ನವದೆಹಲಿ: ಬೆಂಗಳೂರಿನ ಅರಮನೆ ಮೈದಾನದ ಜಮೀನಿಗೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. 3,400 ಕೋಟಿ ಮೌಲ್ಯದ ಟಿಡಿಆರ್ ಅನ್ನು ರಾಜವಂಶಸ್ಥರಿಗೆ ನೀಡುವ ಬದಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರಲ್ಲಿ ಜಮೆ ಮಾಡುವಂತೆ ಸೂಚನೆ ನೀಡಿದೆ.
ನ್ಯಾ. ಅರವಿಂದ್ ಕುಮಾರ್, ನ್ಯಾ. ಸುಂದರೇಶ್ ನೇತೃತ್ವದ ಪೀಠ ಇ ಪ್ರಕರಣದ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ಕಪಿಲ್ ಸಿಬಲ್ 3400 ಕೋಟಿ ರೂ. ಟಿಡಿಆರ್ ನೀಡಲು ಸಾಧ್ಯವಿಲ್ಲ. ಇದು ಸರ್ಕಾರಕ್ಕೆ ಹೊರೆಯಾಗಲಿದೆ. ಸಾರ್ವಜನಿಕ ಹಿತಾಸಕ್ತಿ ಕಾರಣದಿಂದ ಜನರ ತೆರಿಗೆ ಹಣ ಹೀಗೆ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದರು.
15 ಎಕರೆಯಷ್ಟು ಜಮೀನಿಗೆ ಈ ಪ್ರಮಾಣದ ಹಣ ನೀಡಿದರೆ 460 ಎಕರೆ ಭೂಮಿಗೆ ಅಪಾರ ಪ್ರಮಾಣದ ಹಣ ನೀಡಬೇಕಾಗುತ್ತದೆ. ರಾಜ್ಯ ಸರ್ಕಾರ 1,270 ಚದರ ಮೀಟರ್ ಭೂಮಿಯನ್ನು ಅಂಡರ್ ಪಾಸ್‌ಗೆ ಬಳಕೆ ಮಾಡಿದ್ದು, ಇದಕ್ಕಾಗಿ 49 ಕೋಟಿ ರೂ. ಟಿಡಿಆರ್ ನೀಡಬಹುದು. ಆದರೆ ಅರಮನೆಯ ಭೂಮಿಯನ್ನು ನಾವು ಬಳಕೆಯೇ ಮಾಡಿಲ್ಲ. ಹೀಗಾಗಿ ಟಿಡಿಆರ್ ನೀಡುವ ಪ್ರಮೇಯ ಬರುವುದಿಲ್ಲ ಎಂದು ವಾದಿಸಿದರು.
ಇದರ ಜೊತೆಗೆ 1996 ರಲ್ಲಿ ಆದ ಭೂ ಸ್ವಾಧೀನದ ಆಧಾರದ ಮೇಲೆ ಭೂಮಿಯ ದರ ನಿಗದಿಯಾಗಬೇಕು. ಆದರೆ ಈಗ 2024 ರ ಆಧಾರದ ಮೇಲೆ ಟಿಡಿಆರ್ ಕೇಳಲಾಗುತ್ತಿದೆ. ಬಳಕೆಯಾಗದ ಭೂಮಿಗೆ ಸರ್ಕಾರ ಜನರ ತೆರಿಗೆಯನ್ನು ಏಕೆ ನೀಡಬೇಕು ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾ. ಸುಂದರೇಶ್, ನೀವೂ ಭೂಮಿಯನ್ನು ಬಳಕೆ ಮಾಡಿಲ್ಲ. ಆದರೆ ಬಿಟ್ಟುಕೊಡುತ್ತಿಲ್ಲ ಎಂದು ಅರ್ಜಿದಾರರು ವಾದಿಸುತ್ತಿದ್ದಾರಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಿಬಲ್, ಈಗಾಗಲೇ ಅಫಿಡವಿಟ್ ನಲ್ಲಿ ನಾವು ಭೂಮಿಯನ್ನು ಬಳಕೆ ಮಾಡಿಲ್ಲ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಸಲ್ಲಿಸಿದ್ದೇವೆ. ಈ ಪ್ರಮಾಣದ ಟಿಡಿಆರ್ ನೀಡಿದರೆ ಯೋಜನಾ ವೆಚ್ಚ ಹೆಚ್ಚಾಗಲಿದೆ. ಇಷ್ಟು ದೊಡ್ಡ ಪ್ರಮಾಣದ ಯೋಜನೆ ಸರ್ಕಾರಕ್ಕೆ ಹೊರೆಯಾಗಲಿದೆ. ಭೂಮಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಇತರೇ ಅರ್ಜಿಗಳು ವಿಚಾರಣೆ ಹಂತದಲ್ಲಿವೆ. ಈ ನಡುವೆ ನಾವು ಭೂಮಿ ಬಳಕೆ ಮಾಡಿಲ್ಲ ಹೀಗಾಗಿ ಈ ಭೂಮಿ ಅವರದೇ ಎಂದು ಉತ್ತರಿಸಿದರು.
ವಾದ ಮತ್ತು ಪ್ರತಿವಾದ ಆಲಿಸಿದ ಪೀಠ, ಎರಡು ಟಿಡಿಆರ್‌ಗಳನ್ನು ನ್ಯಾಯಾಲಯದ ನೋಂದಣಿಯೊಂದಿಗೆ ಹತ್ತು ದಿನಗಳ ಒಳಗೆ ಕೋರ್ಟ್ ಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು. ಮಾರ್ಚ್ 20 ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.
ಈ ವೇಳೆ ಮಧ್ಯಪ್ರವೇಶ ಮಾಡಿದ ಕಪಿಲ್ ಸಿಬಲ್, ನಾವು ನ್ಯಾಯಾಲಯಕ್ಕೆ ಟಿಡಿಆರ್ ನೀಡುತ್ತೇವೆ. ಅದನ್ನು ಬಳಕೆ ಮಾಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಬೇಕು ಎಂದರು. ಇದಕ್ಕೆ ಉತ್ತರಿದ ಪೀಠ ಈ ರೀತಿಯ ಒತ್ತಡ ನೀವು ಹಾಕುವಂತಿಲ್ಲ ಎಂದು ಉತ್ತರಿಸಿತು.