ಲಖನೌ: ಭೀಕರ ಅಪಘಾತಕ್ಕೆ ಪ್ರಯಾಗ್ರಾಜ್ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಒಂದೇ ಕುಟುಂಬದ 6 ಮಂದಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದ್ದು, ಎಲ್ಲ ಆರು ಮಂದಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಮತ್ತು ಕ್ರೂಸರ್ ನಡುವೆ ಇಂದು ಬೆಳಗ್ಗೆ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಅಪಘಾತ ಸಂಭವಿಸಿದೆ. ಉಳಿದವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ (35) ಸಂತೋಷ್ (43) ನೀಲಮ್ಮ (60) ಸೇರಿದಂತೆ ಆರು ಜನ ಸಾವನ್ನಪ್ಪಿದ್ದಾರೆ. ಒಂದೇ ಗಾಡಿಯಲ್ಲಿ ಒಟ್ಟು 12 ಜನ ಕುಂಭ ಮೇಳಕ್ಕೆ ತೆರಳಿದ್ದರು. ಪುಣ್ಯಸ್ನಾನ ಮಾಡಿದ ಬಳಿಕ ಪ್ರಯಾಗ್ರಾಜ್ ನಿಂದ ಕಾಶಿ ಕಡೆಗೆ ಕ್ರೂಸರ್ನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗೆ ಕಾಶಿಯಿಂದ 20 ಕಿಲೋ ಮೀಟರ್ ದೂರದಲ್ಲಿ ಲಾರಿಗೆ ಹಿಂದಿನಿಂದ ಕ್ರೂಸರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಉಳಿದವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.