ಸಾಮಾನ್ಯವಾಗಿ ಈ ರೀತಿಯ ಮರೆವು ಬಹಳ ಜನರಿಗೆ ಕಾಡುತ್ತದೆ
ಮನೆಯಿಂದ ಹೊರಟ ಮೇಲೆ ನಾನು ಗ್ಯಾಸ್ ಆಫ್ ಮಾಡಿದೆನಾ? ಇಲ್ಲ ಮನೆ ಬೀಗ ಹಾಕಿರುವೆನಾ?
ಬೀಗ ಹಾಕುವಾಗ ಕೀ ಎಲ್ಲಿಟ್ಟೆ?, ನನ್ನ ಗೋಲ್ಡ್ ರಿಂಗ್ ಎಲ್ಲಿಟ್ಟೆ? ಮೊಬೈಲ್ ಎಲ್ಲಿಟ್ಟೆ?
ಈ ರೀತಿಯ ದಿನಾ ನಿಯಮಿತವಾಗಿ ಮಾಡುವ ಕೆಲಸಗಳು ನಮ್ಮ ನೆನಪಿನಿಂದ ಕಳೆದು ಹೋಗುವ ಪ್ರಕ್ರಿಯೆಗೆ ಆಕ್ಷನ್ ಸ್ಲಿಪ್ ಎಂದು ಹೆಸರು.
ಈ ಮೆಮೋರಿ ಸಂಗ್ರಹಣೆ ಮತ್ತು ಓದಿದ್ದನ್ನು ದೀರ್ಘಕಾಲದಲ್ಲಿ ನೆನಪಿನಲ್ಲಿ ಹೇಗೆ ಇಟ್ಟುಕೊಳ್ಳುವುದು ಎಂಬುದರ ಬಗ್ಗೆ ನನ್ನ ಮನಸಿಗೊಂದು ಕೈ ಗನ್ನಡಿ ಪುಸ್ತಕದಲ್ಲಿ ನಾಲಕ್ಕು ಅಧ್ಯಾಯಗಳನ್ನು ಬರೆದಿರುವೆ ಅಲ್ಲಿಂದ ಆಯ್ದ ಒಂದು ಸಣ್ಣಭಾಗ ಇಲ್ಲಿದೆ.
ಆಕ್ಷನ್ ಸ್ಲಿಪ್ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಅನಾಲಜಿ ನೋಡೋಣ.
ನಮ್ಮ ಮೆದುಳು ಒಂದು ದೊಡ್ಡ ಫೈಲಿಂಗ್ ಕ್ಯಾಬಿನೆಟ್ನಂತೆ ಇದೆ ಎಂದು ಊಹಿಸಿಕೊಳ್ಳಿ, ಅಲ್ಲಿ ಪ್ರತಿ ಅನುಭವವನ್ನು ಒಂದು ಫೈಲ್ ಆಗಿ ಸಂಗ್ರಹಿಸಲಾಗುತ್ತದೆ. ನೀವು ಹೊಸ ಕೌಶಲ್ಯವನ್ನು ಕಲಿಯುವಂತಹ ಧ್ಯಾನ ಮತ್ತು ಪ್ರಜ್ಞಾಪೂರ್ವಕವಾಗಿ ಏನೇ ಕೆಲಸ ಮಾಡಿದರೂ, ನಿಮ್ಮ ಮೆದುಳು ಆ ಕೆಲಸವನ್ನು ಒಂದು ಕಡತವಾಗಿ ಲೇಬಲ್ ಅಥವಾ ಟ್ಯಾಗ್ ಹಾಕುತ್ತದೆ. ಉದಾಹರಣೆಗೆ ಲೈಬ್ರರಿಯಲ್ಲಿ ಪುಸ್ತಕಗಳು ಎಲ್ಲಿವೆ ಎಂದು ಹುಡುಕಬೇಕೆಂದರೆ ಆಯಾ ವಿಷಯಗಳ ವಿಭಾಗ ಎಲ್ಲಿದೆ ಮತ್ತು ಆ ಪುಸ್ತಕದ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತೆ ಅಥವಾ ಆಯಾ ಲೇಖಕರ ಪುಸ್ತಕಗಳು ಹೀಗೇ ಒಂದು ವಿಭಾಗ ಮಾಡಿ ಸೇರಿಸಿರುತ್ತಾರೆ .
ಹಾಗೆಯೇ ನಮ್ಮ ಮೆದುಳಿನ ಅಮಿಗ್ಡಾಲ ಮತ್ತು ಸೆರೆಬ್ರಲ್ ಕಾರ್ಟೆಕ್ಸ್ ನಮ್ಮ ನೆನಪುಗಳನ್ನು ಸಂಗ್ರಹಿಸುತ್ತದೆ. ಈ ಟ್ಯಾಗಿಂಗ್ ಕೆಲಸ ಹಿಪೋ ಕ್ಯಾಂಪಸ್ ಎಂಬ ಮೆದುಳಿನ ಭಾಗ ಮಾಡುತ್ತದೆ.
ಈ ವಿಧಾನದಲ್ಲಿ ಹಿಪೋಕ್ಯಾಂಪಸ್ ಮಾಹಿತಿಗಳನ್ನು ಸರಿಯಾದ ಡ್ರಾಯರ್‌ನಲ್ಲಿ ಸೇರಿಸಿಡುತ್ತೆ (ಸ್ಪಷ್ಟ ಮೆಮೊರಿ ಸಂಗ್ರಹಣೆ) ನಂತರ, ನಮಗೆ ಅಗತ್ಯ ಬಿದ್ದಾಗ, ನಾವು ಆ ಮಾಹಿತಿಯನ್ನು ಸುಲಭವಾಗಿ ಹಿಂಪಡೆಯಬಹುದು.
ಉದಾಹರಣೆಗೆ ಅಶೋಕನು ಯಾರು ಮಗ ಎಂದು ಕೇಳಿದರೆ ವರ್ಷಾನುಗಟ್ಟಲೆ ಹಿಂದೆ ಸಂಗ್ರಹವಾದ ಮಾಹಿತಿ ಅಶೋಕ—>ಸಮಾಜ ಶಾಸ್ತ್ರ —-> ಬಾಲ್ —>ಶಾಲೆ—-> ಏಳನೇ ತರಗತಿ—-> ಮೌರ್ಯ ವಂಶ—-> ಅಶೋಕನ ತಂದೆ—->ಬಿಂಬಸಾರ ಹೀಗೆ ಟ್ಯಾಗ್ ಮುಖಾಂತರ ಮೆಮೋರಿ ನಮಗೂ ಗೊತ್ತಾಗದ ಹಾಗೇ ತೆಗೆದುಕೊಡುತ್ತದೆ
ಈಗ, ಬಾಗಿಲನ್ನು ಲಾಕ್ ಮಾಡುವುದು ಅಥವಾ ಅನಿಲವನ್ನು ಆಫ್ ಮಾಡುವಂತಹ ರೂಢಿಗತ ಕಾರ್ಯಗಳು ಎಷ್ಟು ಸಾಮಾನ್ಯವಾಗಿರುತ್ತದೆ ಎಂದರೆ ಈ ಕಾರ್ಯಗಳಿಗೆ ನಮ್ಮ ಮೆದುಳು ಪ್ರತಿ ಸಲವೂ ಪ್ರತ್ಯೇಕ ಫೈಲ್ ಮಾಡಲು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ, ಇದು ಅವುಗಳನ್ನು “ಆಟೋ-ಸ್ಟೋರೇಜ್( ಯಾಂತ್ರಿಕ ಸಂಗ್ರಹಣಾ ವಿಭಾಗ)” ವಿಭಾಗಕ್ಕೆ ಕಳುಹಿಸುತ್ತದೆ-ಇದು ಆಟೋ ಪೈಲಟ್ ವರ್ತನೆಗಳು ಮತ್ತು ಕಾರ್ಯವಿಧಾನದ ನೆನಪುಗಳ ವಿಭಾಗ. ಉದಾಹರಣೆಗೆ ಬೆಳಿಗ್ಗೆ ಎದ್ದು ಬ್ರಶ್ ಮಾಡುವುದು, ಕಾಫಿ ಕುಡಿಯುವುದು, ಸ್ನಾನ ಮಾಡುವಾಗ ನಲ್ಲಿ ನೀರನ್ನು ತಿರುಗಿಸುವುದು ಪೂಜೆಮಂತ್ರ ಹೇಳುವುದು ಇತ್ಯಾದಿ ಇವುಗಳು ಯಾಂತ್ರಿಕವಾಗಿ ತಂತಾನೆ ಆಟೋಪೈಲಟ್‌ನಲ್ಲಿ ನಡೆಯುವುದರಿಂದ, ನಮ್ಮ ಮೆದುಳು ಈ ಕೆಲಸಗಳನ್ನು ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ಘಟನೆಗಳು ಎಂದು ತಿಳಿಯುವುದಿಲ್ಲ. ಅದೇ ರೀತಿ, ಕೀ ಇಡುವುದು, ಬೀಗ ಹಾಕುವುದು ಇಂತಹ ವಿಷಯಗಳೂ ಕೂಡ ಆಟೋ ಪೈಲಟ್ ಆಗಿಯೇ ಇರುತ್ತವೆ.
ಆ ಘಟನೆಯ ಸ್ವಲ್ಪ ಹೊತ್ತಿನ ನಂತರ ನಾವು ನಾನು ಲಾಕ್ ಮಾಡಿದ್ದೆನಾ ಇಲ್ಲವಾ ಎಂದು ಹುಡುಕಲು ಹೋದಾಗ ಅದು ಟ್ಯಾಗ್ ಆಗಿರುವ ಮೆಮೊರಿ ಡ್ರಾಯರ್‌ನಲ್ಲಿ (ವರ್ಕಿಂಗ್ ಮೆಮೊರಿ) ಫೈಲ್ ಅನ್ನು ಹುಡುಕುತ್ತೇವೆ. ಆದರೆ ಆ ಮೆಮೋರಿ ಆ ಕಪಾಟಿನಲ್ಲಿರುವುದಿಲ್ಲ. ಏಕೆಂದರೆ ಅದು ಸಂಗ್ರಹವೇ ಆಗಿರುವುದಿಲ್ಲ. ಈ ಮೇಲಿನ ಕ್ರಿಯೆಯು ರೂಢೀಗತವಾದ್ದರಿಂದ ಇದನ್ನು ಬೇಸಿಲ್ ಗ್ಯಾಂಗ್ಲಿಯ ಮೆದುಳಿನ ಕೆಳಭಾಗವು ನೋಡಿಕೊಂಡಿರುತ್ತೆ. ಇದೊಂದು ರೀತಿ ಹಾವಿನ ರೂಢೀಗತ ಚಲನೆಯ ಪ್ರಕಾರ ಅವುಗಳಿಗೆ ಎಲ್ಲಿ ಏಕೆ ಹೋಗುತ್ತೇವೆ ಎಂಬ ಪ್ರಜ್ಞಾಪೂರ್ವಕ ಅರಿವು ಇರುವುದಿಲ್ಲ. ಆದರೂ ಎಲ್ಲಿ ಆಹಾರ ಸಿಗುತ್ತೆ ಎಂಬುದು ಅವುಗಳಿಗೆ ಸಹಜವಾಗಿಯೆ ಗೊತ್ತಿರುತ್ತದೆ. ಇಂತಹ ನಿಯಮಿತವಾದ ಕೆಲಸಗಳನ್ನು ಮಾಡುವಾಗ ಆಕ್ಷನ್ ಸ್ಲಿಪ್ಗೆ ಕಾರಣವಾಗುತ್ತದೆ
ಆಕ್ಷನ್ ಸ್ಲಿಪ್ ಯಾಕೆ ಆಗುತ್ತೆ?
1. ಅಭ್ಯಾಸದ ಕಾರ್ಯಗಳು ಬಹಳವಾದ್ದರಿಂದ, ನೆನಪಿನ ಶಕ್ತಿಯನ್ನು ಉಳಿಸಲು ಮೆದುಳು ಪುನರಾವರ್ತಿತ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುತ್ತದೆ( ಮಸಲ್ ಮೆಮೋರಿ).
2. ಯಾವುದೇ ಯಾಂತ್ರಿಕ ಕೆಲಸ ಮಾಡುವಾಗ ಸಾಮಾನ್ಯವಾಗಿ ಜನರು ಬೇರೇನೋ ಯೋಚಿಸುತ್ತಿರುತ್ತಾರೆ, ಅಂದರೆ ಗಮನ ಬೇರೆಡೆ ಇರುತ್ತೆ . ಆಗ ಆತನ ಕಾರ್ಯ ಮೆದುಳಿನಲ್ಲಿ ಸರಿಯಾದ ಎನ್ಕೋಡಿಂಗ್ ಆಗಲಾರದು. ಏಕೆಂದರೆ ಮೆದುಳು ಆ ಕೆಲಸವನ್ನು ಮುಖ್ಯವೆಂದು ಗುರುತಿಸದ ಕಾರಣ, ನಾವು ಅದನ್ನು ನಂತರ ನೆನಪಿಸಿಕೊಳ್ಳಲಾಗುವುದಿಲ್ಲ.
ಆಕ್ಷನ್ ಸ್ಲಿಪ್ ಅನ್ನು ತಡೆಯುವುದು ಹೇಗೆ .
ನಾವು ಯಾವುದೇ ಕೆಲಸದಲ್ಲಿ ಪ್ರಜ್ಞಾಪೂರ್ವಕವಾಗಿ ಕಾರ್ಯನಿರತರಾಗಿದ್ದರೆ ಅಥವಾ ಅದು ಭಾವನಾತ್ಮಕವಾಗಿದ್ದರೆ ಅಥವಾ ವಿಚಿತ್ರವಾಗಿದ್ದರೆ ಮಾತ್ರ ಮೆದುಳು ಆ ಕೆಲಸವನ್ನು ನೆನಪಿನಲ್ಲಿ ಸಂಗ್ರಹಿಸಿಕೊಳ್ಳುತ್ತದೆ.
ಆದ್ದರಿಂದ ನಾವು ಈ ಕೆಳಗಿನ ತಂತ್ರಗಳನ್ನು ಬಳಸಿಕೊಂಡು ಅಭ್ಯಾಸಗತ ಕಾರ್ಯಗಳನ್ನೂ ನೆನಪಿಟ್ಟುಕೊಳ್ಳಬಹುದು.
- ಯಾವುದೇ ಯಾಂತ್ರಿಕ ಕೆಲಸಗಳನ್ನು ಮಾಡುವಾಗ ಅದನ್ನು ನಮಗೇ ಕೇಳುವಂತೆ ಹೇಳಿಕೊಳ್ಳುವುದು ಉದಾ “ನಾನು ಗ್ಯಾಸ್ ಆಫ್ ಮಾಡಿದ್ದೇನೆ” ಎಂದು ಗಟ್ಟಿಯಾಗಿ ಹೇಳುವುದು.
- ಸಂವೇದನಾ ಇಂದ್ರಿಯಗಳನ್ನು ಈ ಕೆಲಸದಲ್ಲಿ ನಿರತವಾಗಿಸುವುದು. ಉದಾಹರಣೆಗೆ ಬೀಗ ಹಾಕುವಾಗ ಬೀಗವನ್ನು ಎರಡು ಬಾರಿ ಮುಟ್ಟುವುದು
- ಕೀ ಎಲ್ಲಾದರೂ ಇಟ್ಟಾಗ ಅದರ ಸುತ್ತಮುತ್ತಲಿನ ಪ್ರಮುಖ ವಸ್ತು ಅಥವಾ ಸ್ಥಾನವನ್ನು ಎರಡು ಮೂರು ಸೆಕೆಂಡ್ ನೋಡಿ ಅದನ್ನು ವಿಶ್ಯುಲೈಸ್ ಮಾಡಿಕೊಳ್ಳುವುದು.
- ಈ ರೀತಿಯ ಆಟೊ ಪೈಲಟ್ ಕೆಲಸ ಮಾಡುವಾಗ ಕೆಲವು ವಿಚಿತ್ರ ಪದಗಳನ್ನು ಹೇಳಿಕೊಳ್ಳುವುದು ಅಥವಾ ವಿಚಿತ್ರ ದೃಶ್ಯಾವಳಿಗಳನ್ನು ಮಾನಸಿಕವಾಗಿ ವಿಶ್ಯುಲೈಸ್ ಮಾಡಿಕೊಳ್ಳಬಹುದು. ಉದಾಹರಣೆಗೆ ಗ್ಯಾಸ್ ಆಫ್ ಮಾಡಿದಾಗ ಆ ಗ್ಯಾಸ್ ಸ್ಟವ್ ನೀಲಾಕಾಶದಲ್ಲಿ ಹೋಗುವುದು ಅಥವಾ ಬೀಗ ದೊಡ್ಡದಾಗಿ ನಿಮ್ಮನ್ನೇ ಲಾಕ್‌ಮಾಡುವುದು ಇತ್ಯಾದಿ.
- ಸಾಮಾನ್ಯವಾಗಿ ಮರೆಯುವ ವಿಷಯಗಳ ಜೊತೆಗೆ ನೀವು ಮರೆಯದ ವಿಷಯಗಳ ಅಥವಾ ವಸ್ತುಗಳ ಜೊತೆಗೆ ಇಡಿ. ಉದಾಹರಣೆಗೆ ಕೀ ಮತ್ತು ಫೋನ್ ಚಾರ್ಜರ್ ಅನ್ನು ಯಾವಾಗಲೂ ಜೊತೆಗೇ ಇಡುವುದು. ಇದನ್ನು ಆಬ್ಜೆಕ್ಟ್ ಟ್ಯಾಗಿಂಗ್ ಎನ್ನುತ್ತಾರೆ.
- ಆಟೋ ಯಾಂತ್ರಿಕ ಕೆಲಸಗಳನ್ನು ಮಾಡುವಾಗ ಬೇರೆ ಯಾವ ಕೆಲಸಗಳನ್ನೂ ಅಂದರೆ ಫೋನ್ ಮಾಡುವುದು ಅಥವಾ ಪುಸ್ತಕ ಓದುವುದು ಇತ್ಯಾದಿ ಮಾಡದಿರುವುದು.
ಹೀಗೆ, ಮೇಲೆ ಹೇಳಿದ ತಂತ್ರಗಳಿಂದ ಆಕ್ಷನ್ ಸ್ಲಿಪ್ ಅನ್ನು ಕಡಿಮೆ ಗೊಳಿಸಿ ನೆನಪಿನಲ್ಲಿಟ್ಟುಕೊಳ್ಳಬಹುದು
ಡಾ ರೂಪಾ ರಾವ್
ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ
ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ : 97408 66990
ಇದನ್ನೂ ಓದಿ- ನಿಮ್ಮನ್ನು ಇಷ್ಟ ಪಡದೇ ಇರುವವರನ್ನು ಗುರುತಿಸುವುದು ಹೇಗೆ?