ಬೆಂಗಳೂರು: ನಿನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡ ಮಾಜಿ ಮುಖ್ಯಮಂತ್ರಿ ಹಿರಿಯ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೋಕ್ಸೊ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಮಾರ್ಚ್ 15 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಇಂದು ಸಮನ್ಸ್ ಜಾರಿಗೊಳಿಸಿದೆ. ಹಾಗೆಯೇ ಯಡಿಯೂರಪ್ಪ ಪುತ್ರಿ ವೈ.ಎಂ. ಅರುಣಾ ಮತ್ತು ಅವರ ಆಪ್ತ ಎಂ. ರುದ್ರೇಶ್ ಅವರಿಗೂ ಅಂದೇ ಹಾಜರಾಗುವಂತೆ ಸಮನ್ಸ್ ನೀಡಿದೆ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ನಂತರ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದೆ.
ಫೆಬ್ರವರಿ 7ರಂದು ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಆದರೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಬಂಧನದ ಕುಣಿಕೆಯಿಂದ ಪಾರು ಮಾಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಪ್ರಕರಣವನ್ನು ಮತ್ತೆ ಪೋಕ್ಸೊ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು ಮತ್ತು ಇವರ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್ ಶೀಟ್ ರದುಪಡಿಸಲು ನಿರಾಕರಿಸಿತ್ತು. ಹೀಗಾಗಿ ಯಡಿಯೂರಪ್ಪ ಬಂಧನದಿಂದ ಪಾರಾದರೂ ವಿಚಾರಣೆ ಎದುರಿಸಲೇಬೇಕಾಗಿದೆ. ಇದೀಗ ಬೆಂಗಳೂರಿನ ತ್ವರಿತಗತಿ ನ್ಯಾಯಾಲಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ಹೈಕೋರ್ಟ್ ನಲ್ಲೂ ಹಿನ್ನೆಡೆ ಅನುಭವಿಸಿರುವ ಯಡಿಯೂರಪ್ಪ ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ.
ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ನ್ಯಾಯಕ್ಕಾಗಿ
ಸಹಾಯ ಮಾಡುವಂತೆ ಕೋರಿ ಯಡಿಯೂರಪ್ಪ ಅವರ ಬಳಿ ಹೋಗಿದ್ದಾಗಿ ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಮನೆಗೆ ತೆರಳಿ ಸಹಾಯ ಕೇಳಿದಾಗ ಅವರು ನನ್ನ ಪುತ್ರಿಯನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ನನ್ನ ಪುತ್ರಿಯ
ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಒಂದಿಷ್ಟು ಹಣ ನೀಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು.
ನಂತರ ಸದಾಶಿವ ನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು