ನವದೆಹಲಿ: ದೆಹಲಿಯ ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರು ದೆಹಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದು, ಇಂದು ಮಧ್ಯಾಹ್ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೆ.ಗೌ. ವೀರೇಂದ್ರ ಸಕ್ಸೇನಾ ಪ್ರಮಾಣ ವಚನ ಬೋಧಿಸಿದರು.
32 ವರ್ಷಗಳ ದೆಹಲಿ ವಿಧಾನಸಭಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗುತ್ತಿರುವ ನಾಲ್ಕನೇ ಮಹಿಳೆ ಇವರು. ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಆತಿಶಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು. ಇಂದು ಮಧ್ಯಾಹ್ನದ ಸುಮಾರಿಗೆ ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅವರ ಜತೆ ಆರು ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಿದರು. ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಮಣಿಸಿದ್ದ ಪರ್ವೇಶ್ ವರ್ಮಾ, ನಾಯಕರಾದ ವಿಜೇಂದರ್ ಗುಪ್ತ, ಅಶೀಶ್ ಸೂದ್, ಸತೀಶ್ ಉಪಾಧ್ಯಾಯ ಹಾಗೂ ಶಿಖಾ ರಾಯ್ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೂ ಪಕ್ಷ ಮಹಿಳೆಯೊಬ್ಬರಿಗೆ ಆದ್ಯತೆ ನೀಡಿದೆ.
ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿಲ್ಲ. ಈ ಕೊರತೆಯನ್ನು ನೀಗಿಸಲು ರೇಖಾ ಅವರನ್ನು ದೆಹಲಿಯ ನೂತನ ಸಾರಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ರಾಜಸ್ಥಾನದಲ್ಲಿ 2018ರಲ್ಲಿ ಅಧಿಕಾರ ತ್ಯಜಿಸಿದ ವಸುಂಧರಾ ರಾಜೇ ಸಿಂಧಿಯಾ ನಂತರ ಗುಪ್ತಾ ಅವರು ಪಕ್ಷದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷವು ಪ್ರಸ್ತುತ 19 ರಾಜ್ಯಗಳಲ್ಲಿ ಎನ್ಡಿಎ ಮಿತ್ರಪಕ್ಷಗಳೊಂದಿಗೆ ಅಧಿಕಾರದಲ್ಲಿದೆ. 13 ರಾಜ್ಯಗಳಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ. ಕಳೆದ ವರ್ಷ ಒಡಿಶಾ ಮತ್ತು ರಾಜಸ್ಥಾನದಲ್ಲಿ ಪಕ್ಷವು ಪಾರ್ವತಿ ಪರಿದಾ ಹಾಗೂ ದಿಯಾ ಕುಮಾರಿ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಿಸುವ ಮೂಲಕ ಈ ಅಸಮತೋಲನವನ್ನು ಸರಿಪಡಿಸಲು ಪ್ರಯತ್ನಿಸಿತ್ತು.
ರಾಜ್ಯದಲ್ಲಿ 1993ರಿಂದ 1998ರ ವರೆಗೆ ಬಿಜೆಪಿ ಸರ್ಕಾರವಿತ್ತು. ನಂತರ 26 ವರ್ಷಗಳ ಕಾಲ ಪಕ್ಷಕ್ಕೆ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಪಕ್ಷವು ಅಭೂತಪೂರ್ವ ಜಯ ಗಳಿಸಿತ್ತು.
ಬಿಜೆಪಿ ಆಡಳಿತವಿರುವ ನೆರೆಯ ಹರಿಯಾಣದಲ್ಲಿ ಒಬಿಸಿ (ನಯಾಬ್ ಸಿಂಗ್ ಸೈನಿ), ಉತ್ತರ ಪ್ರದೇಶದಲ್ಲಿ ಠಾಕೂರ್ (ಯೋಗಿ ಆದಿತ್ಯನಾಥ) ಮತ್ತು ರಾಜಸ್ಥಾನದಲ್ಲಿ ಬ್ರಾಹ್ಮಣ (ಭಜನ್ಲಾಲ್ ಶರ್ಮಾ) ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದರೆ, ದೆಹಲಿಯಲ್ಲಿ ವ್ಯಾಪಾರಿ ಸಮುದಾಯದ ಮಹಿಳೆಗೆ ಪ್ರಾತಿನಿಧ್ಯ ನೀಡಿದೆ. ಮಹಿಳಾ ಸಬಲೀಕರಣದ ಹಲವು ಯೋಜನೆಗಳನ್ನು ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಈ ಭರವಸೆಗಳನ್ನು ಪಕ್ಷ ಎಷಟರ ಮಟ್ಟಿಗೆ ಈಡೀರಿಸಲಿದೆ ಎಂದು ಕಾದು ನೋಡಬೇಕಿದೆ.