ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ, ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮತ್ತು ನಟಿ ಧನಶ್ರೀ ವರ್ಮಾ ಅವರು ಇಲ್ಲಿನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ ಅವರ ನಾಲ್ಕು ವರ್ಷಗಳ ದಾಂಪತ್ಯ ಜೀವನ ಕೊನೆಗೊಂಡಿದೆ.
ಚಾಹಲ್ ಮತ್ತು ಧನಶ್ರೀ ವರ್ಮಾ ನಿನ್ನೆ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ ವಿಚ್ಛೇದನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನ್ಯಾಯಾಧೀಶರು ಚಾಹಲ್ ದಂಪತಿಗೆ ಸುಮಾರು 45 ನಿಮಿಷಗಳ ಕಾಲ ಆಪ್ತಸಮಾಲೋಚನೆ ನಡೆಸಿದರು. ಈ ವೇಳೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ, ನಾವು 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ನಮ್ಮಲ್ಲಿ ಹೊಂದಾಣಿಕೆ ಸಮಸ್ಯೆ ಇರುವುದರಿಂದ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಅವರು ನ್ಯಾಯಾಧೀಶರಿಗೆ ತಿಳಿಸಿದರು. ಸಂಜೆ 4.30ಕ್ಕೆ ನ್ಯಾಯಾಧೀಶರು ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದರು ಎಂದು ನ್ಯಾಯಾಲಯದ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ.
ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಬಾರಿ ದೇವರು ನನ್ನನ್ನು ಕಾಪಾಡಿದ್ದಾನೆ. ಯಾವಾಗಲೂ ನನ್ನೊಂದಿಗೆ ಇರುವುದ್ದಕ್ಕಾಗಿ ದೇಔರಿಗೆ ಋಣಿಯಾಗಿದ್ದೇನೆ. ನನಗೆ ತಿಳಿದಿಲ್ಲದಿದ್ದರೂ ಸಹ. ಆಮೆನ್’ ಎಂದು ವಿಚ್ಛೇದನದ ನಂತರ ಚಾಹಲ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಧನಶ್ರೀ ವರ್ಮಾ ಅವರೂ ಸಹ ಒತ್ತಡದಿಂದ ಆಶೀರ್ವಾದದವರೆಗೆ. ದೇವರು ನಮ್ಮ ಚಿಂತೆಗಳು ಮತ್ತು ಪ್ರಯೋಗಗಳನ್ನು ಹೇಗೆ ಆಶೀರ್ವಾದಗಳಾಗಿ ಪರಿವರ್ತಿಸಬಹುದು ಎಂಬುದು ಅದ್ಭುತವಲ್ಲವೇ? ಇಂದು ನೀವು ಏನನ್ನಾದರು ಹೇಳುತ್ತಿದ್ದರೆ, ನಿಮಗೆ ಆಯ್ಕೆ ಇದೆ ಎಂದು ತಿಳಿದುಕೊಳ್ಳಿ. ನೀವು ಎಲ್ಲವನ್ನೂ ದೇವರಿಗೆ ಒಪ್ಪಿಸಿ ಪ್ರಾರ್ಥಿಸಿ ಮತ್ತು ನಂಬಿಕೆ ಇಡಿ ಎಂದು ತಮ್ಮ ಇನ್ಸ್ಟಾಗ್ರಾಂ ಬರೆದುಕೊಂಡಿದ್ದಾರೆ. ಚಾಹಲ್ ಅಥವಾ ಧನಶ್ರೀ ವರ್ಮಾ ತಮ್ಮ ವಿಚ್ಛೇದನದ ಬಗ್ಗೆ ನೇರವಾಗಿ ಏನನ್ನೂ ಹೇಳಿಕೊಂಡಿಲ್ಲ.
ಲಾಕ್ಡೌನ್ ಸಮಯದಲ್ಲಿ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಚಾಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್ 11ರಂದು ವಿವಾಹವಾಗಿದ್ದರು. 2023ರಲ್ಲಿ ಧನಶ್ರೀ ಅವರು ಇನ್ಸ್ಟಾಗ್ರಾಂ ಯೂಸರ್ ನೇಮ್ನಿಂದ ‘ಚಾಹಲ್’ ಅನ್ನು ಕೈಬಿಟ್ಟಿದ್ದರು. ನಂತರ ವಿಚ್ಛೇದನ ವದಂತಿಗಳು ಹರಿದಾಡಿದ್ದವು.