್ಥಿಸಿಕೊಂಡು ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ಮುಚ್ಚಿಡುತ್ತಿದ್ದೀರಿ?
  8. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅಪಾರವಾದ ಅನುಭವ ನಿಮಗಿದೆ. ಹೀಗಿರುವಾಗ ಸರಿಯನ್ನು ಸರಿ, ತಪ್ಪನ್ನು ತಪ್ಪು ಎಂದು ಹೇಳಲಾಗದ ಅನಿವಾರ್ಯತೆ ನಿಮಗೇನು? ಪದೇ ಪದೇ ಪ್ರಮಾದಗಳನ್ನು ಎಸಗುತ್ತಿರುವ ಪರೀಕ್ಷಾ ನಿಯಂತ್ರಕರನ್ನು ನೀವು ರಕ್ಷಿಸುತ್ತಿದ್ದೀರಿ ಎಂಬ ಮಾತುಗಳಿವೆ. ಇದು ನಿಜವೇ? ನಿಜವೇ ಆಗಿದ್ದರೆ ಒಬ್ಬ ಕನ್ನಡ ದ್ವೇಷಿಯ ರಕ್ಷಣೆಗೆ ಯಾಕೆ ನಿಂತಿದ್ದೀರಿ? ನಿಮ್ಮ ಉದ್ದೇಶವೇನು?
    ಇಷ್ಟಾದರೂ ನಾನು ಇದ್ಯಾವುದನ್ನೂ ನಂಬಿರಲಿಲ್ಲ. ಆದರೆ ಈ ನಡುವೆ ನನಗೂ ಕೂಡ ಈ ಆರೋಪಗಳಲ್ಲಿ ಹುರುಳಿರಬಹುದು ಎಂದು ಅನ್ನಿಸುತ್ತಿದೆ. ಮರುಪರೀಕ್ಷೆಯಲ್ಲಿ ಆದ ಅವಾಂತರದ ಕುರಿತು ತಿಪ್ಪೆ ಸಾರಿಸುವ ಧಾಟಿಯಲ್ಲಿ ತಾವು ತಮ್ಮ ಎಕ್ಸ್ ಖಾತೆಯಲ್ಲಿ ಬರೆದ ಪೋಸ್ಟ್ ಕೂಡ ಇದಕ್ಕೆ ಇಂಬು ನೀಡುತ್ತಿದೆ.
    ತಾವು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು, ಮಾನ್ಯ ಮುಖ್ಯಮಂತ್ರಿಗಳ ಅತ್ಯಂತ ನಂಬುಗೆಯ ಅಧಿಕಾರಿಗಳಲ್ಲಿ ಒಬ್ಬರು. ಈ ಕಾರಣದಿಂದಲೇ ತಮ್ಮನ್ನು ನಿವೃತ್ತರಾದರೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯನ್ನಾಗಿ ಮುಂದುವರೆಸಲಾಗಿದೆ ಎಂದೂ ತಿಳಿದಿದೆ. ಸರ್ಕಾರಿ ಸೇವೆಯ ಕೊನೆಯ ಹಂತದಲ್ಲಿ ತಾವು ಈ ಕಳಂಕ ಹೊತ್ತುಕೊಂಡು ನಿವೃತ್ತರಾಗಬೇಕೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಿಮ್ಮಿಂದ ಪ್ರಾಮಾಣಿಕ ಉತ್ತರವನ್ನು ನಿರೀಕ್ಷಿಸುತ್ತೇನೆ. ಒಂದು ವೇಳೆ ಮುಖತಃ ಚರ್ಚೆಗೆ ತಾವು ಒಪ್ಪುವುದಾದರೆ ಪರೀಕ್ಷೆ ಬರೆದ ಒಂದಿಬ್ಬರು ವಿದ್ಯಾರ್ಥಿಗಳೊಂದಿಗೆ ನೇರವಾಗಿ ನಿಮ್ಮನ್ನು ಭೇಟಿ ಮಾಡಲೂ ಸಿದ್ಧವಾಗಿದ್ದೇನೆ. ಸ್ಥಳ ಮತ್ತು ಸಮಯವನ್ನು ಗೊತ್ತುಪಡಿಸುವ ಅಧಿಕಾರ ನಿಮಗೇ ಇರಲಿ, ನೀವೇ ಗೊತ್ತು ಮಾಡಿ. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸದೇ ಇರಬೇಡಿ. ನೀವು ನನ್ನ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾಗಿ ಉತ್ತರಿಸಿದರೆ ನಾವೀಗ ನಡೆಸುತ್ತಿರುವ ಹೋರಾಟವನ್ನೇ ಕೈಬಿಡುತ್ತೇವೆ. ಇಲ್ಲವಾದಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ವಿನಮ್ರವಾಗಿ ತಿಳಿಸಲು ಬಯಸುತ್ತೇನೆ ಎಂದು ನಾರಾಯಣಗೌಡ ಅವರು ಸುದೀರ್ಘ ಪತ್ರ ಬರೆದಿದ್ದಾರೆ.

More articles

Latest article