ಹವಾಮಾನ ವೈಪರೀತ್ಯಗಳು ಇಡೀ ಮಾನವ ಕುಲಕ್ಕೆ ದೊಡ್ಡ ಬೆದರಿಕೆ. ಈ ವೈಪರೀತ್ಯಗಳ ಕಾರಣಗಳನ್ನು, ಪರಿಣಾಮಗಳನ್ನು ವೈಜ್ಞಾನಿಕ ಆಧಾರದೊಂದಿಗೆ ಸರಳವಾಗಿ, ಆಕರ್ಷಕವಾಗಿ ನಿರಂತರ ಬರೆಯುತ್ತಾ ಈ ಗಂಭೀರ ಸಮಸ್ಯೆಯನ್ನು ಜನ ಸಾಮಾನ್ಯರ ಬಳಿಗೆ ಒಯ್ದು ಅವರನ್ನು ಎಚ್ಚರಿಸುತ್ತಿರುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿರುವವರು ಹಾಸನದ ಕೆ.ಎಸ್.ರವಿಕುಮಾರ್. ಇವರು ಬರೆದ ಮಹತ್ವದ ಲೇಖನಗಳ ಗುಚ್ಛ ‘ಹವಾಮಾನ ಬದಲಾವಣೆ, ಬೇಕೆ ಈ ದಿನಗಳು’ ಹೊತ್ತಗೆ ತಾರೀಕು 23.02.2025ರಂದು ಹಾಸನದ ಗಾಂಧೀ ಸ್ಮಾರಕ ಭವನದಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರುನಾಡಿನ ಜನವಿಜ್ಞಾನ ಚಳವಳಿಯ ಮುಂಚೂಣಿ ಹೋರಾಟಗಾರರಾದ ಸಿ. ಯತಿರಾಜು ಅವರು ಬರೆದ ಮುನ್ನುಡಿ ಇಲ್ಲಿದೆ.
ಬರಹಗಾರರಾದ ಕೆ.ಎಸ್.ರವಿಕುಮಾರ್ ಅವರು ಹಾಸನದಿಂದಾರಂಭಿಸಿ ಅಂಟಾರ್ಟಿಕವರೆಗೂ ವಾಯುಗುಣ ವೈಪರೀತ್ಯ ಯಾವ ರೀತಿ ಪ್ರಪಂಚದ ಬೇರೆ ಬೇರೆ ಭಾಗಗಳನ್ನು ಅತಿ ವಿಶಿಷ್ಟವಾಗಿ, ಸ್ಥಳೀಯವಾಗಿ ಬಾಧಿಸುತ್ತಿದೆ ಎಂಬ ಅಂಶವನ್ನು ವಾಸ್ತವಾಂಶಗಳು ಮತ್ತು ಅಂಕಿಸಂಖ್ಯಾ ಸಮೇತ ನಿರೂಪಿಸಿದ್ದಾರೆ. ಈ ಎಲ್ಲ ನಿರೂಪಣೆಗಳು ಅತ್ಯಂತ ಆಕರ್ಷಕವಾದ ನಿರೂಪಣಾ ಶೈಲಿಯಲ್ಲಿ ಮೂಡಿಬಂದಿವೆ. ಇವುಗಳನ್ನು ಓದಿದಾಗ ‘ವಾಯುಗುಣ ವೈಪರೀತ್ಯದ ಪ್ರವಾಸ ಕಥನ’ವನ್ನು ಓದಿದ ಅನುಭವವಾಗುತ್ತದೆ. ನೇರವಾದ ನಿರೂಪಣಾ ಶೈಲಿ ಪರಿಣಾಮಕಾರಿಯಾಗಿದೆ. ಈ ಸಂಕಲನದ ಲೇಖನಗಳನ್ನು ಲೇಖಕರು 2021-23ನೇ ವರುಷಗಳಲ್ಲಿ ವಿವಿಧ ದಿನಾಂಕಗಳಲ್ಲಿ ಬರೆದು ಮುಗಿಸಿದ್ದಾರೆ. ದಿನಾಂಕಗಳನ್ನು ತಲೆಬರಹದಲ್ಲಿ ನೀಡಿರುವುದು ದೀರ್ಘ ನಿರಂತರ ಬರಹದ ಸ್ವಭಾವವನ್ನು ಸೂಚಿಸುತ್ತದೆ. ಅತ್ಯಂತ ನಿರಾಳವಾದ ಆರಾಮ ಶೈಲಿಯಲ್ಲಿ ಬರವಣಿಗೆ ಮಾಡಿದ್ದರೂ ವಾಯುಗುಣ ವೈಪರೀತ್ಯಗಳ ಪರಿಣಾಮಗಳ ತೀವ್ರತೆ ಬಗ್ಗೆ, ಅದರ ಜರೂರಿನ ಬಗ್ಗೆ ಲೇಖನಗಳು ಸದಾ ನಮ್ಮನ್ನು ಎಚ್ಚರಿಸುವಂತಿವೆ. ವಿವಿಧ ಅಧಿಕೃತ ಮೂಲಗಳಿಂದ ಪರಿಣಾಮಕಾರಿ ಮಾಹಿತಿಗಳನ್ನು ಸಂಗ್ರಹಿಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಬರಹಗಳನ್ನು ಅತ್ಯಂತ ಗಂಭೀರವಾಗಿ ನಿರೂಪಿಸಿದ್ದಾರೆ.
ಇಂದು ವಾಯುಗುಣ ವೈಪರೀತ್ಯ ಜಾಗತಿಕ ಸವಾಲಾಗಿರುವುದನ್ನು ಜಾಗೃತವಾಗಿ ನಿರೂಪಿಸುತ್ತಲೆ ಅದರಿಂದಾಗುವ ಸ್ಥಳೀಯ ಪರಿಣಾಮಗಳ ವೈವಿಧ್ಯತೆಯೆಡೆಗೆ ಓದುಗರ ಗಮನ ಸೆಳೆಯಲು ಈ ಎಲ್ಲ ಬರಹಗಳು ಯಶಸ್ವಿಯಾಗಿವೆ. ಇಂದು ವಾಯುಗುಣ ವೈಪರೀತ್ಯಗಳ ಚರ್ಚೆಗಳಲ್ಲಿ ಈ ಆಯಾಮವನ್ನು ಪ್ರಧಾನವಾಗಿ ಗುರುತಿಸಲಾಗಿಲ್ಲ. ಲೇಖಕರು ಈ ಸಂಬಂಧ ಆದ್ಯತೆ ನೀಡಿ ನಿರ್ಲಕ್ಷಿತ ಆಯಾಮಕ್ಕೆ ಪ್ರಾಧಾನ್ಯತೆಯನ್ನು ನೀಡಿದ್ದಾರೆ.
ವಾಯುಗುಣ ವೈಪರೀತ್ಯಗಳ ಮತ್ತೊಂದು ಮುಖ್ಯ ಲಕ್ಷಣ ಅವಕ್ಕಿರುವ ವೈವಿಧ್ಯಮಯ ಪರಿಣಾಮಗಳು. ಅವನ್ನು ಲೇಖಕರು ಮನಮುಟ್ಟುವಂತೆ ದಾಖಲಿಸಿದ್ದಾರೆ. ಬಿಸಿಗಾಳಿ, ಬರ, ಕಾಡ್ಗಿಚ್ಚುಗಳು, ಬಿರುಗಾಳಿ, ಪ್ರವಾಹ… ಮುಂತಾದ ಪ್ರಮುಖ ನೈಸರ್ಗಿಕ ಅತಿರೇಕದ ವಿಚಾರಗಳನ್ನು ಜಗತ್ತಿನ ಮೂಲೆಮೂಲೆಗಳಿಂದ ಘಟನೆಗಳ ಮೂಲಕ ಗ್ರಹಿಸಿ ಅವುಗಳಲ್ಲಿ ಅಡಕವಾಗಿರುವ ಬಹುಮುಖಿ ಆಯಾಮಗಳ ಬಗ್ಗೆ ಮಾತನಾಡುತ್ತಲೆ ಅಂತರ್ಗತವಾಗಿರುವ ಏಕತೆಯ ಕಾರಣಗಳ ಮೇಲೆ ಲೇಖನಗಳು ಬೆಳಕು ಚೆಲ್ಲುತ್ತವೆ.
ವಾಯುಗುಣ ವೈಪರೀತ್ಯಗಳ ಪರಿಣಿತರೆಂದು ಕರೆಸಿಕೊಳ್ಳುವವರ ಆಚಾರವಿಚಾರಗಳಲ್ಲಿ ಪತಿಪಾದನೆ ಮತ್ತು ಅಭ್ಯಾಸಗಳಲ್ಲಿನ ವೈರುಧ್ಯಗಳನ್ನು ಮೊನಚಾಗಿ ಟೀಕಿಸಲು ಲೇಖಕರಿಗೆ ಯಾವುದೇ ಮುಲಾಜಿಲ್ಲ.
ವಾಯುಗುಣ ವೈಪರೀತ್ಯಗಳು ಹೆಚ್ಚುತ್ತ ಸಾಗಿರುವ ಪರಿಣಾಮಗಳಿಂದ ಅತ್ಯಂತ ಸಾಮಾನ್ಯ ಜನರು ಯಾವ ರೀತಿ ತೊಂದರೆ, ನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ವಿವರಿಸುತ್ತ ಜನಪರ ಕಾಳಜಿಯಿಂದ ದುರ್ಬಲರು, ಅಂಚಿಗೆ ಸರಿಸಲ್ಪಟ್ಟವರು, ಅಮಾಯಕರು ಹೇಗೆ ಬಲಿಯಾಗುತ್ತಿದ್ದಾರೆ ಎಂಬ ಬಗ್ಗೆ ಮನಮಿಡಿಯುವಂತೆ ಬರೆದಿದ್ದಾರೆ. ಸರಕಾರಗಳು ತಮ್ಮ ಪಾಲಿನ ಕರ್ತವ್ಯಗಳನ್ನು ಮರೆತು ಈ ಬಹುಮುಖಿ ಪರಿಣಾಮಗಳಿಂದ ಸಾಮಾನ್ಯ ಜನರ ಜೀವನೋಪಾಯಗಳಿಗೆ ಗಂಡಾಂತರ ತಂದಿರುವುದನ್ನು ವಿವರಿಸಿದ್ದಾರೆ.
ಈ ಪರಿಣಾಮಗಳಿಗೆ ನಿಖರ ವೈಜ್ಞಾನಿಕ ಕಾರಣಗಳನ್ನು ನೀಡಿ ಲೇಖನಗಳಿಗೆ ಅಗತ್ಯವಾದ ಅಧಿಕೃತತೆಯನ್ನು ಪ್ರಾಪ್ತಿಗೊಳಿಸಿದ್ದಾರೆ. ಹಸಿರು ಮನೆ ಅನಿಲಗಳ ಅಪಾಯಕಾರಿ ಪಾತ್ರಗಳ ಬಗ್ಗೆ ಸಾಕಷ್ಟು ವೈಜ್ಞಾನಿಕ ವಿವರಗಳನ್ನು ನೀಡಿ ಜನಪ್ರಿಯ ವಿಜ್ಞಾನ ಲೇಖನಗಳ ಮಾದರಿಯಲ್ಲಿ ದಾಖಲಿಸುತ್ತಲೆ ತಮ್ಮ ಜನಪರ ಕಾಳಜಿಗಳ ಮೂಲಕ ಅವಕ್ಕೆ ಜನವಿಜ್ಞಾನ ಲೇಖನಗಳ ಸ್ವರೂಪ ನೀಡಿದ್ದಾರೆ. ಜಾಗತಿಕ ಬಿಸಿಯೇರುವಿಕೆಯನ್ನು ವಿವರಿಸುವಾಗ ತಾಪ ಹೆಚ್ಚಳವನ್ನೆ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ. ತಾಪ ಹೆಚ್ಚಳ ಬಿಸಿಯೇರುವಿಕೆಯ ಒಂದು ಮಾಪನಾಂಕ ಮಾತ್ರ. ತಾಪ ಬಿಸಿಯೇರುವಿಕೆಯ ಸೂಚಿಯಾದರೂ ಅದು ಅಳತೆಗಳನ್ನು ಮೀರಿದ್ದು ಅಂಕಿ-ಅಂಶಗಳು ಪರಿಣಾಮಗಳ ತೀವ್ರತೆಯನ್ನು ವಿವರಿಸಲು ಸಹಕಾರಿ ಮಾತ್ರ.
ವಾಯುಗುಣ ವೈಪರೀತ್ಯಗಳ ಜಾಗತಿಕ ಸಮಾವೇಶಗಳು ನಿರೀಕ್ಷಿತ ಪ್ರಮಾಣದಲ್ಲಿ ಪರಿಣಾಮಕಾರಿಯಾಗದಿರುವ ಅಂಶಗಳನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಲಾಗಿದ್ದರು ಅವು ಎಲ್ಲಿ ದಿಕ್ಕು ತಪ್ಪಿವೆ ಎಂಬುದನ್ನು ಮತ್ತಷ್ಟು ನಿಖರವಾಗಿ ಗುರ್ತಿಸಲು ಸಾಧ್ಯವಿತ್ತು. ವಿಜ್ಞಾನ ತಂತ್ರಜ್ಞಾನಗಳ ಬಳಕೆಯಿಂದ ವಾಯುಗುಣ ವೈಪರೀತ್ಯದ ಪರಿಣಾಮಗಳ ತೀವ್ರತೆಯನ್ನು ಮಿತಗೊಳಿಸುವ, ನಿವಾರಿಸುವ ಪರಿಹಾರಗಳೆಡೆಗೆ ಯಾವ ಪ್ರಯತ್ನಗಳಾಗುತ್ತಿವೆ ಎಂಬುದನ್ನು ಹೆಚ್ಚು ಚರ್ಚಿಸಲು ಸಾಧ್ಯವಿತ್ತು. ಈ ನಿರೂಪಣೆಗಳಲ್ಲಿ ಸೋನಂ ವಾಂಗ್‍ಚುಕ್ ಅವರ ಪ್ರಯತ್ನಗಳನ್ನು ಗುರುತಿಸಿ ವಿವರಿಸಲಾಗಿದೆ. ಇದು ಅಂತಹ ಪ್ರಯತ್ನಗಳನ್ನು ಗುರ್ತಿಸಿ ದಾಖಲಿಸುವುದರ ಜೊತೆಜೊತೆಗೆ ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ದಾಟಿಯಲ್ಲಿರುವುದು ಅಭಿನಂದನಾರ್ಹ.
ವಾಯುಗುಣ ವೈಪರೀತ್ಯಗಳಿಗೆ ಸ್ಥಳೀಯ ಜನಸಮುದಾಯಗಳು ಹೊಂದಾಣಿಕೆ ಮತ್ತು ಪುನರ್ ಚೇತರಿಕೆಗಳನ್ನು ಪ್ರಧಾನವಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ದೂಡಲ್ಪಟ್ಟಿವೆ. ಇಂತಹ ಕೆಲವು ವಿಷಯಗಳು ಲೇಖಕರ ಗಮನ ಸೆಳೆಯದಿರುವುದು ಆಶ್ಚರ್ಯಕರವಾಗಿದೆ.
ಒಟ್ಟಾರೆಯಾಗಿ ವಾಯುಗುಣ ವೈಪರೀತ್ಯಗಳ ಪರಿಣಾಮಗಳು ಜಗತ್ತಿನ ಪ್ರತಿಯೊಂದು ಭಾಗವನ್ನು ಯಾವಯಾವ ರೀತಿಗಳಲ್ಲಿ ಬೆಂಬಿಡದೆ ಬಾಧಿಸುತ್ತಿವೆ ಹಾಗೂ ಹಾನಿಗಳನ್ನು ಉಂಟುಮಾಡುತ್ತಿವೆ ಎಂಬ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೂ ಅರ್ಥೈಸುವ ರೀತಿಯ ಬರಹಗಳು ಕನ್ನಡದಲ್ಲಿ ಬಹಳ ಅಪರೂಪ. ಈ ಕೃತಿ ಅಂತಹ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಪ್ರಧಾನ ಕೊಡುಗೆಯಾಗಿದೆ. ಇಂತಹ ಕೊಡುಗೆ ನೀಡಿದ ರವಿಕುಮಾರ್ ಮತ್ತು ಕ್ರಿಯಾ ಪ್ರಕಾಶನ ಬಳಗಕ್ಕೆ ನನ್ನ ಅಭಿನಂದನೆಗಳು. ಮುನ್ನುಡಿ ಬರೆಯಲು ಅವಕಾಶ ನೀಡಿದ್ದಕ್ಕೆ ಅವರಿಗೆ ಧನ್ಯವಾದಗಳು.
ಸಿ. ಯತಿರಾಜು, ತುಮಕೂರು
20.05.2024
ಇದನ್ನೂ ಓದಿ- http://ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ | ಭಾಗ 3 https://kannadaplanet.com/california-and-wildfires-part-3/