ತಡರಾತ್ರಿ ಬೈಕ್‌ ಮೇಲೆ ತೆರಳುತ್ತಿದ್ದ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

Most read

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಅಶೋಕನಗರದ ಗರುಡಾ ಮಾಲ್ ಬಳಿ ತಡರಾತ್ರಿ 1 ಗಂಟೆ ಸುಮಾರಿಗೆ ರೌಡಿ ಶೀಟರ್‌ ಕಾಂಗ್ರೆಸ್ ಮುಖಂಡನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೈದರ್ ಅಲಿ ಕೊಲೆಯಾದ ಕಾಂಗ್ರೆಸ್ ಮುಖಂಡ. ಈತ ತಡರಾತ್ರಿ ಲೈವ್ ಬ್ಯಾಂಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ನೇಹಿತನ ಜೊತೆಗೆ ಬೈಕ್‌ ನಲ್ಲಿ ತೆರಳುತ್ತಿದ್ದ. ಮತ್ತೊಂದು ಬೈಕ್‌ ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಹೈದರ್ ಅಲಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಶೋಕ ನಗರ ಠಾಣೆ ಪೊಲೀಸರು ರಕ್ತದ ಮಡುವಲ್ಲಿ ಬಿದ್ದಿದ್ದ ಹೈದರ್ ಅಲಿಯನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಆಗಮಿಸುವ ವೇಳೆಗೆ ಹೈದರ್ ಅಲಿ ಮೃತಪಟ್ಟಿದ್ದ. ವಿಷಯ ತಿಳಿದ ಹೈದರ್ ಬೆಂಬಲಿಗರು ಬೌರಿಂಗ್ ಆಸ್ಪತ್ರೆ ಬಳಿ ಜಮಾಯಿಸಿ  ಲಾಂಗು, ಮಚ್ಚು ಮೊದಲಾದ ಮಾರಕಾಸ್ತ್ರಗಳನ್ನು ಝಳಪಿಸಿದರು. ಆಸ್ಪತ್ರೆಯ  ಗೇಟ್‌ ಅನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿಯನ್ನು ನಿಭಾಯಿಸಿದರು.

ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಅಶೋಕನಗರ ಪೊಲೀಸರು ಬಲೆ ಬೀಸಿದ್ದಾರೆ.

ಹೈದರ್ ಅಲಿ ಜತೆಯಲ್ಲಿದ್ದ ಸ್ನೇಹಿತನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಪಾಳ್ಯ ನಿವಾಸಿಯಾಗಿರುವ ಹೈದರ್ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದ. ಕಳೆದ ಚುನಾವಣೆಯಲ್ಲಿ ಹ್ಯಾರಿಸ್ ಪರ ಪ್ರಚಾರ ಮಾಡಿದ್ದರು ಎಂದು ತಿಳಿದುಬಂದಿದೆ.

ಹೈದರ್ ಅಶೋಕನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಮಾರಣಾಂತಿಕ ಹಲ್ಲೆ ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ. 2014 ರಿಂದ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾ ಬಂದಿದ್ದು, 2022 ರಿಂದ ಯಾವುದೇ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. ಕೊಲೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article