ಬೆಂಗಳೂರು: ಚರ್ಮ ರೋಗ ವೈದ್ಯರ ಸಂಘ, ಐಎಡಿವಿಎಲ್ ಕರ್ನಾಟಕ ಸಂಘ, ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್, ವೆನರಿಯಾಲಜಿಸ್ಟ್ ಮತ್ತು ಬಿ ಡಿ ಎಸ್ ಸಂಸ್ಥೆಗಳಿಂದ ಚರ್ಮದ ಆರೈಕೆಗಾಗಿ ಜನ ಜಾಗೃತಿ ಮತ್ತು ನಕಲಿ ವೈದ್ಯರ ಬಗ್ಗೆ ಎಚ್ಚರಿಕೆ ವಹಿಸುವಂತೆ ಅರಿವು ಮೂಡಿಸಲು 10, 5 ಮತ್ತು 3 ಕಿಲೋಮೀಟರ್ ಗಳ ಬೃಹತ್ “ಸ್ಕಿನ್ನಥಾನ್” ಓಟ ಆಯೋಜಿಸಲಾಗಿತ್ತು.
ನಗರದ ಎಚ್.ಎಸ್.ಅರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ ಮುಂಜಾನೆ 6 ರಿಂದ 9 ಗಂಟೆವರೆಗೆ ನಡೆಯಿತು. ನಕಲಿ ವೈದ್ಯರ ಬಗ್ಗೆ ಎಚ್ಚರಿಕೆ, ಅತಿಯಾದ ಸ್ಟಿರಾಯ್ಡ್ ಬಳಕೆ, ಸ್ವಯಂ ಔಷಧೋಪಚಾರಗಳು, ಚರ್ಮದ ಆರೈಕೆಗಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ, ಸಾಮಾನ್ಯ ಚರ್ಮ ರೋಗಕ್ಕೆ ಉತ್ತಮ ಚಿಕಿತ್ಸಾ ವಿಧಾನಗಳ ಕುರಿತು ಭಿತ್ತಿಪತ್ರ ಹಿಡಿದು ಜನ ಸಾಮಾನ್ಯರಿಗೆ ಮಾಹಿತಿ ನೀಡಿದರು.
ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್, ವೆನರಿಯಾಲಜಿಸ್ಟ್ ಅಧ್ಯಕ್ಷ ಡಾ. ಮಂಜುನಾಥ್ ಹುಲ್ಮನಿ, ಗೌರವ ಕಾರ್ಯದರ್ಶಿ ಡಾ. ಸಿ. ಮಹೇಶ್ ಕುಮಾರ್ ಮತ್ತು ಬೆಂಗಳೂರು ಚರ್ಮ ರೋಗ ವೈದ್ಯರ ಸಂಘದ ಅಧ್ಯಕ್ಷ ಡಾ. ಎಸ್. ಸಚ್ಚಿದಾನಂದ್ ಮಾತನಾಡಿ, ವೃತ್ತಿಪರ ಚರ್ಮರೋಗ ಶಾಸ್ತ್ರದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಚರ್ಮ ರೋಗಗಳ ಬಗ್ಗೆ ಇರುವು ತಪ್ಪು ಕಲ್ಪನೆ ತೊಡೆದುಹಾಕುವ ಗುರಿ ಹೊಂದಲಾಗಿದೆ. ಸ್ಕಿನ್ನಥಾನ್ ಓಟದಲ್ಲಿ 6000ಕ್ಕೂ ಹೆಚ್ಚು ವೈದ್ಯರು, ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಉತ್ಸಾಹಿಗಳು ಓಟದಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಈ ವೇಳೆ ಚರ್ಮರೋಗಗಳ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಖ್ಯಾತ ಚರ್ಮರೋಗ ತಜ್ಞರಾದ ಡಾ. ರಘುನಾಥ್ ರೆಡ್ಡಿ, ಡಾ, ವೆಂಕಟರಾಮ್ ಮೈಸೂರ್, ಡಾ. ಶಶಿಕುಮಾರ್, ಡಾ. ಮಹೇಶ್, ಡಾ. ಸವಿತ, ಡಾ ಸಹನ, ಡಾ. ಬಿ.ಎಸ್ ಚಂದ್ರಶೇಖರ್, ಬೆಂಗಳೂರು ಚರ್ಮ ರೋಗ ವೈದ್ಯರ ಸಂಘದ ಗೌರವ ಕಾರ್ಯದರ್ಶಿ ಡಾ. ಸುಜಲ ಎಸ್ ಆರಾಧ್ಯ, ಸ್ಕಿನ್ನಥಾನ್ ಮುಖ್ಯ, ಸಮನ್ವಯಕಾರರಾದ ಡಾ. ಪಿ. ಜಗದೀಶ್ ಮತ್ತು ಡಾ. ಎಂ. ಎಸ್. ಗಿರೀಶ್ ಉಪಸ್ಥಿತರಿದ್ದರು.