ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬೆಂಗಳೂರಿಗೆ ಅನುದಾನ ಕೊಟ್ಟಿರುವ ಹೇಳಿಕೆ ಶುದ್ದ ಸುಳ್ಳು. ಬಿಜೆಪಿ ಯಾವುದೇ ಅನುದಾನ ನೀಡಿಲ್ಲ. ಎಚ್. ಡಿ. ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ ಬೆಂಗಳೂರು ಅಭಿವೃದ್ಧಿಗೆ ರೂ. 7 ಸಾವಿರ ಕೋಟಿ ಹಂಚಿಕೆ ಆಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ರೂ. 1,600 ಕೋಟಿ ಮಾತ್ರ ನೀಡಲಾಗಿತ್ತು. ಬಿಜೆಪಿ ಶಾಸಕರಿದ್ದ ಕ್ಷೇತ್ರಗಳಿಗೆ ರೂ. 5 ಸಾವಿರ ಕೋಟಿ ಅನುದಾನ ಹಂಚಿಕೆಯಾಗಿತ್ತು ಎಂದು ಅಂಕಿಅಂಶಗಳ ಸಹಿತ ಟೀಕಿಸಿದರು.
ಬಿಜೆಪಿ ಶಾಸಕರಾದ ಎಸ್. ಟಿ. ಸೋಮಶೇಖರ್, ಮುನಿರತ್ನ ಹಾಗು ಭೈರತಿ ಬಸವರಾಜು ಅವರ ಕ್ಷೇತ್ರಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಅತಿಹೆಚ್ಚು ಅನುದಾನ ನೀಡಿತ್ತು ಎಂದು ಅವರು ಅಂಕಿ ಅಂಶಗಳನ್ನು ನೀಡಿದರು.
ಬಿಜೆಪಿ ಅಧಿಕಾರದ ಕಾಲದಲ್ಲಿ ಬೆಂಗಳೂರಿಗೆ ಏನೂ ಕೊಡುಗೆ ನೀಡಿಲ್ಲ. ಬಿಜೆಪಿಯವರು ರೂ. 6 ಸಾವಿರ ಕೋಟಿ ಬೆಂಗಳೂರಿನಲ್ಲಿ ಬಿಲ್ ಬಾಕಿ ಇಟ್ಟುಹೋಗಿದ್ದರು ಎಂದೂ ಆರೋಪಿಸಿದರು. ಬಿಬಿಎಂಪಿ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಗ್ರೇಟರ್ ಬೆಂಗಳೂರು ಮಸೂದೆ ವಿಧಾನಮಂಡಲದಲ್ಲಿ ಅನುಮೋದನೆ ಆಗಲಿದೆ. ಅದರ ಪ್ರಕಾರ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದರು.