ಕಾರವಾರ: ಕದಂಬ ನೌಕಾನೆಲೆಯ ಚಿತ್ರಗಳನ್ನು ವಿದೇಶಿ ಬೇಹುಗಾರರಿಗೆ ರವಾನೆ ಮಾಡಿದ್ದ ಆರೋಪದಡಿ ಕಾರವಾರ ತಾಲ್ಲೂಕಿನ ಮುದಗಾದ ವೇತನ್ ತಾಂಡೇಲ, ಅಂಕೋಲಾದ ಅಕ್ಷಯ ನಾಯ್ಕ ಎಂಬ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಂಗಳವಾರ ವಶಕ್ಕೆ ಪಡೆದಿದೆ. ಎರಡು ಪ್ರತ್ಯೇಕ ತಂಡ ರಚಿಸಿಕೊಂಡು ನಸುಕಿನ ಜಾವ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮುದಗಾ ಮತ್ತು ಅಂಕೋಲಾದಲ್ಲಿ ಏಕಕಾಲಕ್ಕೆ ಇಬ್ಬರೂ ಯುವಕರನ್ನು ವಶಕ್ಕೆ ಪಡೆದಿದೆ.
2023ರಲ್ಲಿ ನೌಕಾನೆಲೆಯ ಚಿತ್ರಗಳು ಪಾಕಿಸ್ತಾನದ ವಿದೇಶಿ ಬೇಹುಗಾರರಿಗೆ ರವಾನೆಯಾಗಿದ್ದ ಹಿನ್ನೆಲೆಯಲ್ಲಿ ಎನ್ಐಎ ಹೈದರಾಬಾದ್ ಘಟಕವು ನೌಕಾನೆಲೆಯ ಕೆಲ ಅಧಿಕಾರಿ, ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅದೇ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ತನಿಖಾ ದಳ ನೌಕಾನೆಲೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ವೇತನ್ ಮತ್ತು ಅಕ್ಷಯ ಅವರನ್ನು ವಶಕ್ಕೆ ಪಡೆದಿದೆ ಎಂದು ಎನ್ ಐ ಎ ಮೂಲಗಳು ತಿಳಿಸಿವೆ.
2024ರ ಆ.28 ರಂದು ಈ ಇಬ್ಬರು ಆರೋಪಿಗಳು ಸೇರಿ ಮೂವರನ್ನು ಎನ್ಐಎ ವಿಚಾರಣೆ ನಡೆಸಿ, ನೋಟಿಸ್ ನೀಡಿತ್ತು. ಸೋಮವಾರ ಪುನಃ ಆರು ಜನ ಅಧಿಕಾರಿಗಳನ್ನು ಒಳಗೊಂಡ ತಂಡವು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಹಲವು ತಾಸುಗಳವರೆಗೆ ಮಾಹಿತಿ ಕಲೆ ಹಾಕಿತ್ತು.
ಸದ್ಯ ವೇತನ್ ನನ್ನು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ, ಅಕ್ಷಯನನ್ನು ಅಂಕೋಲಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ಬೇಹುಗಾರರು ನೌಕಾನೆಲೆಯ ಚಿತ್ರಗಳನ್ನು ಇಬ್ಬರಿಂದ ಸಂಗ್ರಹಿಸಿದ್ದರು. ಅದಕ್ಕಾಗಿ ಅವರಿಗೆ ಹಣವನ್ನೂ ಪಾವತಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.