ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಮೌದ್ಗಿಲ್ ದಾಖಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಙೆ ನೀಡಿದೆ. ಮಾರ್ಚ್ 12 ರವರೆಗೆ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದು, ರಾಜಿ ಸಂಧಾನಕ್ಕೆ ಪ್ರಯತ್ನಿಸುವಂತೆ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಸಲಹೆ ನೀಡಿದ್ದಾರೆ.
19. 2. 2023ರಂದು ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ನೀಡಿ, ನಂತರ ಅದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪ ಮಾಡಲಾಗಿದೆ. ಈ ಹೇಳಿಕೆಯನ್ನು 1.8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಅವರ ಅವಹೇಳನಕಾರಿ ಹೇಳಿಕೆ ನಂತರ 6 ತಿಂಗಳವರೆಗೆ ಸಂಬಳ ನೀಡದೇ ಹುದ್ದೆ ಇಲ್ಲದೇ ವರ್ಗಾಯಿಸಿದ್ದರು. ಈ ಹೇಳಿಕೆಯಿಂದ, ತಂಗಿ, ಪತಿ, ಮಕ್ಕಳಿಗೂ ಮಾನಸಿಕ ಯಾತನೆಯಾಗಿದೆ ಎಂದು ರೂಪಾ ಮೌದ್ಗಿಲ್ ಅವರು ರೋಹಿಣಿ ಸಿಂಧೂರಿ ವಿರುದ್ಧ ಬೆಂಗಳೂರಿನ 7 ನೇ ಎಸಿಎಂಎಂ ಕೋರ್ಟ್ನಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಅವರ ನಡುವಿನ ಕಲಹ ಎರಡು ವರ್ಷಗಳ ಇತಿಹಾಸವಿದೆ. ಡಿ. ರೂಪಾ ಅವರು ರೋಹಿಣಿ ಸಿಂಧೂರಿ ಅವರ ಮೇಲೆ ಕೆಲವು ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಅವರ ಖಾಸಗಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಕೋರ್ಟ್ ಮೊರೆ ಹೋಗಿದ್ದ ರೋಹಿಣಿ ಸಿಂಧೂರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಾದ ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ವರೆಗೂ ಹೋಗಿತ್ತು. ಆದರೆ, ಅಲ್ಲಿಯೂ ನ್ಯಾಯ ಬಗೆಹರಿಯದೇ ಪುನಃ ವಿಚಾರಣಾ ಕೋರ್ಟ್ನಲ್ಲಿ ಬಗೆಹರಿಸಿಕೊಳ್ಳುವಂತೆ ವಾಪಸ್ ಕಳುಹಿಸಲಾಗಿತ್ತು. ಈ ಸಂಬಂಧ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ ನಲ್ಲಿಂದು ಸಾಕ್ಷ್ಯ ವಿಚಾರಣೆ ನಡೆದಿದ್ದು, ಈ ವೇಳೆ ಕೋರ್ಟ್ ಗೆ ಹಾಜರಾಗಿದ್ದ ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್ ನಡುವೆ ರಾಜಿ ಮಾಡಲು ಮುಂದಾಗಿತ್ತು. ಇಬ್ಬರೂ ಉತ್ತಮ ಹೆಸರು ಗಳಿಸಿದ ಹಿರಿಯ ಅಧಿಕಾರಿಗಳಾಗಿದ್ದೀರಿ. ನಿಮ್ಮ ಸಮಯವನ್ನು ಸಮಾಜಕ್ಕಾಗಿ ಮೀಸಲಿಡಬೇಕು. ಕೋರ್ಟ್ ಕಲಾಪದಲ್ಲಿ ಸಮಯ ವ್ಯಯಿಸುವ ಬದಲು ರಾಜಿ ಸಾಧ್ಯವೇ ಯೋಚಿಸಿ ಎಂದು ಅಂದಿನ ನ್ಯಾಯಮೂರ್ತಿಗಳು ಕಿವಿ ಮಾತು ಹೇಳಿದ್ದರು. ಅಲ್ಲದೇ ಇಬ್ಬರು ಅಧಿಕಾರಿಗಳಿಗೆ One Minute Apology ಪುಸ್ತಕ ಓದುವಂತೆ ಸಲಹೆ ನೀಡಿದ್ದರು.