ಠಾಣೆ: 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಹಾಗೂ ಆ ಬಾಲಕಿಯ ಗರ್ಭಪಾತಕ್ಕೆ ಸಹಕರಿಸಿದ ವೈದ್ಯರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಸ ನಗರದಲ್ಲಿ ವಾಸಿಸುತ್ತಿದ್ದ 29 ವರ್ಷದ ವ್ಯಕ್ತಿಯೊಬ್ಬ, ಕಳೆದ ವರ್ಷ ಜುಲೈ ತಿಂಗಳಲ್ಲಿ ನೆರೆಮನೆಯ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು, ಅತ್ಯಾಚಾರ ಎಸಗಿದ್ದ. ಈ ವೇಳೆ ಆತನ ಪತ್ನಿ, ತಾಯಿ, ಮಕ್ಕಳು ಕೆಲಸದ ನಿಮಿತ್ತ ಪರ ಊರಿಗೆ ತೆರಳಿದ್ದರು. ನಂತರವೂ ಹಲವು ಬಾರಿ ಇದೇ ರೀತಿ ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆ.
ಕೆಲವು ತಿಂಗಳ ನಂತರ ಬಾಲಕಿಯು ತಾನು ಗರ್ಭಿಣಿಯಾಗಿರುವುದನ್ನು ಆರೋಪಿಯ ಗಮನಕ್ಕೆ ತಂದಿದ್ದಳು. ಆಗ ಖಾಸಗಿ ವೈದ್ಯರಿಂದ ಗರ್ಭಪಾತದ ಮಾತ್ರೆ ಖರೀದಿಸಿ ಬಾಲಕಿಗೆ ನೀಡಿದ್ದ. ಆದರೆ, ಗರ್ಭಪಾತ ಆಗಲಿಲ್ಲ. ಬಾಲಕಿಯ ಹೆತ್ತವರು ಊರಿಗೆ ತೆರಳಿದ ವೇಳೆ ಆರೋಪಿಯ ಪತ್ನಿ, ತಾಯಿ ಹಾಗೂ ಅತ್ತೆ ಸೇರಿಕೊಂಡು ಆಕೆಯನ್ನು ಕಲ್ಯಾಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸುಳ್ಳು ಮಾಹಿತಿ ನೀಡಿ, ಗರ್ಭಪಾತ ಮಾಡಿಸಿದ್ದರು. ನಂತರ ಭ್ರೂಣವನ್ನು ಉಲ್ಲಾಸನಗರ ಸ್ಮಶಾನದಲ್ಲಿ ಹೂತಿದ್ದರು ಎಂದು ಉಲ್ಲಾಸನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಶಂಕರ್ ಅವತಾಡೆ ತಿಳಿಸಿದ್ದಾರೆ.
ಫೆ.23ರಂದು ಗ್ರಾಮದಿಂದ ಹೆತ್ತವರು ಮರಳಿದ ಬಳಿಕ ಬಾಲಕಿಯು ನಡೆದ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣವೇ ಅವರು ಸ್ಥಳೀಯ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು, ಫೆ.25 ರಂದು ಆರೋಪಿ ಹಾಗೂ ಗರ್ಭಪಾತದ ಮಾತ್ರೆ ನೀಡಿದ ವೈದ್ಯನನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್ಎಸ್ನ ಅಡಿಯಲ್ಲಿ ಅತ್ಯಾಚಾರ, ಬಲವಂತದ ಗರ್ಭಪಾತ, ಸಾಕ್ಷ, ಮರೆಮಾಚಿರುವುದು ಹಾಗೂ ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.